ದಾವಣಗೆರೆ: ಕೋವಿಡ್-19 ನಿಯಂತ್ರಣ ಪರಿಕರಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಲೂಟಿ ಹೊಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಬರೀ ಪ್ರಚಾರಕ್ಕೆ ಎಂದಿರುವ ಆರೋಗ್ಯ ಸಚಿವ ಬಿ. ಶ್ರೀ ರಾಮುಲು, ‘ಕುಣಿಯೋಕೆ ಬಾರದವರು ನೆಲ ಡೊಂಕು ಅಂದರು’ ಎನ್ನುವಂತೆ ಆರೋಪ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಒಂದು ನೂರು ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಗು ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಪ್ರತಿ ಪೈಸೆಗೂ ಲೆಕ್ಕ ಇಟ್ಟಿದೆ. ಬೇಕಾದರೆ ಶ್ವೇತಪತ್ರ ಹೊರಡಿಸಲೂ ಸಿದ್ದ ಇದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನವರು ಯಾವುದೇ ತನಿಖೆಗೆ ಒತ್ತಾಯಿಸಿದರೂ ಸರ್ಕಾರ ಸಿದ್ದ ಇದೆ ಎಂದು ಹೇಳಿದರು.
ಕೋವಿಡ್ ನಿಯಂತ್ರಣದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸುವಂತೆ ಸರ್ಕಾರ ಕೆಲಸ ಮಾಡುತ್ತಿದೆ. ವಿಶ್ವ ಮಟ್ಟದಲ್ಲಿ ಸಹ ರಾಜ್ಯ ಸರ್ಕಾರದ ಕ್ರಮ ಪ್ರಶಂಸೆಗೆ ಒಳಗಾಗಿವೆ ಎಂದು ಸರ್ಕಾರದ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದವರು. ಯಾವುದೇ ಆರೋಪ ಮಾಡುವುದಕ್ಕೆ ಮುನ್ನ ಆಧಾರ ಇಟ್ಟುಕೊಂಡು ಮಾತನಾಡಬೇಕು. ರಾಜ್ಯ ಸರ್ಕಾರ ಕೋವಿಡ್-19 ನಿಯಂತ್ರಣ ಪರಿಕರ ಖರೀದಿಯಲ್ಲಿ ಲೂಟಿ ಹೊಡೆದಿದೆ ಎನ್ನುವುದಕ್ಕೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಒಳಗೊಂಡಂತೆ ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ. ಅದಕ್ಕೆ ಪ್ರಚಾರಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕೋವಿಡ್-19 ನಿಯಂತ್ರಣ ವಿಚಾರವಾಗಿ ಎಲ್ಲಿಯೂ ಹೊರಗೆ ಬಂದಿಲ್ಲ. ರಾಜ್ಯದ ಅನೇಕ ಸ್ವಯಂ ಸೇವಕ ಸಂಸ್ಥೆಗಳು ಬಂದಿವೆ. ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡುವ ಬದಲಿಗೆ ಸೋಂಕು ನಿಯಂತ್ರಣ ಕೆಲಸಕ್ಕೆ ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಆಹ್ವಾನಿಸಿದರು. ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ ಎಂದು ತಿಳಿಸಿದರು.