ನವದೆಹಲಿ\ಬೆಂಗಳೂರು: ಉಕ್ರೇನ್ ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕೇಂದ್ರದ ರಾಜ್ಯ ರಾಸಾಯನಿಕ ಖಾತೆ ಸಚಿವ ಭಗವಂತ್ ಖೂಬಾ ನವದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದರು.
ವಿಮಾನದಲ್ಲಿದ್ದ ವಿದ್ಯಾರ್ಥಿಗಳನ್ನು ಹೂಗುಚ್ಛ ನೀಡಿ ಬರಮಾಡಿಕೊಂಡ ಭಗವಂತ್ ಖೂಬಾ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಆಪರೇಷನ್ ಗಂಗಾ ಅಡಿಯಲ್ಲಿ ಸಾವಿರಾರು ನಾಗರಿಕರನ್ನು ದೇಶಕ್ಕೆ ಕರೆತರಲಾಗಿದೆ. ಸಂಕಷ್ಟದಲ್ಲಿರುವ ಭಾರತೀಯರನ್ನು ವೇಗವಾಗಿ ರಕ್ಷಿಸಲು ನಮ್ಮ ಸೇನೆ ಮತ್ತು ವಾಯುಪಡೆಯನ್ನೂ ನಿಯೋಜಿಸಲಾಗಿದೆ. ಭಾರತ ಸರ್ಕಾರವು ತನ್ನ ನಾಗರಿಕರ ಸುರಕ್ಷಿತ ವಾಪಸಾತಿಗೆ ಸಿಗುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಪ್ರಧಾನಿ ಮೋದಿಯವರು ಸಚಿವರಿಗೆ ಜವಾಬ್ದಾರಿ ನೀಡಿದ್ದು, ಎಲ್ಲಾ ಸಚಿವರು ತಮ್ಮ ತಮ್ಮ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸುತ್ತಿದ್ದಾರೆ. ಉಕ್ರೇನ್‌ನಿಂದ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸ್ಥಳಾಂತರಿಸಲಾಗಿದೆ. ಯುದ್ಧ ಕಲಹದ ದೇಶದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿಸಿ ಮೋದಿಜಿ ಸಾಧ್ಯವಾಗಿಸಿದ್ದಾರೆ. ಯುವ ವಿದ್ಯಾರ್ಥಿಯೊಬ್ಬ ಈ ವೇಳೆ ವಿಮಾನದಲ್ಲಿ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಕ್ಕೆ ಸಂತೋಷದಿಂದ ಕಣ್ಣೀರು ಹಾಕಿದ್ದು, ಆ ಆನಂದಭಾಷ್ಪ ನನ್ನ ಕಣ್ಣುಗಳನ್ನು ಸಹ ತೇವವಾಗಿಸಿದವು ಎಂದು ಖೂಬಾ ಹೇಳಿದರು.