Advertisement

ಕರ್ನಾಟಕ ಸಂಘ ಮುಂಬಯಿ ಕಚೇರಿಗೆ ಸಚಿವ ಎಚ್‌.ಆಂಜನೇಯ 

04:42 PM Dec 18, 2017 | |

ಮುಂಬಯಿ: ಮುಂಬಯಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪ್ರತಿಷ್ಠಿತ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘ ಮುಂಬಯಿ ಕಚೇರಿಗೆ ಡಿ. 17ರಂದು ಅಪರಾಹ್ನ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಮತ್ತು ಶ್ರೀಮದ್‌ ಉಜ್ಜುನಿ ಸದ್ಧರ್ಮ ಸಿಂಹಾಸನಾಧೀಶ  ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಭೇಟಿ ನೀಡಿದರು.

Advertisement

ಈ ಸಂದರ್ಭದಲ್ಲಿ ಸಚಿವರನ್ನು ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ಮನೋಹರ್‌ ಎಂ. ಕೋರಿ ಸ್ವಾಗತಿಸಿ, ಪುಷ್ಪಗುತ್ಛ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಡಾ| ಶಿವಮೂರ್ತಿ ಸ್ವಾಮೀಜಿಯವರು, ಇಲ್ಲಿ ಕರ್ನಾಟಕ ಸಂಘವು ಕನ್ನಡಿಗ  ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ನೀವು ನಿಜವಾದ ಕನ್ನಡಿಗರು. ಒಳನಾಡ ನಾಯಕರ ನಡವಳಿಕೆಯಿಂದ ಕನ್ನಡದ ಪ್ರಾಬಲ್ಯತೆ ಕ್ಷೀಣಿಸುತ್ತಿದೆ. ತಮ್ಮೆಲ್ಲರ ನಿರೀಕ್ಷಿತ ಕರ್ನಾಟಕ ಸಂಘದ ಸಭಾಗೃಹದ ಕಾಮಗಾರಿ ಶೀಘ್ರವೇ ಆರಂಭಗೊಂಡು ಅಲ್ಪಾವಧಿಯಲ್ಲೇ ಪೂರ್ಣಗೊಳ್ಳಲಿ ಎಂದು ಹರಸಿದರು.

ಹೊರನಾಡ ಕನ್ನಡಿಗರಾಗಿದ್ದೂ ಕರ್ಮಭೂಮಿ ಮರಾಠಿ ನೆಲದಲ್ಲೂ ಈ ಸಂಸ್ಥೆಯನ್ನು ಸುಮಾರು ಎಂಟೂವರೆ ದಶಕಗಳಿಂದ ಹೆಮ್ಮರವಾಗಿ ಬೆಳೆಸಿ ಕನ್ನಡಾಂಬೆಯ ಸೇವೆಯೊಂದಿಗೆ ಕರ್ನಾಟಕದ ಜನತೆಗೆ ನೆರಳಾಗಿರುವ ಸಂಘದ ಬಗ್ಗೆ ಸಚಿವ ಆಂಜನೇಯ ಹರ್ಷ ವ್ಯಕ್ತಪಡಿಸಿದರು. ಸಂಘವು ಹಮ್ಮಿಕೊಂಡಿರುವ ಬೃಹತ್‌ ಯೋಜನೆಗೆ ಕರ್ನಾಟಕ ಸರಕಾರದ ವತಿಯಿಂದ ಆರ್ಥಿಕ ನೆರವು ನೀಡುವ ಬಗ್ಗೆ ಭರವಸೆ ನೀಡಿದರು.

ಮುಂಬಯಿಯಲ್ಲಿ ಕನ್ನಡ ಒಂದೇ ಎಲ್ಲರ ಜೀವಾಳವಾಗಿದೆ.   ಇಲ್ಲಿನ ಕನ್ನಡಿಗರ ಸಾಧನೆ ಅನುಕರಣೀಯವಾಗಿದೆ.  ಆದ್ದರಿಂದ ತವರು ಮನೆಯಿಂದ ನೆರವಿನ ಅವಶ್ಯಕತೆಯಿದೆ. ಅಂಬೇಡ್ಕರ್‌ ಅವರಿಗೂ ಈ ಸಂಘಕ್ಕೂ ಬಹಳ ನಿಕಟ ಸಂಬಂಧವಿದೆ. ಮುಂಬಯಿ ಕನ್ನಡಿಗರ ಗೋಳು ನಿವಾರಣೆಯಾಗಬೇಕಾಗಿದೆ. ಸರಕಾರದಿಂದ ಅಂತಲ್ಲ ನಮ್ಮ ತವರೂರ ಕೊಡುಗೆಯ ಅನುದಾನ ಬಯಸುತ್ತಿದ್ದೇವೆ ಎಂದು ಡಾ| ಬಿ. ಆರ್‌.  ಮಂಜುನಾಥ್‌ ಅವರು ನುಡಿದರು.

Advertisement

ಅವಿನಾಶ್‌ ಆರ್ಯ, ಓಂದಾಸ್‌ ಕಣ್ಣಂಗಾರ್‌, ಡಾ| ಎಸ್‌. ಕೆ. ಭವಾನಿ, ಮೋಹನ್‌ ಮಾರ್ನಾಡ್‌, ಅಶೋಕ್‌ ಎಸ್‌. ಸುವರ್ಣ, ಕೋಶಾಧಿಕಾರಿ ನ್ಯಾಯವಾದಿ  ಎಂ. ಡಿ. ರಾವ್‌, ಬಿ. ಜಿ. ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು. ಡಾ| ಮಮತಾ ರಾವ್‌, ಸುಶೀಲಾ ಎಸ್‌. ದೇವಾಡಿಗ, ಯಶೋದಾ ಶೆಟ್ಟಿ ಅವರು ಶ್ರೀಗಳಿಗೆ ಆರತಿ ಬೆಳಗಿ ಬರಮಾಡಿಕೊಂಡರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ   ಡಾ| ಭರತ್‌ ಕುಮಾರ್‌ ಪೊಲಿಪು ಅವರು  ವಂದಿಸಿದರು.    

ಚಿತ್ರ- ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next