Advertisement

ಕೋವಿಡ್‌ ಚಿಕಿತ್ಸೆಗೆ ಕ್ರಮ ಕೈಗೊಳ್ಳಲು ಸಚಿವರ ಸೂಚನೆ

01:58 PM Aug 02, 2020 | Suhan S |

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗೆ ಮೂಲ ಸೌಲಭ್ಯದ ಕೊರತೆ ಮತ್ತು ವೈದ್ಯರಿಂದ ನಿರ್ಲಕ್ಷ್ಯ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ, ಕೋವಿಡ್‌ ಮತ್ತು ನಾನ್‌ ಕೋವಿಡ್‌ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಶನಿವಾರ ಸಿಮ್ಸ್‌ ಸಭಾಂಗಣದಲ್ಲಿ ಮೆಗ್ಗಾನ್‌ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಆಡಳಿತ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು.

Advertisement

ಪ್ರಸ್ತುತ ದಿನಂಪ್ರತಿ ಕೋವಿಡ್‌ ರೋಗಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಗತ್ಯವಿರುವ ಕ್ರಮಗಳ ಬಗ್ಗೆ ವೈದ್ಯರಿಂದ ಸಲಹೆ- ಸೂಚನೆಗಳನ್ನು ಕೇಳಲಾಯಿತು. ಈ ಸಂದರ್ಭದಲ್ಲಿ ಡಿ- ಗ್ರೂಪ್‌ ಸಿಬ್ಬಂದಿ ಮತ್ತು ಸ್ಟಾಫ್‌ ನರ್ಸ್‌ಗಳು, ವೆಂಟಿಲೇಟರ್‌ಗಳ ಕೊರತೆ, ಆಕ್ಸಿಜನ್‌ ಬೆಡ್‌ ಗಳ ಕೊರತೆ ಮೊದಲಾದವುಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ನಾನ್‌ ಕೋವಿಡ್‌ ವಾರ್ಡ್‌ನಲ್ಲಿ ಕನಿಷ್ಠ ವಾರಕ್ಕೆ ಎರಡು ಪಾಸಿಟಿವ್‌ ಕೇಸ್‌ ಬಂದಾಗ ಆಗುವ ಸಮಸ್ಯೆಗಳು ಮತ್ತು ಕೋವಿಡ್‌ ವಾರಿಯರ್ಸ್‌ಗಳಾದ ವೈದ್ಯರು ಮತ್ತು ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿಗೆ ಪಾಸಿಟಿವ್‌ ಬಂದಾಗ ಚಿಕಿತ್ಸೆ ಪಡೆಯಲು ಪ್ರತ್ಯೇಕ ವಾರ್ಡ್‌ ಅವಶ್ಯಕತೆ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಆಸ್ಪತ್ರೆ ಸಲಹಾ ಸಮಿತಿ ಸದಸ್ಯ ಡಾ| ಗೌತಮ್‌ ಮಾತನಾಡಿ, 24 ಗಂಟೆ ಫಾರ್ಮಸಿ ಸೇವೆ ಸದ್ಯಕ್ಕೆ ಲಭ್ಯವಾಗುತ್ತಿಲ್ಲ. ಕೋವಿಡ್‌ವಾರಿಯರ್ಸ್‌ಗೆ ಪ್ರತ್ಯೇಕ ವಾರ್ಡ್‌ ಮೀಸಲಿಡಬೇಕು. ನಾನ್‌ ಕೋವಿಡ್‌ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹೆಚ್ಚುವರಿ ಹಾಸಿಗೆ ಸೌಲಭ್ಯ ಬೇಕಿದೆ. ಅಗತ್ಯವಾದ ಸಿಬ್ಬಂದಿ ನೇಮಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಮ್ಸ್‌ ಆಡಳಿತ, ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಕೋವಿಡ್‌ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಹಲವಾರು ದೂರು ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿ ದೂರನ್ನು ಶಾಸಕರೇ ಬಗೆಹರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ವೈದ್ಯರು ತಮ್ಮ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಕೋವಿಡ್‌ ರೋಗಿಗಳು ಇರುವ ವಾರ್ಡ್‌ಗಳಲ್ಲಿ ಸಲಹಾ ಪೆಟ್ಟಿಗೆ ಸ್ಥಾಪಿಸಿ ಅದರಲ್ಲಿ ರೋಗಿಗಳ ಹೆಸರು, ಸಮಸ್ಯೆ, ಮೊಬೈಲ್‌ ನಂಬರ್‌ ದಾಖಲಿಸಿ ಆ ಪೆಟ್ಟಿಗೆಗೆ ಹಾಕುವಂತೆ ಸೂಚಿಸಬೇಕು. ಆ ಪೆಟ್ಟಿಗೆಯಲ್ಲಿ ಸಲಹೆಗಳನ್ನು ಪ್ರತಿನಿತ್ಯ ಸಿಮ್ಸ್‌ ಆಡಳಿತ ಪರಿಶೀಲಿಸಿ ದೂರುಗಳ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಸಂಬಂಧಪಟ್ಟ ರೋಗಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಆಗ ಈ ಅಪಪ್ರಚಾರ ಕಡಿಮೆಯಾಗಬಹುದು. ರೋಗಿಗೂ ಸಮಾಧಾನವಾಗಬಹುದು. ಅದನ್ನು ಮೀರಿ ಏನಾದರೂ ಲೋಪಗಳಿದ್ದಲ್ಲಿ ಸರಿಪಡಿಸುವಲ್ಲಿ ಕೂಡಲೇ ಕ್ರಮ ವಹಿಸಬೇಕು. ಈಗಾಗಲೇ ಇನ್ನೂ 450 ಬೆಡ್‌ಗಳ ವ್ಯವಸ್ಥೆ ಕೋವಿಡ್‌ ಮತ್ತು ನಾನ್‌ ಕೋವಿಡ್‌ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದ್ದು, ಅಗತ್ಯವಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಬೆಡ್‌ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಸುಬ್ಬಯ್ಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯಲ್ಲಿ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಾವಿನ ಸಂಖ್ಯೆ ಏರುತ್ತಿರುವುದಕ್ಕೆ ಕಾರಣವೇನೆಂದು ವೈದ್ಯರಿಗೆ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌

Advertisement

ಪ್ರತಿಕ್ರಿಯೆ ನೀಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಸ್ಯಾಂಪಲ್‌ ಟೆಸ್ಟ್‌ ಆಗುತ್ತಿದ್ದು, ಪಾಸಿಟಿವ್‌ ಸಂಖ್ಯೆಗೆ ಹೋಲಿಸಿದರೆ, ಸಾವಿನ ಪ್ರಮಾಣ ಬೇರೆ ಜಿಲ್ಲೆಗಳಿಗಿಂತ ಕಡಿಮೆ ಇದ್ದು, ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗುತ್ತಿರುವ ಏರಿಯಾಗಳಲ್ಲಿ ಎರಡೆರಡು ಆಂಟಿಜೆನ್ಸ್‌ ಟೆಸ್ಟ್‌ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಾಸಿಟಿವ್‌ ಕೇಸ್‌ ಸಂಖ್ಯೆ ಹೆಚ್ಚಳವಾದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಜಿಲ್ಲಾಧಿಕಾರಿ ಸಚಿವರಿಗೆ ವಿವರಿಸಿದರು. ಡಿ.ಎಸ್‌. ಅರುಣ್‌, ಸಿಇಒ ಎಂ.ಎಲ್‌. ವೈಶಾಲಿ, ಎಡಿಸಿ ಅನುರಾಧಾ, ಸಿಮ್ಸ್‌ ನಿರ್ದೇಶಕ ಡಾ| ಸಿದ್ದಪ್ಪ, ವೈದ್ಯಕೀಯ ಅಧಿಧೀಕ್ಷಕ ಡಾ| ಶ್ರೀಧರ್‌, ಜಿಲ್ಲಾ ಸರ್ಜನ್‌ ಡಾ| ರಘುನಂದನ್‌, ಆಸ್ಪತ್ರೆ ಸಲಹಾ ಸಮಿತಿಯ ಡಾ| ಗೌತಮ್‌, ಡಾ| ವಾಣಿ ಕೋರಿ, ದಿವಾಕರ್‌ ಶೆಟ್ಟಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next