Advertisement

ಮೈಸೂರು ಕಾರ್ಖಾನೆಯಿಂದ 26 ಜನರಿಗೆ ಕೋವಿಡ್-19 ಹರಡಿದೆ: ಸಚಿವ ಶ್ರೀರಾಮುಲು

06:14 PM Apr 10, 2020 | keerthan |

ಬಳ್ಳಾರಿ: ಮೈಸೂರಿನಲ್ಲಿ ಕೋವಿಡ್-19 ವೈರಸ್ ಆವರಿಸಿರುವ  ಪಾಸಿಟಿವ್ ಪ್ರಕರಣಗಳ ಪೈಕಿ 26 ಪ್ರಕರಣಗಳು ನಂಜನಗೂಡು ಜ್ಯೂಬ್ಲಿಯಂಟ್ ಕಾರ್ಖಾನೆಯಿಂದ ಹರಡಿಕೊಂಡಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.

Advertisement

ನಗರದ ಜಿಪಂ ಕಚೇರಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರು ಜಿಲ್ಲೆಯಲ್ಲಿ ಶುಕ್ರವಾರ ಸಹ ವೈರಸ್ 5 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 26 ಪಾಸಿಟಿವ್ ಪ್ರಕರಣಗಳು ನಂಜನಗೂಡಿನ ಜ್ಯೂಬ್ಲಿಯಂಟ್ ಕಾರ್ಖಾನೆಯಿಂದ ಹರಡಿಕೊಂಡಿದೆ. ಕೆಲ ದಿನಗಳ ಹಿಂದೆ ಚೈನಾದಿಂದ ಸೆಮಿಲಿಕ್ವಿಡ್ ಇದ್ದ ಕಂಟೈನರ್ ಬಂದಿತ್ತು. ಬಳಿಕ ಜಪಾನ್ ದೇಶದಿಂದ ಮೂವರು, ದೆಹಲಿಯಿಂದ ಒಬ್ಬರು ತಾಂತ್ರಿಕ ಸಿಬ್ಬಂದಿಗಳು ಬಂದಿದ್ದರು. ಈ ಕುರಿತು ಜಪಾನ್, ಚೈನಾ, ದೆಹಲಿಗೆ ಪತ್ರ ಬರೆದಿದ್ದರೂ ಅಲ್ಲಿಂದ ಈ ವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅವರ ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಲಾಗುತ್ತಿದೆ ಎಂದವರು ವಿವರಿಸಿದರು.

ರಾಜ್ಯದಲ್ಲಿ ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಎಲ್ಲವನ್ನೂ ವಿವರಿಸಿದ್ದೇನೆ. ರಾಜ್ಯದಲ್ಲಿ ಈವರೆಗೆ 207 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನರು ಮೃತಪಟ್ಟಿದ್ದಾರೆ. 30 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ರಾಜ್ಯದ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ 10 ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದ್ದು, ವಿಶೇಷವಾಗಿ ಗಮನ ಹರಿಸಲಾಗುತ್ತದೆ. 566 ಐಸೋಲೇಷನ್ ಬೆಡ್‌ಗಳನ್ನು ಮೀಸಲಿಡಲಾಗಿದೆ. 372 ವೆಂಟಿಲೇಟರ್‌ಗಳು ಇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಜಿಲ್ಲಾಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿಗೆ. ತಾಲೂಕು ಆಸ್ಪತ್ರೆಗಳಲ್ಲೂ ೧೦ ಬೆಡ್‌ಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವರಿಗೆ ವಿವರಿಸಲಾಗಿದೆ ಎಂದವರು ವಿವರಿಸಿದರು.

ಉತ್ತರ ಕರ್ನಾಟಕದಲ್ಲಿ ಬಳ್ಳಾರಿ, ಕಲಬುರ್ಗಿಯಲ್ಲಿ ಮಾತ್ರ ಲ್ಯಾಬ್‌ಗಳಿದ್ದು, ಬೀದರ್ ಜಿಲ್ಲೆ ಸೇರಿ ಎರಡು ಲ್ಯಾಬ್‌ಗಳು ಅವಶ್ಯಕತೆಯಿದೆ. ಒಂದು ಲಕ್ಷ ಟೆಸ್ಟಿಂಗ್ ಕಿಟ್ ಖರೀದಿಗೆ ಕ್ರಮಕೈಗೊಳ್ಳಲಾಗಿದ್ದು, 13ನೇ ತಾರೀಖಿನೊಳಗೆ ಬರಲಿದೆ. 5 ಲಕ್ಷ ಪಿಪಿಇ ಕಿಟ್,  ಲಕ್ಷ ಎನ್95 ಮಾಸ್ಕ್ ಕೇಳಿದ್ದೇವೆ ಎಂದು ತಿಳಿಸಿದರು.

Advertisement

ಭಿನ್ನಮತ ಇಲ್ಲ

ವೈದ್ಯಕೀಯ ಸಚಿವ ಡಾ. ಸುಧಾಕರ್, ಡಿಸಿಎಂ ಅಶ್ವಥ್‌ನಾರಾಯಣ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ರಾಮುಲು, ನಾವೆಲ್ಲ ಸ್ನೇಹಿತರು. ಇಂಥಹ ತುರ್ತು ಪರಿಸ್ಥಿತಿಯಲ್ಲಿ ರಾಜಕೀಯ ಮಾಡಲು ಹೋಗಲ್ಲ. ಇಲ್ಲಿ ಯಾವುದೇ ವಸ್ತು ಖರೀದಿಸಬೇಕಾದರೆ ಐಎಎಸ್ ಅಧಿಕಾರಿಗಳ ತಂಡವಿದ್ದು, ಐಸಿಎಂಆರ್ ನಿಯಮಗಳ ಪ್ರಕಾರ, ಸಮರ್ಥ ಕಂಪನಿಗಳಿಂದ ವಸ್ತುಗಳನ್ನು ಖರೀದಿ ಮಾಡಲಾಗುತ್ತದೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ರಾಜ್ಯದ 19 ಜಿಲ್ಲೆಗಳಲ್ಲಿ ಸಂಚರಿಸಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಲಾಕ್‌ಡೌನ್ ಬದಲಿಗೆ ಶೀಲ್‌ ಡೌನ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವರು ಸಚಿವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರಾದರೂ, ಸಿಎಂ ಯಡಿಯೂರಪ್ಪನವರು, ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ನಂತರ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next