Advertisement

ಪ್ರತ್ಯೇಕ ಧರ್ಮಕ್ಕಾಗಿ ಈಗ ಮಾನ್ಯತೆ ಅಸ್ತ್ರ​​​​​​​; ರೆಡ್ಡಿ ಪ್ರವಾಸ

06:00 AM Jul 25, 2017 | Team Udayavani |

ಬೆಂಗಳೂರು: ಲಿಂಗಾಯತ ಸಮುದಾಯದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ “ಟಾಂಗ್‌’ ನೀಡಲು ಹೊರಟಿರುವ ಕಾಂಗ್ರೆಸ್‌, ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ “ಅಸ್ತ್ರ’ ಪ್ರಯೋಗಕ್ಕೆ  ಮುಂದಾಗಿದೆ.

Advertisement

ಅಷ್ಟೇ ಅಲ್ಲ, ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ ಮುಸ್ಲಿಂ, ಸಿಖ್‌, ಬೌದ್ಧ, ಜೈನರಂತೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗುತ್ತದೆ. ಸರ್ಕಾರದ ಸವಲತ್ತು, ಮೀಸಲಾತಿಯೂ ಲಭ್ಯವಾಗುತ್ತದೆ ಎಂಬ “ಆಸೆ’ ತೋರಿಸಲಾಗುತ್ತಿದೆ.

ಇದರ ಮುಂದಾಳತ್ವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ವಹಿಸಿಕೊಂಡಿದ್ದು, ಎಸ್‌.ಎಸ್‌.ಮಲ್ಲಿಕಾರ್ಜುನ್‌, ಡಾ.ಶರಣ್‌ಪ್ರಕಾಶ್‌ ಪಾಟೀಲ್‌, ವಿನಯ ಕುಲಕರ್ಣಿ, ಈಶ್ವರ್‌ಖಂಡ್ರೆ ಅವರನ್ನು ಜತೆಗೂಡಿಸಿಕೊಂಡು ರಾಜ್ಯಪ್ರವಾಸಕ್ಕೂ ರೂಪು-ರೇಷೆ ಸಿದ್ಧವಾಗಿದೆ.ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿ ಆಗಸ್ಟ್‌ 22 ರಂದು ಬೆಳಗಾವಿ ಚಲೋ, ಸೆಪ್ಟೆಂಬರ್‌ 3 ಕ್ಕೆ ಲಾತೂರ್‌ ಚಲೋ ಸಹ ಹಮ್ಮಿಕೊಳ್ಳಲಾಗಿದೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಹಿಂದುತ್ವ ವ್ಯಾಪ್ತಿಗೆ ಲಿಂಗಾಯತ ಸಮುದಾಯ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರೊಬ್ಬ ಆರ್‌ಎಸ್‌ಎಸ್‌ ನಾಯಕರಾಗಿ ಮನುಸ್ಮತಿ ಒಪ್ಪಿ ಅದನ್ನೇ ಪ್ರತಿಪಾದಿಸುತ್ತಾರೆ. ಆದರೆ, ವೀರಶೈವ-ಲಿಂಗಾಯತರ ಆಚಾರ ವಿಚಾರಕ್ಕೂ, ಹಿಂದುತ್ವಕ್ಕೂ ವ್ಯತ್ಯಾಸವಿದೆ. ಹೀಗಾಗಿ, ಈ ಬಗ್ಗೆ ಜಾಗೃತಿ ಮೂಡಿಸಲು ನಾವು ನಾಲ್ವರು ಸಚಿವರು ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ ಎಂದು ಹೇಳಿದರು.

ವೀರಶೈವ ಮಹಾಸಭಾ ಹಾಗೂ ಹಲವಾರು ಮಠಾಧೀಶರು ನಮ್ಮ ಜತೆಗೂಡಲಿದ್ದಾರೆ. ಇದೊಂದು ಜಾಗೃತಿ ಮೂಡಿಸುವ ವಿಚಾರವೂ ಆಗಲಿದೆ ಎಂದು ತಿಳಿಸಿದರು.

Advertisement

ಖಾಸಗಿ ಪ್ರವಾಸ: ರಾಜ್ಯ ಸರ್ಕಾರದ ಸಚಿವರಾಗಿ ಒಂದು ಸಮುದಾಯದ ಪರ ಪ್ರವಾಸ ಮಾಡುವುದು ಸರಿಯೇ ಎಂದಾಗ ನಾವು ಸಚಿವರಾಗಿ ಅಲ್ಲ ಸಮುದಾಯದ ನಾಯಕರಾಗಿ ವೀರಶೈವ ಮಹಾಸಭಾದ ಮುಂದಾಳತ್ವದಲ್ಲೇ ಖಾಸಗಿಯಾಗಿ ಪ್ರವಾಸ ಕೈಗೊಳ್ಳುತ್ತೇವೆ ಎಂದು ತೇಲಿಸಿದರು.

ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಅಲ್ಪಸಂಖ್ಯಾತ ಸ್ಥಾನಮಾನವೂ ದೊರೆಯುತ್ತದೆ. ಇದು ಒಂದು ರೀತಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಹಾಗೂ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ವ್ಯಾಖ್ಯಾನಿಸಿದರು.

ರಂಭಾಪುರಿ ಶ್ರೀಗಳು ಪ್ರತ್ಯೇಕ ಧರ್ಮದ ಮಾನ್ಯತೆಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರಶ್ನಿಸಿದಾಗ, ವಿಚಾರ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ. ಹೀಗಾಗಿ, ನಾವು ಪ್ರವಾಸ ಕೈಗೊಂಡು ಎಲ್ಲರ ಜತೆ ಚರ್ಚೆ ಮಾಡಿ ಸಹಮತ ಮೂಡಿಸುತ್ತೇವೆ ಎಂದು ಹೇಳಿದರು.

ಹಿಂದೂಧರ್ಮ ಸ್ಥಾಪನೆಯ ಮೂಲ ಗೊತ್ತಿಲ್ಲ
ಹಿಂದೂಧರ್ಮ ಸ್ಥಾಪನೆಯ ಮೂಲ ಯಾರು ಎಂಬುದೇ ಗೊತ್ತಿಲ್ಲ ಎಂದು ಪ್ರತಿಪಾದಿಸಿದ ಬಸವರಾಜ ರಾಯರೆಡ್ಡಿ,  ಇಸ್ಲಾಂ, ಕ್ರಿಶ್ಚಿಯನ್‌, ಸಿಖ್‌, ಬೌದ್ಧ, ಜೈನ ಹೀಗೆ ಎಲ್ಲ ಧರ್ಮಗಳ ಸ್ಥಾಪನೆಯ ಮೂಲ ಗೊತ್ತಿದೆ. ಹಿಂದೂಧರ್ಮ ಸ್ಥಾಪಿಸಿದ್ದು ಯಾರು ಎಂಬುದೇ ಗೊತ್ತಿಲ್ಲ. ಹಿಂದೂಧರ್ಮದ ಭಾಗ ಎಂಬ ಹೆಸರಿನಲ್ಲಿ ಹಿಂದುತ್ವದಡಿ ಲಿಂಗಾಯತರನ್ನು ಸೆಳೆಯುವ ಕೆಲಸ ಯಡಿಯೂರಪ್ಪ ಮಾಡುತ್ತಿದ್ದಾರೆ.  ಅವರಿಗೆ ಲಿಂಗಾಯತರ ವಿಚಾರವೇ ಗೊತ್ತಿಲ್ಲ. ವೀರಶೈವ-ಲಿಂಗಾಯತ ಸಮಾಜ ವಿಚಾರದಲ್ಲಿ ಪ್ರತ್ಯೇಕ ಧರ್ಮವಾಗಿ ಗುರುತಿಸಬೇಕು ಎಂಬ ಚರ್ಚೆಯಿದೆ. ಆದರೆ, ಇದರ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ,  ಈ ರೀತಿಯ ಬೇಡಿಕೆ ಇಟ್ಟಿರುವುದು ಸಮುದಾಯದ ಮುಖಂಡರ ನಿಯೋಗ. ಅದರಲ್ಲಿ ನಾನೂ ಇದ್ದೆ. ಯಡಿಯೂರಪ್ಪ ಇದನ್ನು ಅರ್ಥಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಎಂದೂ ಜಾತಿ ಮಾಡಿಲ್ಲ. ಮೂರು ದಶಕಗಳಿಂದ ಅವರನ್ನು ಬಲ್ಲೆ, ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

*ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಹಾಕುವುದಕ್ಕೂ ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೇಳುತ್ತಿರುವುದಕ್ಕೂ, ಮುಂದಿನ ವಿಧಾನಸಭೆ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ವಿಚಾರದ ಬಗ್ಗೆ ಜಾಗೃತಿ ಮೂಡಿಸುವುದಷ್ಟೇ ನಮ್ಮ ಉದ್ದೇಶ. ಲಿಂಗಾಯತ ಸಮುದಾಯ ಒಂದು ಪಕ್ಷದ ಆಸ್ತಿಯೂ ಅಲ್ಲ.
-ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next