Advertisement

ಜನತೆಗೆ ಸೌಕರ್ಯ ಕಲ್ಪಿಸಲು ಸಚಿವರು ವಿಫ‌ಲ: ಪುಟ್ಟಸ್ವಾಮಿ

12:12 PM Aug 29, 2017 | Team Udayavani |

ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಬ್ಬರೂ ಶಾಸಕರಾಗಿ ಪ್ರತಿನಿಧಿಸುವ ಪಟ್ಟಣಕ್ಕೆ ಸಮರ್ಪಕವಾಗಿ ಮೂಲಭೂತ ಸೌಕರ್ಯ ಕಲ್ಪಿಸದೆ ತಾಲೂಕು ಆಡಳಿತವನ್ನು ದುರ್ಬಲ ಸ್ಥಿತಿಯಲ್ಲಿಟ್ಟಿದ್ದಾರೆಂದು ಬಿಎಸ್ಪಿ ಹಿರಿಯ ಮುಖಂಡ ಹಾಗೂ ಕ್ಷೇತ್ರ ಉಸ್ತುವಾರಿ ಬಿ.ಆರ್‌.ಪುಟ್ಟಸ್ವಾಮಿ ದೂರಿದರು. ಪಟ್ಟಣದ ಜೋಡಿ ರಸ್ತೆಯ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಪರಿವರ್ತಿತ ಪುರಸಭೆಯಲ್ಲಿ ವಿಲೀನಗೊಂಡ ಬಹುತೇಕ ಪಟ್ಟಣ ಪ್ರದೇಶಗಳ ನಿವಾಸಿಗಳಿಗೆ ಮೂಲಭೂತ ಸೌಕರ್ಯವನ್ನೇ ಕಲ್ಪಿಸಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲಾರದಂತೆ ಅವೈಜಾnನಿಕವಾಗಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದ್ದು ತಹಶೀಲ್ದಾರ್‌ ಬಿ.ಶಂಕರಯ್ಯ ಆತ್ಮಹತ್ಯೆ ಪ್ರಕರಣದ ಸತ್ಯಾಂಶವನ್ನು ಜನರಿಗೆ ತಿಳಿಸಬೇಕೆಂದರು.

ರಾಜ್ಯಮಟ್ಟದ ಅಭಿವೃದ್ಧಿಗಳ ಯೋಜನೆ ಈ ಭಾಗಕ್ಕೆ ಅಪ್ರಸ್ತುತವಾಗಿದ್ದು, ಕಾಯಂ ತಹಶೀಲ್ದಾರ್‌ರನ್ನು ನಿಯೋಜಿಸದ್ದರಿಂದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಯಾವೊಂದು  ಕೆಲಸ ಕಾರ್ಯಗಳು ಶೀಘ್ರವಾಗಿ ಆಗುತ್ತಿಲ್ಲ. ಆರ್‌ಟಿಸಿ ಮತ್ತು ಆಧಾರ್‌ ನೊಂದಣಿಗೆ ದಿನಗಟ್ಟಲೆ ಕಾಯಬೇಕು. ಪಡಿತರ ಚೀಟಿ ವಿತರಣೆಯಂತೂ ಆಗಿಲ್ಲ ಎಂದು ಹೇಳಿದರು.

ಆಧುನೀಕರಣಗೊಂಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯಕೀಯ ಸೇವೆ ಮರೀಚಿಕೆಯಾಗಿದೆ. ಖಾತೆ ಮಾಡಲಿಕ್ಕೆ ಅಧಿಕ ದರದ ಶುಲ್ಕ ಹಾಗೂ ಲಂಚ ಪಡೆಯುವ ಪುರಸಭೆ ಅಧಿಕಾರಿಗಳು ಜನರಿಗೆ ಕುಡಿಯುವ ನೀರನ್ನೇ ಕೊಡುತ್ತಿಲ್ಲ. ಇಂತಹ ಸ್ಥಳೀಯ ಸಮಸ್ಯೆಗಳನ್ನು ಸಿಎಂ, ಸಚಿವರು ಪರಿಹರಿಸಬೇಕು. ಇಲ್ಲದಿದ್ದರೆ ಬಿಎಸ್ಪಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.

ರೈತರಿಗೆ ಪರಿಹಾರ ಕೊಡಿ: ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ಪ್ರಭುಸ್ವಾಮಿ, ಸುಪ್ರೀಂ ಕೋರ್ಟ್‌ನ ನೆಪದಲ್ಲಿ ರಾಜ್ಯ ಅಣೆಕಟ್ಟೆಗಳ ನೀರನ್ನು ತಮಿಳುನಾಡಿಗೆ ರಾಜ್ಯ ಸರ್ಕಾರ ಸರಾಗವಾಗಿ ಹರಿಯಲು ಬಿಟ್ಟಿದೆ. ಶೇ.5 ರಷ್ಟು ಫ‌ಸಲನ್ನು ಬೆಳೆಯಲಾಗದೆ ಕೈ ಚೆಲ್ಲಿ ಕುಳಿತಿರುವ ನಾಡಿನ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ., ಪರಿಹಾರ ನೀಡಬೇಕೆಂದರು.

Advertisement

ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಕ್ಷೇತ್ರಾಧ್ಯಕ್ಷ ಬಿ.ಸೀಹಳ್ಳಿ ಕೆ.ರಾಜೂಗೌಡ, ಜಿಲ್ಲಾ ಕಾರ್ಯದರ್ಶಿ ಬಿ.ಮಹದೇವಸ್ವಾಮಿ, ತಾಪಂ ಮಾಜಿ ಸದಸ್ಯ ಕುಕ್ಕೂರು ಪುಟ್ಟಣ್ಣ, ಮುಖಂಡರಾದ ಪಿ.ನಾಗರಾಜು, ಚೆನ್ನಪ್ಪ, ಚೌಹಳ್ಳಿ ಶಿವಮೂರ್ತಿ, ಶಾಂತರಾಜು, ಅಂಕನಹಳ್ಳಿ ಪುಟ್ಟರಾಜು, ಗೋವಿಂದ್‌, ಮಹದೇವಾಚಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next