ಅಫಜಲಪುರ: ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಸಲುವಾಗಿ ಸರ್ಕಾರದಿಂದ 15 ಸಾವಿರ ಹೊಸ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈ ಪೈಕಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ತಾಲೂಕಿನ ದೇವಲ ಗಾಣಗಾಪೂರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ. ಅದನ್ನು ನಿವಾರಿಸಲು ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲಾಗಿದೆ. 371(ಜೆ) ಮೀಸಲಾತಿಯಡಿ ಸ್ಥಳೀಯರು ನೇಮಕಾತಿ ಆಗುವುದರಿಂದ ಪ್ರದೇಶ ಬಿಟ್ಟು ಶಿಕ್ಷಕರು ಬೇರೆಡೆ ವರ್ಗಾವಣೆ ಆಗುವುದಿಲ್ಲ.
ಕೋವಿಡ್ ಕಾರಣದಿಂದ ಕಳೆದ ವರ್ಷ ಸರಿಯಾಗಿ ಶಾಲೆಗಳು ನಡೆಯದ ಕಾರಣ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಹೀಗಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕಲಿಕಾ ಚೇತರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲಿಕಾ ಚೇತರಿಕೆ ಕೋರ್ಸ್ ಬೋ ಧಿಸಿದ ನಂತರವೇ ಪಠ್ಯ ಬೋಧನೆ ಮಾಡಲಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ವಿರೋಧದ ನಡುವೆ ಮೊಟ್ಟೆ ವಿತರಣೆ ಮಾಡಿದ್ದೇವೆ.
ಶಿಕ್ಷಕರ ಕೊರತೆ ನೀಗಿಸಲು ರಾಜ್ಯಾದ್ಯಂತ 33 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 7500ದಿಂದ 10000 ಸಾವಿರ ರೂ.ಗಳಿಗೆ, ಪ್ರೌಢ ಶಾಲೆ ಶಿಕ್ಷಕರ ಗೌರವ ಸಂಭಾವನೆಯನ್ನು 8 ಸಾವಿರದಿಂದ 10500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.