Advertisement

ಸಿಎಂಗೆ ಬಿಸಿತುಪ್ಪವಾದ ರೇವಣ್ಣ ಪಟ್ಟು

12:30 AM Jan 12, 2019 | Team Udayavani |

ಬೆಂಗಳೂರು:ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್‌ ನಾಯಕರ ವಿರುದ್ಧ ಆಡುತ್ತಿರುವ ಮಾತುಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಬಿಸಿತುಪ್ಪವಾಗಿರುವ ಜತೆಗೆ ರಾಜಕೀಯ ವಲಯಗಳಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ.

Advertisement

ಎಚ್‌.ಡಿ.ರೇವಣ್ಣ  ಅವರ ಆಕ್ರೋಶದ  ಮಾತುಗಳೇ ಬಿಜೆಪಿ ಪಾಲಿಗೆ ಆಶಾದಾಯಕವಾಗಿದ್ದು, ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಕಂಟಕ ತರುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಅವಕಾಶ ತಾನಾಗಿಯೇ ಬಂದರೆ ಒಂದು ಕೈ ನೋಡುವುದು ಇದರ ಹಿಂದಿನ ಮರ್ಮವಾಗಿದೆ.

ಹಾಸನ ವಿಚಾರದಲ್ಲಿ  ಎಚ್‌.ಡಿ.ರೇವಣ್ಣ  ಪಟ್ಟು ಸಡಿಲಿಸದೆ ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಕೆಆರ್‌ಡಿಎಲ್‌ಗೆ ಕಾಂಗ್ರೆಸ್‌ ಶಾಸಕರನ್ನು ಸುತಾರಾಂ ನೇಮಿಸಬಾರದು. ಹಾಸನದ ವಿಧಾನಪರಿಷತ್‌ ಸದಸ್ಯ ಗೋಪಾಲಸ್ವಾಮಿಯನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿಯೂ ಮಾಡಬಾರದು. ಹಾಸನ ಜಿಲ್ಲೆಯ ವರ್ಗಾವಣೆ ಸೇರಿದಂತೆ ಇತರೆ ನೇಮಕಾತಿಗಳಲ್ಲಿ ತಮ್ಮ ಮಾತೇ ನಡೆಯಬೇಕು ಎಂದು ಪಟ್ಟು ಹಿಡಿದಿರುವುದು ಒಂದು ರೀತಿಯ ರಾಜಕೀಯ ತಂತ್ರಗಾರಿಕೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರನ್ನು ತುಳಿಯಲಾಗುತ್ತಿದೆ. ಕಾಂಗ್ರೆಸ್‌ ಮುಖಂಡರ ಶಿಫಾರಸ್ಸುಗಳಿಗೆ ಬೆಲೆ ನೀಡುತ್ತಿಲ್ಲ ಎಂಬ ಆಕ್ರೋಶದ ನಡುವೆಯೂ ರೇವಣ್ಣ ಅವರು ತಮ್ಮ ಹಿಡಿತ ಸಡಿಲ ಮಾಡುತ್ತಿಲ್ಲ. ಯಾರು ಏನೇ ಹೇಳಿದರೂ ನಮ್ಮ ಜಿಲ್ಲೆಯ ವಿಚಾರಕ್ಕೆ ಬರಬೇಡಿ, ನಮ್ಮ ಜಿಲ್ಲೆಯ ಶಾಸಕರ ಹಿತಾಸಕ್ತಿ ನನಗೆ ಮುಖ್ಯ ಎಂದೇ ಪ್ರತಿಪಾದನೆ ಮಾಡುತ್ತಿದ್ದಾರೆ.

ಹೀಗಾಗಿ, ಕಾಂಗ್ರೆಸ್‌ ರೇವಣ್ಣ  ವಿಚಾರದಲ್ಲಿ ಒಂದೊಮ್ಮೆ ತೀವ್ರ ವಿರೋಧಕ್ಕೆ ಮುಂದಾದರೆ ಬೇರೇಯೇ ಸ್ವರೂಪ ಪಡೆಯಬಹುದು. ರೇವಣ್ಣ  ಅವರು ಹಾಸನ ಜಿಲ್ಲೆಯ ಜೆಡಿಎಸ್‌ ಶಾಸಕರ ಹಿತ ಕಾಯುವ ಸಲುವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದೂ ಹೇಳಲಾಗುತ್ತಿದೆ.

Advertisement

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು  ತಮ್ಮ ಬೆಂಬಲಿಗರಿಗೆ  ಸ್ಥಾನಮಾನ ದೊರಕಿಸಿಕೊಡುವಲ್ಲಿ  ಪಟ್ಟು ಬಿಡುತ್ತಿಲ್ಲ. ಸಂಪುಟ ಪುನಾರಚನೆಯಿಂದ ಹಿಡಿದು ನಿಗಮ ಮಂಡಳಿ ನೇಮಕದವರೆಗೆ ತಮ್ಮ ಕೈ ಮೇಲುಗೈ ಆಗುವಂತೆ ನೋಡಿಕೊಂಡಿದ್ದಾರೆ.

ಮತ್ತೂಂದೆಡೆ ಕಾಂಗ್ರೆಸ್‌ನ ಆಂತರಿಕ ಒತ್ತಡಗಳಿಂದ ಮುಖ್ಯಮಂತ್ರಿ ಚ್‌.ಡಿ.ಕುಮಾರಸ್ವಾಮಿಯವರು ಬೇಸರಗೊಂಡಿದ್ದಾರೆ . ಮುಖ್ಯಮಂತ್ರಿಯವರು ಸಮಾಧಾನವಾಗಿಲ್ಲ ಎಂಬುದು ಅವರ ಆಪ್ತರ ಅನಿಸಿಕೆ.  ಜೆಡಿಎಲ್‌ಪಿ ಸಭೆಯಲ್ಲೂ  ಈ ಕುರಿತು ಅಳಲು ತೋಡಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಮಹಾಘಟ್‌ಬಂಧನ್‌ ಬಲಿಷ್ಠಗೊಳಿಸುವ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುಂದುವರಿಯಬೇಕು ಎಂಬ ಆಸೆಯಿದೆ. ಹೀಗಾಗಿಯೇ ಎಚ್‌.ಡಿ.ರೇವಣ್ಣ ಸೇರಿದಂತೆ ಯಾವ ಸಚಿವರೂ ಬಹಿರಂಗವಾಗಿ ಮಾತನಾಡಿದಂತೆ ತಾಕೀತು ಮಾಡಿದ್ದಾರೆ. ಅದರಂತೆ ಎಚ್‌.ಡಿ.ರೇವಣ್ಣ ಅವರೂ ನಮ್ಮ ಹೈಕಮಾಂಡ್‌ ಹೇಳಿದೆ, ನಾನು ಮಾತನಾಡಲ್ಲ ಎಂದಿದ್ದಾರೆ. ಆದರೆ, ಆಂತರಿಕ  ಪರಿಸ್ಥಿತಿ ಬೇರೆಯೇ ಇದೆ ಎಂದೂ ಹೇಳಲಾಗಿದೆ.

ಈ ಎಲ್ಲ ಬೆಳವಣಿಗೆಗಳು ಸಂಕ್ರಾಂತಿ ನಂತರದ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಾಗಿ ಕಾಯುತ್ತಿರುವ ಬಿಜೆಪಿಗೆ ವರದಾನವಾಗಲಿದೆಯೇ ಎಂಬುದು ಕಾದು ನೋಡಬೇಕಾಗಿದೆ.

ಎಚ್‌.ಡಿ.ರೇವಣ್ಣ  ಸೆಳೆಯುತ್ತಾ ಬಿಜೆಪಿ
ಸಂಪುಟ ಪುನಾರಚನೆ,ನಿಗಮ-ಮಂಡಳಿ ಹಾಗೂ ಇತರೆ ನೇಮಕಾತಿಗಳ ನಂತರದ ವಿದ್ಯಮಾನಗಳು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಒಂದಷ್ಟು ಕಂದಕವಂತೂ ಸೃಷ್ಟಿಯಾಗಿವೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿಯಲ್ಲಿ ಆಶಾಭಾವನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಎರಡೂ ಪಕ್ಷಗಳಲ್ಲಿನ ವ್ಯತ್ಯಾಸಗಳು ಸರ್ಕಾರಕ್ಕೆ ಕುತ್ತು ತರುವ ಹಂತ ತಲುಪಿದರೆ ಎಚ್‌.ಡಿ.ರೇವಣ್ಣ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಬಹುದೇ? ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡುವ “ಆಫ‌ರ್‌’ ನೀಡಬಹುದೇ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next