ನವದೆಹಲಿ: ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದವರ “ಮಿ ಟೂ ಅಭಿಯಾನ’ದ ಪರಿಣಾಮ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಎಂ.ಜೆ.ಅಕ್ಬರ್ ಕಡೆಗೂ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಅಂಗೀಕರಿಸಿದ್ದಾರೆ. “”ನನ್ನ ವಿರುದ್ಧದ ಸುಳ್ಳು ಆರೋಪಗಳ ವಿರುದ್ಧ ನನ್ನ ವ್ಯಕ್ತಿಗತ ಸಾಮರ್ಥ್ಯವನ್ನು ಬಳಕೆ ಮಾಡಿ ಕೊಂಡು ನ್ಯಾಯಾಲಯದಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಇಂಥ ಸಂದರ್ಭದಲ್ಲಿ ಸರ್ಕಾರದ ಭಾಗವಾಗಿರ ಬಾರದು. ಹೀಗಾಗಿ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದಿದ್ದಾರೆ ಎಂ.ಜೆ.ಅಕ್ಬರ್. ಈಗಾಗಲೇ ಅಕ್ಬರ್ ತಮ್ಮ ವಿರುದ್ಧ ಧ್ವನಿ ಎತ್ತಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದೆಹಲಿ ಕೋರ್ಟ್‌ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಕೋರ್ಟ್ ಗುರುವಾರವೇ ವಿಚಾರಣೆಯನ್ನೂ ನಡೆಸಲಿದೆ.
ಸರ್ಕಾರದ ಮೇಲೆ ಒತ್ತಡ: ಮಿ ಟೂ ಅಭಿಯಾನ ದಲ್ಲಿ ಕೇಳಿ ಬಂದ ಹೆಸರುಗಳ ಪೈಕಿ ಹಲವರ ವಿರುದ್ಧ ಆಯಾ ಸಂಸ್ಥೆಗಳು ಕ್ರಮ ತೆಗೆದು ಕೊಂಡಿದ್ದರೆ, ಕೆಲವರು ತಾವೇ ದೂರವಾಗಿದ್ದಾರೆ. ಮಂಗಳ ವಾರವಷ್ಟೇ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಫೈರೋಜ್ ಖಾನ್ ಆರೋಪಷ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಅಲ್ಲದೇ, ಬಾಲಿವುಡ್ ನಿರ್ದೇಶಕರು, ನಿರ್ಮಾಪಕರ ವಿರುದ್ಧವೂ ಆರೋಪ ಕೇಳಿಬಂದಿದೆ. ಎಂ.ಜೆ. ಅಕ್ಬರ್ ವಿರುದಟಛಿ 20 ಪತ್ರಕರ್ತೆಯರು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಆದರೆ, ಸರ್ಕಾ ರವೂ ಕ್ರಮ ತೆಗೆದುಕೊಂಡಿರಲಿಲ್ಲ. ರಾಜೀನಾಮೆ ನೀಡಲು ನಿರಾಕರಿಸಿದ್ದರು.
ಇದು ಸರ್ಕಾರದ ಮೇಲೆ ಒತ್ತಡ ತಂದಿತ್ತು. ಈಗಾಗಲೇ ಮನೇಕಾ ಗಾಂಧಿ ಸೇರಿದಂತೆ ಸರ್ಕಾರದ ಕೆಲವು ಸಚಿವರು, ಬಿಜೆಪಿ ನಾಯಕರು, ಆರ್‌ಎಸ್‌ಎಸ್ ನಾಯಕರು ಮಿ ಟೂ ಅಭಿಯಾನದಲ್ಲಿ ಪಾಲ್ಗೊಂಡಿದ್ದವರಿಗೆ ಬೆಂಬಲ ನೀಡಿದ್ದರಿಂದ ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿತ್ತು. ಕಳೆದ ಭಾನುವಾರವೇ ನೈಜೀರಿಯಾದಿಂದ ಹಿಂದಿರುಗುತ್ತಿದ್ದಂತೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿತ್ತಾದರೂ, ಕೊಟ್ಟಿರಲಿಲ್ಲ. ಅಕ್ಬರ್ ವಿರುದ್ಧದ ಪ್ರಕರಣ ಇಂದಿನದ್ದಲ್ಲ. ಅವರು ಬೇರೆ ಪಕ್ಷದಲ್ಲಿದ್ದಾಗ ಮತ್ತು ಪತ್ರಕರ್ತರಾಗಿದ್ದಾಗ ನಡೆದ ಸಂಗತಿಗಳಾಗಿವೆ. ಹೀಗಾಗಿ ಈ ಸಂಬಂಧ ಅವರೇ ಸ್ಪಷ್ಟನೆ ಕೊಟ್ಟು ಕೊಳ್ಳಬೇಕು ಎಂಬುದು ಬಿಜೆಪಿ ವಾದವಾಗಿತ್ತು. ಇದರಿಂದಾಗಿ ಬಿಜೆಪಿಯ ಯಾವುದೇ ನಾಯ ಕರೂ ಎಂ.ಜೆ. ಅಕ್ಬರ್ ಅವರನ್ನು ಸಮರ್ಥಿಸಿ ಕೊಂಡಿರಲಿಲ್ಲ.
ಅಲೋಕ್ ವಿರುದ್ಧ ನಂದಾ ದೂರು:
ಬಾಲಿವುಡ್ ಹಿರಿಯ ನಟ ಅಲೋಕ್ ನಾಥ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ವಿನಿತಾ ನಂದಾ ಅವರು ಮುಂಬೈನಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. 19 ವರ್ಷಗಳ ಹಿಂದೆ ತಮ್ಮ ಮೇಲೆ ಅಲೋಕ್‌ನಾಥ್ ಅತ್ಯಾಚಾರ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಕೊಂಡಿಲ್ಲ.
ನಮ್ಮ ಹೋರಾಟದಿಂದಲೇ ಅಕ್ಬರ್ ರಾಜೀನಾಮೆ ನೀಡಿದ್ದಾರೆ ಎಂದು ಮಹಿಳೆಯರಾದ ನಾವೆಲ್ಲಾ ಭಾವಿಸೋಣ. ಇನ್ನು
ಕೋರ್ಟ್‌ನಲ್ಲಿ ನನಗೆ ನ್ಯಾಯ ಸಿಗುವ ದಿನವನ್ನು ನೋಡುತ್ತಿದ್ದೇನೆ.
● ಪ್ರಿಯಾ ರಮಣಿ, ಅಕ್ಬರ್ ವಿರುದ್ಧ ಧ್ವನಿ ಎತ್ತಿದ ಪತ್ರಕರ್ತೆ
ಪ್ರತಿಪಕ್ಷದವರು ನೈತಿಕತೆ ಆಧಾರದ ಮೇಲೆ ರಾಜೀನಾಮೆ ಕೇಳಿದ್ದರು. ಅವರು ಕೊಟ್ಟಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ.
● ರಾಮ್‌ದಾಸ್ ಅಠಾವಳೆ, ಕೇಂದ್ರ ಸಚಿವ