ರೋಣ (ಗದಗ): ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮನಾದ ವೀರಯೋಧ ವೀರೇಶ ಕುರಹಟ್ಟಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೈಯಕ್ತಿಕವಾಗಿ 2 ಲಕ್ಷ ರೂ. ನೆರವು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದ್ದಾರೆ.
ತಾಲೂಕಿನ ಕರಮುಡಿ ಗ್ರಾಮದ ಹುತಾತ್ಮ ಯೋಧ ವಿರೇಶ ಕುರಹಟ್ಟಿ (47) ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ವೀರೇಶ ಕುರಹಟ್ಟಿ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ವೀರ ಯೋಧನ ಕುಟುಂಬಕ್ಕೆ ದೇವರು ಅವರ ದುಖಃವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹುತಾತ್ಮ ಯೋಧನ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ. ಹುತಾತ್ಮ ಯೋಧನ ಪುತ್ರಿ ಲಕ್ಷ್ಮೀ(ಶ್ರದ್ಧಾ) ವಿದ್ಯಾಭ್ಯಾಸ, ಮದುವೆಗಾಗಿ 105 ಲಕ್ಷ ರೂ. ಹಾಗೂ ಅವರ ಪುತ್ರ ಮನೋಜ್ ಅವರ ಶಿಕ್ಷಣಕ್ಕಾಗಿ 50 ಸಾವಿರ ರೂ. ಹಣವನ್ನು ನಾಳೆಯೊಳಗೆ ತಲುಪಿಸುತ್ತೇನೆ ಎಂದು ಆಶ್ವಾಸ ನೀಡಿದರು.
ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಪುಣೆಗೆ ಬಂದು, ನಂತರ ಅಲ್ಲಿಂದ ಬೆಳಗಾವಿಗೆ ರಸ್ತೆ ಮಾರ್ಗವಾಗಿ ಬರಲಿದೆ. ಬಳಿಕ ನರಗುಂದ ರಸ್ತೆ ಮಾರ್ಗವಾಗಿ ಕರುಮುಡಿ ಗ್ರಾಮಕ್ಕೆ ಶನಿವಾರ ಮಧ್ಯಾಹ್ನ ತಲುಪಲಿದೆ. ಮಾರ್ಗ ಮಧ್ಯೆ ಅನೇಕ ಕಡೆಗಳಲ್ಲಿ ದೇಶಭಕ್ತರು, ದೇಶಾಭಿಮಾನಿಗಳು ಗೌರವ ಸಮರ್ಪಿಸಲಿದ್ದಾರೆ. ಬಳಿಕ ಗ್ರಾಮಸ್ಥರ ಇಚ್ಛೆಯಂತೆ ಗ್ರಾಮದ ಶಾಲಾ ಆವತಣದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದರು