ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಖಲಿಸಿದ ಪ್ರಕರಣ ಕೇವಲ “ಆದಾಯದ ಮೌಲ್ಯಮಾಪನ’ನಕ್ಕೆ (ಅಸೆಸ್‌ಮೆಂಟ್) ಮಾತ್ರ ಸಂಬಂಧಪಟ್ಟಿದ್ದಲ್ಲ. ಅವರು ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ಹೈಕೋರ್ಟ್‌ಗೆ ಹೇಳಿದೆ.
ಐಟಿ ದಾಳಿ ಸಂಬಂಧ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅವರ ಆಪ್ತ ಸಚಿನ್ ನಾರಾಯಣ ಸೇರಿ ಐವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಜಾರಿ ನಿರ್ದೇಶನಾಲಯ ಈ ವಾದ ಮಂಡಿಸಿದೆ.
ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ಅಕ್ರಮ ಹಣ ವರ್ಗಾವಣೆ ಉದ್ದೇಶಿದ್ದರು ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ದೆಹಲಿಯ ಸಫರ್‌ಜಂಗ್ ಎನ್‌ಕ್ಲೇವ್ ಮತ್ತು ಆರ್.ಕೆ. ಪುರಂ ಫ್ಲ್ಯಾಟ್‌ಗಳಲ್ಲಿ 2017ರ ಆಗಸ್ಟ್ 2ರಂದು ದೊರೆತ ಹಣವನ್ನು ಹವಾಲಾ ಅಕ್ರಮವಾಗಿ ಸಾಗಿಸಲಾಗಿತ್ತು. ಅಕ್ರಮ ಹಣವನ್ನು ಸಚಿನ್ ನಾರಾಯಣ್ ಒಡೆತನದ ಉದ್ಯಮಗಳಲ್ಲಿ ತೊಡಗಿಸಲಾಗುತ್ತಿದೆ.
ಅಷ್ಟೇ ಅಲ್ಲ ಸಚಿನ್ ನಾರಾಯಣ್ ಡಿ.ಕೆ. ಶಿವಕುಮಾರ್‌ಗೆ ಸೇರಿದ ಹಣವನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ. ಶರ್ಮಾ ಟ್ರಾನ್ಸ್‌ಪೊàರ್ಟ್ ಮಾಲೀಕ ಸುನೀಲ್ ಕುಮಾರ್ ಶರ್ಮಾ, ಲೆಕ್ಕವಿಲ್ಲದ ಹಣ ಸಂಗ್ರಹಿಸಿ ಸಾಗಿಸಿದ್ದಾರೆ. ಆ ಸಂಸ್ಥೆಯ ಉದ್ಯೋಗಿ ರಾಜೇಂದ್ರ ಹಣವನ್ನು ಬೆಂಗಳೂರಿನಿಂದ ದೆಹಲಿಗೆ ಅಕ್ರಮವಾಗಿ ಸಾಗಣೆ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ನ್ಯಾಯ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.