Advertisement

ರೇಷ್ಮೆ ಗೂಡಿನ ಧಾರಣೆ ಕುಸಿಯಲು ಬಿಡಲ್ಲ: ಸಚಿವ ಡಾ.ನಾರಾಯಣಗೌಡ

02:50 PM Apr 26, 2022 | Team Udayavani |

ರಾಮನಗರ: ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಡಾ.ನಾರಾಯಣಗೌಡ ಸೋಮವಾರ ನಗರದ ಇಲ್ಲಿನ ರೇಷ್ಮೆ ಮಾರುಕಟ್ಟೆಗೆ ದಿಢೀರ್‌ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

Advertisement

ತಮ್ಮ ಭೇಟಿಯ ವೇಳೆ ಸಚಿವರು ಮಾರುಕಟ್ಟೆಯಲ್ಲಿದ್ದ ರೇಷ್ಮೆ ಬೆಳೆಗಾರರು, ರೀಲರ್‌ಗಳ ಬಳಿ ವಿವಿಧ ವಿಚಾರಗಳಲ್ಲಿ ಮಾಹಿತಿ ಸಂಗ್ರಹಿಸಿದರು. ಹರಾಜು ಮೊತ್ತದ ಪಾವತಿ, ಗೂಡಿನ ತೂದ ವ್ಯವಸ್ಥೆ ಇತ್ಯಾದಿ ಬಗ್ಗೆ ಸ್ವತಃ ಅಧಿಕಾರಿಗಳಿಂದ ಮಾಹಿತಿ ಪಡೆದರು.

ರೇಷ್ಮೆ ಬೆಳೆಗಾರರು ಮತ್ತು ರೀಲರ್‌ಗಳ ಬಳಿಯೂ ಇದೇ ವಿಚಾರದಲ್ಲಿ ಮಾತನಾಡಿದರು. ಸ್ವತಃ ವ್ಯವಸ್ಥೆ ಪರಿಶೀಲಿಸಿದರು. ಈ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತಾವು ಸಹ ರೈತರ ಮಗನಾಗಿದ್ದು, ತಾವು ಚಿಕ್ಕವನಿದ್ದಾಗ, ತಮ್ಮ ಕುಟುಂಬ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಿದರು.

ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿವಿದೆ. ಸಮಸ್ಯೆಗಳ ಕಾರಣ ರೈತರಿಗೆ ಅನ್ಯಾಯವಾಗಲು ತಾವು ಬಿಡುವುದಿಲ್ಲ ಎಂದರು.

ಕಠಿಣ ಕ್ರಮದ ಎಚ್ಚರಿಕೆ: ಹರಾಜು ಮೊತ್ತ ಪಾವತಿಗೆ ವಿಳಂಬವಾಗುತ್ತಿರುವ ಬಗ್ಗೆ ರೈತರು ದೂರಿದರು. ರೇಷ್ಮೆ ಗೂಡು ಮಾರಾಟ ಮಾಡಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಈ ವಿಚಾರದಲ್ಲಿ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು. ರೇಷ್ಮೆ ಗೂಡು ತೂಕ ಹಾಕಿದ ಕೂಡಲೇ ಹರಾಜು ಮೊತ್ತ ಪಾವತಿಯಾಗಬೇಕು ಎಂದು ಸೂಚನೆ ಕೊಟ್ಟರು. ಅಧಿಕಾರಿಗಳು ಮತ್ತು ರೀಲರ್‌ಗಳ ನಡುವೆ ಹೊಂದಾಣಿಕೆ ಕಡಿಮೆ ಇರುವ ಕಾರಣ ಹರಾಜು ಮೊತ್ತ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂಬ ದೂರು ಬಂದರೆ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.

Advertisement

ರೇಷ್ಮೆ ಬೆಲೆ ಕುಸಿಯಲು ಅವಕಾಶ ಕೊಡಲ್ಲ: ರೇಷ್ಮೆ ಗೂಡಿಗೆ ಸದ್ಯ ಉತ್ತಮ ಬೆಲೆ ಸಿಗುತ್ತಿದೆ. ದಾಖಲೆ ಮಟ್ಟದಲ್ಲಿ ಬೆಲೆ ಸಿಗುತ್ತಿದೆ. ರೇಷ್ಮೆ ಬೆಳೆಗಾರರು ಖುಷಿಯಾಗಿದ್ದಾರೆ. ಇದು ಹೀಗೆ ಮುಂದುವರೆಯ ಬೇಕು. ಒಂದು ಕೆ.ಜಿ. ರೇಷ್ಮೆಗೂಡು 600 ರೂ.ಗಿಂತ ಕಡಿಮೆಯಾಗಲು ಬಿಡುವುದಿಲ್ಲ ಎಂದು ರೇಷ್ಮೆ ಬೆಳೆಗಾರರಿಗೆ ಸಚಿವ ಡಾ.ನಾರಾಯಣಗೌಡ ಅವರು ಅಭಯ ನೀಡಿದರು.

ಹೈಟೆಕ್‌ ರೇಷ್ಮೆ ಮಾರುಕಟ್ಟೆ: ಶೀಘ್ರದಲ್ಲೇ ಟೆಂಡರ್‌ ಆಹ್ವಾನ: ರಾಮನಗರ ಮತ್ತು ಚನ್ನಪಟ್ಟಣ ಗಡಿಯಲ್ಲಿ ಹೈಟೆಕ್‌ ರೇಷ್ಮೆ ಗೂಡು ಮಾರುಕಟ್ಟೆಯ ನಿರ್ಮಾಣಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ. ಇನ್ನು ಎರಡು ತಿಂಗಳಲ್ಲಿ ಭೂಮಿ ಪೂಜೆ ನಡೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿ ದರು. ಈ ವೇಳೆ ಗೂಡು ಮಾರುಕಟ್ಟೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next