Advertisement

ಆತ್ಮನಿರ್ಭರ, ಅಭಿವೃದ್ಧಿಗೆ ಕೇಂದ್ರ ಬಜೆಟ್‌ ಪೂರಕ

07:29 PM Feb 14, 2021 | Team Udayavani |

ಕೋಲಾರ: ಆತ್ಮನಿರ್ಭರ ಭಾರತ ಮತ್ತು ವೈಯಕ್ತಿಕ ಸ್ವಾವಲಂಬನೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ 2021-22ನೇ ಬಜೆಟ್‌ ಮಹತ್ವದ ಹೆಜ್ಜೆಯಾಗಿದೆ. ಮುಂದಿನ 10 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಈ ಬಜೆಟ್‌ ಪೂರಕವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ, ಪರಿಶಿಷ್ಟರ, ಕೃಷಿಕರ, ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ. ಹಲವಾರು ಅಭಿವೃದ್ಧಿ ಕ್ಷೇತ್ರಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಒತ್ತು ಕೊಡಲಾಗಿದೆ ಎಂದರು.

ಅಭಿವೃದ್ಧಿಪಥ: ಕೋವಿಡ್‌ ಸಂಬಂಧ ಲಸಿಕೆ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸಲು ದೂರದೃಷ್ಟಿಯ ಯೋಜನೆ, ಯುವಕರಿಗೆ ಉದ್ಯೋಗಾವಕಾಶ ಹೆಚ್ಚಳಕ್ಕೆ ವಿಶೇಷ ಯೋಜನೆ, ಆರೋಗ್ಯ ಕ್ಷೇತ್ರ ಬಲಪಡಿಸಲು 64,180 ಕೋಟಿ, 500 ಅಮƒತ್‌ ನಗರಗಳಲ್ಲಿ 2.86 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸುವುದು, ಇವೆಲ್ಲವೂ ದೇಶವನ್ನು ಅಭಿವೃದ್ಧಪಥದಲ್ಲಿ ಒಯ್ಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಮಿಕರ ಹಿತ: ಕೃಷಿ ಕ್ಷೇತ್ರವನ್ನು ಸಬಲಗೊಳಿಸಲು ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ದೊರಕಿಸುವ ಸಲುವಾಗಿ 1000 ಎ.ಪಿ.ಎಂ.ಸಿ.ಗಳಿಗೆ ಡಿಜಿಟಲ್‌ ಮಾರ್ಕೆಟಿಂಗ್‌ ವ್ಯವಸ್ಥೆ ಹಾಗೂ ಬೆಂಬಲ ಬೆಲೆ (ಎಂ.ಎಸ್‌.ಪಿ.) ಅಡಿ ಸರ್ಕಾರದಿಂದಲೇ ಧಾನ್ಯಗಳ ಖರೀದಿಗೆ ನಿರ್ಧರಿಸಿದೆ. ಅಸಂಘಟಿತ ಕಾರ್ಮಿಕರಿಗೆ ಇ.ಎಸ್‌.ಐ. ಸೌಲಭ್ಯ, ಕನಿಷ್ಠ ವೇತನ ಕಾಯಿದೆ ಸೌಲಭ್ಯ ಜಾರಿಗೊಳಿಸುವ ಮೂಲಕ ಕಾರ್ಮಿಕ ಹಿತ ಕಾಯಲು ಗುರಿ ಹೊಂದಲಾಗಿದೆ ಎಂದರು.

ಕೋವಿಡ್‌ ತಡೆಗೆ ಗಮನ: ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಕೋವಿಡ್‌ ತಡೆಗಟ್ಟಲು ಈ ಬಾರಿಯ ಬಜೆಟ್‌ ವಿಶೇಷ ಗಮನ ನೀಡಿದೆ. ರಾಜ್ಯದಲ್ಲಿ 1,197ಕಿಮೀ. ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 10.904 ಕೋಟಿ ಬಿಡುಗಡೆ, ಕೊಚ್ಚಿ-ಮಂಗಳೂರು ಗ್ಯಾಸ್‌ ಪೈಪ್‌ ಲೈನ್‌  ಲೋಕಾರ್ಪಣೆ, ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸದುದ್ದೇಶದಿಂದ 7 ಹೊಸ ಟೆಕ್ಸ್‌ಟೈಲ್ಸ್‌ ಸ್ಥಾಪನೆ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತರಬೇತಿ ನೀಡಲು 3000 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

Advertisement

ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, 15,000 ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು, ಗಿರಿಜನ ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ, 100 ಹೊಸ ಸೈನಿಕ ಶಾಲೆಗಳ ಸ್ಥಾಪನೆಯ ಗುರಿ ಹೊಂದಿದ್ದು, ಐತಿಹಾಸಿಕ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್‌.ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಕೆ.ಎನ್‌.ವೇಣು ಗೋಪಾಲ್‌, ಜಿಲ್ಲಾ ವಕ್ತಾರ ಬಿ.ಪಿ.ವೆಂಕಟಮುನಿ ಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next