ಬೆಳಗಾವಿ: ನೀರಿನ ಸಮಸ್ಯೆ ಇದ್ದಾಗ ನೀರಾವರಿ ಸಚಿವರು ಬಂದು ಜನರ ಕಷ್ಟ ಕಾರ್ಪಣ್ಯ ಕೇಳಬೇಕು. ಅದೆಲ್ಲ ಬಿಟ್ಟು ತಾನಾಗೇ ನದಿಗೆ ನೀರು ಬರುತ್ತಿರುವಾಗ ಈಗ ನದಿ ತೀರದ ಪ್ರದೇಶಗಳಿಗೆ ಭೇಟಿ ನೀಡಲು ಬರುತ್ತಿರುವುದು ಯಾವ ಪುರುಷಾರ್ಥಕ್ಕೆ.
Advertisement
ಇದು ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಅಥಣಿ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ತೀರದ ಜನರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಕೇಳುತ್ತಿರುವ ಪ್ರಶ್ನೆ. ಶಿವಕುಮಾರ ಅವರ ಬೆಳಗಾವಿ ಜಿಲ್ಲೆಯ ಭೇಟಿ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬ ಅನುಮಾನ ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ಈಗ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ ಸರಕಾರ ತಾನಾಗೇ ಅಲ್ಲಿನ ಬ್ಯಾರೇಜ್‌ಗಳ ಗೇಟ್ ಗಳನ್ನು ತೆರೆದು ನೀರು ಬಿಡಲಾರಂಭಿಸಿದ್ದು ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ನೀರು ಬರಲಾರಂಭಿಸಿದೆ. ಅಥಣಿ ತಾಲೂಕು ತಲುಪಿದೆ. ಇದು ಕೊಯ್ನಾ, ವಾರಣಾ ಅಥವಾ ಕಾಳಮ್ಮವಾಡಿ ಜಲಾಶಯಗಳಿಂದ ಬಿಡುಗಡೆ ಮಾಡಿದ ನೀರಲ್ಲ. ಹೀಗಿರುವಾಗ ಸಚಿವರು ಯಾವ ಸಾಧನೆ ಮಾಡಿದ್ದಾರೆ ಎಂದು ಜಿಲ್ಲೆಗೆ ಬರುತ್ತಿದ್ದಾರೆ ಎಂಬುದು ನದಿ ತೀರದ ಜನರ ಪ್ರಶ್ನೆ.
ಕಳೆದ ನಾಲ್ಕು ದಶಕಗಳ ಇತಿಹಾಸದಲ್ಲಿ ಒಮ್ಮೆಯೂ ಕೃಷ್ಣಾ ನದಿ ಮೂರು ತಿಂಗಳ ಕಾಲ ಖಾಲಿಯಾಗಿ ಕಂಡಿರಲಿಲ್ಲ. 1978 ರಿಂದ ಇದೇ ಮೊದಲ ಬಾರಿಗೆ ನದಿಗೆ ನೀರು ಬರದೇ ಹೋಯಿತು. ಮೂರು ತಿಂಗಳು 28 ದಿನಗಳ ಕಾಲ ನದಿಯಲ್ಲಿ ಒಂದು ಹನಿ ನೀರು ಕಾಣಲಿಲ್ಲ. ಆಗ ನೀರಾವರಿ ಸಚಿವರು ಈ ಕಡೆ ತಲೆ ಕೂಡ ಹಾಕಿ ಮಲಗಲಿಲ್ಲ, ಈಗ ಮಳೆ ನೀರು ಬಂದ ಮೇಲೆ ಬ್ಯಾರೇಜ್‌ಗಳ ಭೇಟಿಗೆ ಆಗಮಿಸುತ್ತಿರುವುದರಿಂದ ಯಾವ ಪ್ರಯೋಜನ ಇಲ್ಲ ಎಂಬುದು ಮಾಜಿ ಶಾಸಕ ಮೋಹನ ಶಾ ಹೇಳಿಕೆ.
ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಖಾಲಿಯಾದ ನಂತರ ಜಿಲ್ಲೆಯ ಜನರು ಮಹಾರಾಷ್ಟ್ರದಿಂದ ತಕ್ಷಣ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರದ ಮೇಲೆ ಒತ್ತಡ ಹಾಕಿದರು. ಹೋರಾಟ ನಡೆಸಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ. ಸಮಸ್ಯೆ ಗಂಭೀರವಾಗಿದ್ದರೂ ಸರಕಾರದ ನಿಯೋಗ ಮಹಾರಾಷ್ಟ್ರಕ್ಕೆ ಹೋಗಲಿಲ್ಲ. ನೀರು ಇಲ್ಲದ್ದರಿಂದ ಮೂರು ತಾಲೂಕುಗಳಲ್ಲಿ ಶೇ.40 ರಷ್ಟು ಕಬ್ಬಿನ ಬೆಳೆ ಒಣಗಿಹೋಗಿದೆ ಎನ್ನುತ್ತಾರೆ ಮಾಜಿ ಶಾಸಕ.
ನೀರು ಬರದ ಕಾರಣ ನದಿ ಪಾತ್ರದ ಜನರು ಬಹಳ ಕಷ್ಟ ಅನುಭವಿಸಿದರು. ಈಗ ಸಚಿವರು ಬರುತ್ತಿದ್ದಾರೆ ಎಂದ ಮೇಲೆ ಜನರಿಗೆ ಸಹಜವಾಗಿಯೇ ಸಿಟ್ಟು ಬರುತ್ತದೆ. ಅವರ ಭೇಟಿಯ ಉದ್ದೇಶ ಸ್ಪಷ್ಟವಾಗಬೇಕು ಎನ್ನುವುದು ಮಾಜಿ ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯ.