Advertisement

ಮೈತ್ರಿ ಸರ್ಕಾರ ಉಳಿಸಲು ಹೋರಾಡಿದ ಸಚಿವ ಡಿಕೆಶಿ

11:02 PM Jul 23, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್‌ ನಿಭಾಯಿಸಬೇಕಾಗಿದ್ದ ಕೆಲಸವನ್ನು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನಿರ್ವಹಿಸುವ ಪ್ರಯತ್ನ ಮಾಡಿದರು. ರಾಜ್ಯ ರಾಜಕಾರಣದಲ್ಲಿ ದೇವೇಗೌಡರ ಕುಟುಂಬದೊಂದಿಗೆ ನಿರಂತರ ವೈರತ್ವ ಬೆಳೆಸಿಕೊಂಡು ಬಂದಿದ್ದ ಡಿ.ಕೆ.ಶಿವಕುಮಾರ್‌, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಬೆನ್ನಿಗೆ ನಿಂತರು. ಕಾಂಗ್ರೆಸ್‌ನಿಂದ ಯಾವುದೇ ಅಪಸ್ವರ ಕೇಳಿ ಬಂದರೂ, ಅದನ್ನು ಪರಿಹರಿಸಲು ಡಿ.ಕೆ.ಶಿವಕುಮಾರ್‌ ತಾವೇ ಮುಂದಾಗಿ ನಿಲ್ಲುವ ಪ್ರಯತ್ನ ಮಾಡಿದರು.

Advertisement

ಅದು ಕಾಂಗ್ರೆಸ್‌ನ ಒಂದು ವರ್ಗದ ನಾಯಕರಿಗೆ ಇಬ್ಬರೂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡಲು ಕಾರಣವಾಯಿತು. ಅದರ ಪರಿಣಾಮ ಅತೃಪ್ತ ಶಾಸಕರು ಸಿದ್ದರಾಮಯ್ಯನವರ ಆಶ್ರಯ ಪಡೆಯುವಂತಾಯಿತು. ಆದರೂ, ಡಿ.ಕೆ.ಶಿವಕುಮಾರ ಮೈತ್ರಿ ಸರ್ಕಾರಕ್ಕೆ ಕಂಟಕ ಬಂದಾಗಲೆಲ್ಲಾ ಬಂಡೆಗಲ್ಲಿನಂತೆ ನಿಂತು ಕಾಯುವ ಕಸರತ್ತು ನಡೆಸಿದರು. ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ಅಲ್ಲಿನ ಬಂಡಾಯ ಶಾಸಕರನ್ನು ರಮೇಶ್‌ ಜಾರಕಿಹೊಳಿ ಜೊತೆ ಸೇರಿಕೊಳ್ಳದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದರು.

ಹೊಸಪೇಟೆ ಶಾಸಕ ಆನಂದಸಿಂಗ್‌ ಅವರು ಮೊದಲ ಬಾರಿ ಮುನಿಸಿಕೊಂಡಾಗ ಅವರನ್ನು ಸಮಾಧಾನಪಡಿಸಿ ಸರ್ಕಾರದಲ್ಲಿ ಮುಂದುವರೆಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅತೃಪ್ತರು ಬಂಡಾಯ ಸಾರಿ ಮುಂಬೈಗೆ ತೆರಳಿದಾಗ ಡಿ.ಕೆ.ಶಿವಕುಮಾರ್‌ ನೇರವಾಗಿ ಮುಂಬೈಗೆ ತೆರಳಿ ಬಂಡಾಯಗಾರರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರು. ಆದರೆ ಸಾಧ್ಯವಾಗದೆ ಪೊಲೀಸರ ಬಂಧನಕ್ಕೆ ಒಳಗಾದರು. ಏಕಾಏಕಿ ರಾಜೀನಾಮೆ ಸಲ್ಲಿಸಿದ ಸಚಿವ ಎಂ.ಟಿ.ಬಿ .ನಾಗರಾಜ್‌ ಅವರನ್ನು ಇಡೀ ದಿನ ಮನವೊಲಿಸುವ ಕಸರತ್ತು ನಡೆಸಿದರು. ಈ ಮೂಲಕ ಮೈತ್ರಿ ಸರ್ಕಾರ ಪತನವಾಗುವುದನ್ನು ತಪ್ಪಿಸಲು ಕೊನೆವರೆಗೂ ವಿಫ‌ಲ ಯತ್ನ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next