Advertisement

ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ ವಿರುದ್ಧ ಸಚಿವ ಸಿ.ಸಿ.ಪಾಟೀಲ ವಾಗ್ಧಾಳಿ

02:47 PM May 18, 2021 | Team Udayavani |

ಗದಗ: ಜಿಮ್ಸ್‌ಗೆ ಪಿಎಂ ಕೇರ್‌ ನಿಧಿಯಡಿ ಪೂರೈಕೆಯಾದ ವೆಂಟಿಲೇಟರ್‌ಗಳು ಡಬ್ಟಾ ಎಂಬ ಸಂದೇಶ ಸಾರುವ ಮೂಲಕ ಜನಸಾಮಾನ್ಯರ ನಂಬಿಕೆ, ಸರಕಾರಿ ವೈದ್ಯಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನವನ್ನು ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ಸಣ್ಣ ಕೈಗಾರಿಕೆ, ವಾರ್ತಾ ಸಚಿವ ಸಿ.ಸಿ.ಪಾಟೀಲ ಆರೋಪಿಸಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಂ ಕೇರ್‌ನಿಂದ ಪೂರೈಕೆಯಾಗಿರುವ ವೆಂಟಿಲೇಟರ್‌ ಗಳು ಡಬ್ಬ ಎನ್ನುವುದಕ್ಕೂ ಮುನ್ನ, ಈ ಹೇಳಿಕೆಯಿಂದ ಜಿಮ್ಸ್‌ನಲ್ಲಿರುವ ರೋಗಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಎಚ್‌.ಕೆ.ಪಾಟೀಲ ಯೋಚಿಸಬೇಕಿತ್ತು ಎಂದು ಖಾರವಾಗಿ ಹೇಳಿದರು. ಕೋವಿಡ್‌ ಆರಂಭದಿಂದಲೂ ಕಾಂಗ್ರೆಸ್‌ ನಾಯಕರು ಪ್ರತಿನಿತ್ಯ ಜನರ ದಿಕ್ಕು ತಪ್ಪಿಸುವ ಕೆಲಸವನ್ನೇ ಮಾಡುತ್ತಿದ್ದಾರೆ. ಕೋವಿಡ್‌ ಲಸಿಕೆ ವಿಚಾರದಲ್ಲೂ ಕಾಂಗ್ರೆಸ್‌ ನಾಯಕರು ಇಲ್ಲಸಲ್ಲದ ಅನುಮಾನ ಹುಟ್ಟು ಹಾಕಿದರು. ಲಸಿಕೆ ಮೇಲೆ ನಂಬಿಕೆಯೇ ಇಲ್ಲ ಎನ್ನುತ್ತಿದ್ದವರು ಇದೀಗ ಕದ್ದುಮುಚ್ಚಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ವಿಪಕ್ಷ ನಾಯಕರ ಮಾತು ನಂಬಿದವರು ಹಳ್ಳಕ್ಕೆ ಬಿದ್ದರು ಎಂದು ವಾಗ್ಧಾಳಿ ನಡೆಸಿದರು.

ಜಿಮ್ಸ್‌ಗೆ ಆಸ್ಪತ್ರೆಗೆ 50 ವೆಂಟಿಲೇಟರ್‌ ಗಳು ಪೂರೈಕೆಯಾಗಿವೆ. ಕೆಲವೊಮ್ಮೆ ನಮ್ಮ ಒತ್ತಡಕ್ಕೆ ಮಣಿದು ಸರಕಾರ ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್‌ ಗಳನ್ನು ಪೂರೈಕೆ ಮಾಡಿದಾಗ ಸಣ್ಣಪುಟ್ಟ ಲೋಪಗಳಾಗಿರುತ್ತವೆ. ವೆಂಟಿಲೇಟರ್‌ ಗಳಿಗೆ ಸೆನ್ಸಾರ್‌ಗಳಿರದಿದ್ದರೆ, ಅವುಗಳನ್ನು ತರಿಸಿಕೊಂಡು ಅಳವಡಿಸುವ ಕೆಲಸ ಮಾಡಬೇಕಿತ್ತು. ಅದಕ್ಕೆ ಸಂಬಂಧಿಸಿ ಸೂಕ್ತ ಸಲಹೆ- ಸೂಚನೆಗಳನ್ನೂ ನೀಡಬಹುದಿತ್ತು. ಆದರೆ ಇಂತಹ ಕೀಳುಮಟ್ಟದ ರಾಜಕಾರಣ ಮಾಡುವ ಸಮಯ ಇದಲ್ಲ ಎಂದು ತಿರುಗೇಟು ನೀಡಿದರು. ಸರಕಾರದಿಂದ ಜಿಮ್ಸ್‌ಗೆ 50 ವೆಂಟಿಲೇಟರ್‌ಗಳು ಪೂರೈಕೆಯಾಗಿದ್ದರೂ ಏನೋ 20-25 ಬಂದಿವೆ ಎನ್ನುವ ಮೂಲಕ ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ. ಇದು ಅವರ ಸ್ವಂತ ಬುದ್ಧಿಯಿಂದ ಮಾಡಿದ ಆರೋಪವಲ್ಲ. ತಮ್ಮ ಪಕ್ಷದ ಆದೇಶವನ್ನು ಯಥಾವತ್‌ ಪಾಲಿಸಿ ಇಂದು ಪಲಾಯನ ಮಾಡಿದ್ದಾರೆಂದು ಲೇವಡಿ ಮಾಡಿದರು.

ವಲಸೆ ಹೋಗಿದ್ದ ಜನರು ಪುನಃ ಹಳ್ಳಿಗಳಿಗೆ ಮರಳಿದ್ದರಿಂದ ಸೋಂಕಿನ ಪ್ರಮಾಣವೂ ಹೆಚ್ಚುತ್ತಿದೆ. ಸೋಂಕಿನಿಂದ ಆರೋಗ್ಯದ ಸ್ಥಿತಿ ಗಂಭೀರವಾದ ಬಳಿಕ ಆಸ್ಪತ್ರೆಗೆ ದಾಖಲಾಗುವವರೇ ಹೆಚ್ಚು. ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ಜನರು ಸಾಯುವುದು ಸಹಜ. ಎಚ್‌.ಕೆ.ಪಾಟೀಲ ಅವರ ಸ್ವಗ್ರಾಮ ಹುಲಕೋಟಿಯ ಖಾಸಗಿ ಆಸ್ಪತ್ರೆಯಿಂದ ಜಿಮ್ಸ್‌ಗೆ ಎಷ್ಟು ರೋಗಿಗಳನ್ನು ಸ್ಥಳಾಂತರಿಸಿದ್ದಾರೆ. ಹುಲಕೋಟಿ ಆಸ್ಪತ್ರೆಯಲ್ಲಿ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುದನ್ನೂ ಎಚ್‌. ಕೆ.ಪಾಟೀಲ ಬಹಿರಂಗಪಡಿಸಲಿ ಎಂದರು. ಸೋಂಕು ಹಾಗೂ ಸಾವಿನ ಪ್ರಮಾಣ ತಡೆಯುವ ನಿಟ್ಟಿನಲ್ಲಿ ಹಿರಿಯ ರಾಜಕಾರಣಿಗಳು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next