Advertisement

ಮಲ್ಲೇಶ್ವರ ವ್ಯಾಪ್ತಿಯಲ್ಲಿ ಸಚಿವ ಡಾ.ಅಶ್ವತ್ಥ ನಾರಾಯಣ ಪಾದಯಾತ್ರೆ

04:02 PM Jul 10, 2022 | Team Udayavani |

ಬೆಂಗಳೂರು: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ತಾವು ಪ್ರತಿನಿಧಿಸುವ ಮಲ್ಲೇಶ್ವರ ಕ್ಷೇತ್ರದ ಗಾಯತ್ರಿನಗರ, ಹೊಂಬೇಗೌಡ ಕಾಲೇಜು, ಎಂಕೆಕೆ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಭಾನುವಾರ ಪಾದಯಾತ್ರೆ ನಡೆಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

Advertisement

ಈ ಪ್ರದೇಶಗಳ ಬಡಾವಣೆಗಳಿಗೆ ತೆರಳಿ ಹೆಜ್ಜೆ ಹಾಕಿದ ಅವರು, ಜನರನ್ನು ಖುದ್ದಾಗಿ ಕಂಡು, ಆಗಬೇಕಾಗಿರುವ ಕೆಲಸಗಳು ಏನೆಂದು ವಿಚಾರಿಸಿದರು. ಮುಖ್ಯವಾಗಿ ರಸ್ತೆ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ, ಬೀದಿ ದೀಪ ಸೌಕರ್ಯ, ಮಕ್ಕಳ ಶಾಲೆ ವ್ಯವಸ್ಥೆ ಬಗ್ಗೆ ಕೇಳಿ ಮಾಹಿತಿ ಪಡೆದುಕೊಂಡರು. ಹಾಗೆಯೇ, ಅಂಗಡಿ ಮುಂಗಟ್ಟುಗಳ ಮುಂದೆ ಸಾಗಿ ವ್ಯಾಪಾರಿಗಳನ್ನು ಮಾತನಾಡಿಸಿ, ಆಯಾ ಪ್ರದೇಶದಲ್ಲಿ ಯಾವ ಕೆಲಸಗಳನ್ನು ಮಾಡಿಸುವ ಅಗತ್ಯವಿದೆ ಎಂಬುದನ್ನು ತಿಳಿಸುವಂತೆ ಕೋರಿದರು.

ಜಲಮಂಡಳಿ ಕೊಳವೆಗಳನ್ನು ಬದಲಾಯಿಸಿ ನೀರು ಸೋರಿಕೆ ತಡೆಯಲು ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಜತೆಗೆ, ಬಡಾವಣೆಯ ಎಲ್ಲ ಮನೆಗಳಿಗೂ ಕಾವೇರಿ ನೀರನ್ನು ಒದಗಿಸಲು ಇದರಿಂದ ಸಾಧ್ಯವಾಗುತ್ತದೆ. ಈ ಕೆಲಸ ಆದಷ್ಟು ಬೇಗ ಮುಗಿಯಲಿದ್ದು ಕೊಳವೆ ಬಾವಿ ನೀರಿನ ಅವಲಂಬನೆಯನ್ನು ತಪ್ಪಿಸುತ್ತದೆ ಎಂದು ಅವರು ತಿಳಿಸಿದರು.

ಮಲ್ಲೇಶ್ವರ ಕ್ಷೇತ್ರದಲ್ಲಿ ಮುಂದಿನ 30 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಶಿಥಿಲ ಮ್ಯಾನ್ ಹೋಲ್ ಗಳ ಬದಲಾವಣೆಯನ್ನೂ ಕೈಗೊಳ್ಳಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುವಂತೆ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ ಎಂದರು.

ಅಗೆದಿದ್ದ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಿ ಈಗಾಗಲೇ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಇನ್ನು ಕೆಲವೆಡೆ ಕಾಮಗಾರಿಗಳು ನಡೆಯುತ್ತಿದ್ದು, ಅಲ್ಲೆಲ್ಲಾ ಶೀಘ್ರವೇ ಕೆಲಸ ಮುಗಿಸಿ ಡಾಂಬರೀಕರಣ ಮಾಡಲಾಗುತ್ತುದೆ ಎಂದು ಅವರು ಜನರಿಗೆ ವಿವರಿಸಿದರು.

Advertisement

ವೃದ್ಧರಿಗೆ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಮುಂತಾದ ಸೌಕರ್ಯಗಳನ್ನು ಕೂಡ ಕ್ಷಿಪ್ರವಾಗಿ ಒದಗಿಸಲಾಗುವುದು. ಮಕ್ಕಳ ಆಟೋಟಕ್ಕೆ ಮೈದಾನಗಳ ಲಭ್ಯತೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಭರವಸೆ ನೀಡಿದರು.

ಪಾದಯಾತ್ರೆಯಲ್ಲಿ ಬಿಬಿಎಂಪಿ ಮತ್ತು ಜಲಮಂಡಲಿಯ ಅಧಿಕಾರಿಗಳು ಸಚಿವರ ಜತೆ ಸಾಗಿ, ಜನರು ಹೇಳಿದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next