Advertisement

ಮುಖ್ಯಮಂತ್ರಿಯಾಗಿ ಸಚಿವರಾದವರು

11:20 PM Aug 20, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಮತ್ತೆ ಬೇರೆಯವರ ಸಂಪುಟದಲ್ಲಿ ಸಚಿವರಾಗುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅಚ್ಚರಿಗೆ ಕಾರಣರಾಗಿದ್ದಾರೆ. ಆದರೆ, ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ಮತ್ತೆ ಬೇರೆಯವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿರುವ ಉದಾಹರಣೆ ಇದೆ.

Advertisement

1957ರಲ್ಲಿ ನಡೆದ ಎರಡನೇ ವಿಧಾನಸಭೆ ಚುನಾವಣೆಯಲ್ಲಿ ಎಸ್‌.ನಿಜಲಿಂಗಪ್ಪ ಅವರು ಸೋಲು ಕಂಡಿದ್ದರಿಂದ ಬಿ.ಡಿ. ಜತ್ತಿಯವರು ಮೂರು ವರ್ಷ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರ ನಂತರ ಎಸ್‌.ಆರ್‌. ಕಂಠಿಯವರು 98 ದಿನ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ನಿಜಲಿಂಗಪ್ಪ ಉಪ ಚುನಾವಣೆಯಲ್ಲಿ ಜಯಗಳಿಸಿದ್ದರಿಂದ ಅವರ ಸಂಪುಟದಲ್ಲಿ ಎಸ್‌.ಆರ್‌. ಕಂಠಿ ಹಾಗೂ ಬಿ.ಡಿ. ಜತ್ತಿಯವರೂ ಸಚಿವರಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಯಿದೆ.

ಗಣ್ಯರ ಉಪಸ್ಥಿತಿ: ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್‌ ಜೋಷಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ಪಾಲ್ಗೊಂಡಿದ್ದರು. ಸಂಸದರಾದ ಬಿ.ಎನ್‌.ಬಚ್ಚೇಗೌಡ, ಉಮೇಶ್‌ ಜಾಧವ್‌, ದೇವೇಂದ್ರಪ್ಪ, ಸಂಗಣ್ಣ ಕರಡಿ, ಮುನಿಸ್ವಾಮಿ, ಸುಮಲತಾ ಅಂಬರೀಶ್‌, ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಭಾವ್ಯರೆನ್ನಲಾಗಿದ್ದರೂ ಸಚಿವ ಸ್ಥಾನ ಸಿಗದ ಅರವಿಂದ ಲಿಂಬಾವಳಿ, ಎಸ್‌.ಎ.ರಾಮದಾಸ್‌, ಸುನಿಲ್‌ ಕುಮಾರ್‌ ಸೇರಿದಂತೆ ಬಿಜೆಪಿಯ ಬಹಳಷ್ಟು ಶಾಸಕರು, ಅನರ್ಹ ಶಾಸಕರಾದ ಆರ್‌.ಶಂಕರ್‌, ರೋಷನ್‌ ಬೇಗ್‌ ಸೇರಿದಂತೆ ಮಾಜಿ ಶಾಸಕರು ಉಪಸ್ಥಿತರಿದ್ದರು.

ಸಂಭ್ರಮ- ಸಡಗರ: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಯೋಜನೆಯಾಗಿದ್ದ ರಾಜಭವನದಲ್ಲಿ ಮಂಗಳವಾರ ಸಂಭ್ರಮ ಕಳೆ ಕಟ್ಟಿತ್ತು. ರಾಜಭವನದ ಗಾಜಿನ ಮನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನೆಚ್ಚಿನ ನಾಯಕರ ಹೆಸರೇಳಿ ಘೋಷಣೆ ಕೂಗುತ್ತಿದ್ದರು. ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗಲೂ ಹರ್ಷೋದ್ಘಾರ ವ್ಯಕ್ತಪಡಿಸಿ ಸಂಭ್ರಮಿಸಿದರು.

ಮುಖ್ಯಮಂತ್ರಿಯಾಗಿ…!: ರಾಜಭವನದಲ್ಲಿ ಮಂಗಳವಾರ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿಯವರು ಪ್ರಥಮ ಬಾರಿಗೆ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಎಡವಟ್ಟು ಮಾಡಿಕೊಂಡರು. ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿಗರು ಮಾಧುಸ್ವಾಮಿಯವರು ಪ್ರಮಾಣ ಸ್ವೀಕರಿಸಲು ಆಗಮಿಸುತ್ತಿದ್ದಂತೆ ಜೈಕಾರ, ಘೋಷಣೆ ಕೂಗಲಾರಂಭಿಸಿದರು.

Advertisement

ವೇದಿಕೆಗೆ ಆಗಮಿಸಿದ ಮಾಧುಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಾ, “ನಾನು ರಾಜ್ಯದ ಮುಖ್ಯಮಂತ್ರಿಯಾಗಿ… ಅಲ್ಲಲ್ಲ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ’ ಎಂದು ಹೇಳಿದ್ದು ಸಭಾಂಗಣದಲ್ಲಿದ್ದವರು ನಗೆಗಡಲಲ್ಲಿ ತೇಲುವಂತೆ ಮಾಡಿತು. ಇದರಿಂದ ಸ್ವತಃ ಮಾಧುಸ್ವಾಮಿಯವರು ಸಂಕೋಚಕ್ಕೆ ಒಳಗಾದಂತಾದರು. ರಾಜ್ಯಪಾಲ ವಜುಭಾಯಿವಾಲಾ ಅವರ ಪಕ್ಕದಲ್ಲಿ ಗಂಭೀರವಾಗಿ ನಿಂತಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಕ್ಕರು. ಬಳಿಕ ಯಡಿಯೂರಪ್ಪ ನಗುತ್ತಲೇ ಬೆನ್ನು ತಟ್ಟಿ ಹೂಗುತ್ಛ ನೀಡಿ ಅಭಿನಂದಿಸಿದರು.

50 ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯ: ಮಂಗಳವಾರ ಬೆಳಗ್ಗೆ 10.30ಕ್ಕೆ ಸರಿಯಾಗಿ ರಾಷ್ಟ್ರಗೀತೆಯೊಂದಿಗೆ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ನೂತನ ಸಚಿವರ ಹೆಸರು ಹೇಳುತ್ತಿದ್ದಂತೆ ಒಬ್ಬರ ನಂತರ ಒಬ್ಬರಂತೆ ಪ್ರಮಾಣ ವಚನ ಸ್ವೀಕರಿಸಿದರು. ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರಮಾಣ ವಚನ ಸ್ವೀಕರಿಸಿದರೆ, ಶಶಿಕಲಾ ಜೊಲ್ಲೆಯವರು ಕೊನೆಯವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕೊನೆಗೆ ರಾಜ್ಯಪಾಲರು, ಮುಖ್ಯಮಂತ್ರಿಗಳೊಂದಿಗೆ ನೂತನ ಸಚಿವರು ಸಾಮೂಹಿಕವಾಗಿ ನಿಂತು ಛಾಯಾಚಿತ್ರ ತೆಗೆಸಿಕೊಂಡ ಬಳಿಕ ರಾಷ್ಟ್ರಗೀತೆ ಮೊಳಗುವುದರೊಂದಿಗೆ ಸಮಾರಂಭಕ್ಕೆ ತೆರೆಬಿತ್ತು. ಒಟ್ಟು 50 ನಿಮಿಷದ ಕಾರ್ಯಕ್ರಮ ಬೆಳಗ್ಗೆ 11.20ರ ವೇಳೆಗೆ ಸಮಾಪ್ತಿಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next