ರಾಜ್ಯದಲ್ಲಿ ದಶಕಗಳ ಹಿಂದೆ ಕಬ್ಬಿಣ ಅದಿರಿನ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದ ವೇಳೆ ಭಾರೀ ಅಕ್ರಮ, ಭ್ರಷ್ಟಾಚಾರಗಳು ನಡೆದಿದ್ದವು. ಸೀಮಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದು ಗಣಿ ಉದ್ಯಮಿಗಳು ಆ ಬಳಿಕ ಗಣಿಗಾರಿಕೆ ಪ್ರದೇಶ ಮತ್ತು ಅವಧಿಯನ್ನು ವಿಸ್ತರಿಸಿಕೊಂಡು ಹೋಗುವ ಮೂಲಕ ಬೇಕಾಬಿಟ್ಟಿಯಾಗಿ ಗಣಿಗಾರಿಕೆ ನಡೆಸುತ್ತಿದ್ದುದರಿಂದಾಗಿ ಸರಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ತೆರಿಗೆ ಹಣ ವಂಚಿಸಲಾಗಿತ್ತು. ಗಣಿ ಗುತ್ತಿಗೆ ವಹಿಸಿಕೊಂಡ ಕಂಪನಿಗಳು, ಗಣಿ ಉದ್ಯಮಿಗಳು ನೈಸರ್ಗಿಕ ಸಂಪನ್ಮೂಲವನ್ನು ಕೊಳ್ಳೆ ಹೊಡೆಯುತ್ತಿರುವ ಸಂಬಂಧ ಪರಿಸರವಾದಿಗಳು ದನಿ ಎತ್ತಿ ಸುಪ್ರೀಂ ಕೋರ್ಟ್‌ನ ಕದತಟ್ಟಿದ್ದ ಪರಿಣಾಮ 2012ರಲ್ಲಿ ಕೋರ್ಟ್ ರಾಜ್ಯದಿಂದ ಕಬ್ಬಿಣದ ಅದಿರಿನ ರಫ್ತಿಗೆ ನಿಷೇಧ ಹೇರಿತ್ತು.
ಪರಿಸರ ರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ನಿಟ್ಟಿನಲ್ಲಿ ಸುಪ್ರೀಂನ ಈ ತೀರ್ಪು ಅತ್ಯಂತ ಮಹತ್ವವನ್ನು ಪಡೆದುಕೊಂಡಿತ್ತು. ಇದರಿಂದಾಗಿ ಗಣಿದಾರರ ದಾಷ್ಟéìತನಕ್ಕೆ ಮತ್ತು ಅಮೂಲ್ಯ ನೈಸರ್ಗಿಕ ಸಂಪನ್ಮೂಲದ ಕೊಳ್ಳೆಗೆ ಕಡಿವಾಣ ಬಿದ್ದಿತ್ತು. ಈ ಕಠಿಣ ಆದೇಶದಿಂದ ಇಡೀ ರಾಜ್ಯ ಸರಕಾರವನ್ನೇ ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದ ಗಣಿ ಉದ್ಯಮಿಗಳ ಹಾರಾಟ ಮತ್ತು ಗಣಿಗಾರಿಕೆ ವಿಚಾರವಾಗಿ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ರಾಜಕೀಯ ರಂಪಾಟಕ್ಕೆ ತೆರೆಬಿದ್ದಿತ್ತು.
ಸುಪ್ರೀಂನ ಈ ತೀರ್ಪಿಗೂ ಮುನ್ನ ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ನಡೆಸಿ ಭೂಗರ್ಭದಿಂದ ಹೊರ ತೆಗೆಯಲಾಗಿದ್ದ ಕಬ್ಬಿಣದ ಅದಿರಿನ ಮಾರಾಟ ಮತ್ತು ರಫ್ತಿಗೆ ಕೂಡ ಅನುಮತಿಯನ್ನು ನಿರಾಕರಿಸಲಾಗಿತ್ತು. ಇದರಿಂದಾಗಿ ಕೋಟ್ಯಂತರ ರೂ. ಮೌಲ್ಯದ ಅದಿರು ಪಾಳು ಬೀಳುವಂತಾಗಿತ್ತು. ಮಾತ್ರವಲ್ಲದೆ ಇದರ ಸಂರಕ್ಷಣೆ ಕೂಡ ಉದ್ಯಮಿಗಳಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಸಂಬಂಧ ಹಲವಾರು ಬಾರಿ ಗಣಿ ಉದ್ಯಮಿಗಳು ಮನವಿ ಸಲ್ಲಿಸುತ್ತ ಬಂದಿದ್ದರೂ ಕೋರ್ಟ್ ಇದನ್ನು ಮಾನ್ಯ ಮಾಡಿರಲಿಲ್ಲ. ಈಗ ಕೊನೆಗೂ ತ್ರಿಸದಸ್ಯ ಪೀಠ ಕೇಂದ್ರ ಸರ ಕಾರದ ನಿಲುವನ್ನು ಗಮನದಲ್ಲಿರಿಸಿ ಈ 3 ಜಿಲ್ಲೆಗಳಲ್ಲಿ ಈಗಾಗಲೇ ಗಣಿಗಾರಿಕೆ ನಡೆಸಲಾದ ಕಬ್ಬಿಣದ ಅದಿರಿನ ಮಾರಾಟ ಮತ್ತು ರಫ್ತಿಗೆ ಅನುಮತಿ ನೀಡಿದೆ. ಇ-ಹರಾಜನ್ನು ಆಶ್ರಯಿಸದೆ ನೇರ ಒಪ್ಪಂದ ಮಾಡಿಕೊಳ್ಳುವ ಮೂಲಕ ಕಬ್ಬಿಣದ ಅದಿರು ಗಣಿಗಳ ಹಂಚಿಕೆಗೆ ಅನುಮತಿಯನ್ನೂ ನೀಡಿದೆ. ಗಣಿಗಾರಿಕೆ ನಡೆಸಲಾಗುವ ಕಬ್ಬಿಣದ ಅದಿರನ್ನು ಕೇಂದ್ರದ ನೀತಿ ನಿಯಮಾವಳಿಗಳಿಗನುಸಾರವಾಗಿ ವಿದೇಶಗಳಿಗೆ ರಫ್ತು ಮಾಡಲೂ ಕೋರ್ಟ್ ಸಮ್ಮತಿಸಿದೆ.
ಸುಪ್ರೀಂನ ಈ ಆದೇಶದಿಂದಾಗಿ ರಾಜ್ಯದ ಅದರಲ್ಲೂ ಈ ಮೂರು ಜಿಲ್ಲೆಗಳ ಗಣಿ ಕಂಪೆನಿಗಳು ಮತ್ತು ಉದ್ಯಮಿಗಳು ನಿಟ್ಟುಸಿರು ಬಿಡು ವಂತಾಗಿದೆ. ಆದರೆ ಅದಿರು ರಫ್ತು ಮತ್ತು ಗಣಿಗಳ ಹಂಚಿಕೆಗೆ ನೀಡಿರುವ ಅನುಮತಿಯನ್ನು ಉದ್ಯಮಿಗಳಾಗಲಿ, ಕಂಪೆನಿಗಳಾಗಲಿ, ದುರುಪ ಯೋಗ ಪಡಿಸಿಕೊಂಡಿದ್ದೇ ಆದಲ್ಲಿ ಮತ್ತೆ ನಿಷೇಧದ ಸಾಧ್ಯತೆಯಂತೂ ಇದೆ. ನೈಸರ್ಗಿಕ ಸಂಪನ್ಮೂಲದ ಸದುಪಯೋಗದ ದೃಷ್ಟಿಯಿಂದ ಸರ ಕಾರದ ನೀತಿ, ನಿಯಮಾವಳಿಗಳಿಗನುಸಾರವಾಗಿ ಈ ಅನುಮತಿ ಯನ್ನು ನೀಡಲಾಗಿದೆಯೇ ವಿನಾಃ ನೈಸರ್ಗಿಕ ಸಂಪನ್ಮೂಲಕ್ಕೆ ಕನ್ನ ಹಾಕಲು ಅಥವಾ ಪರಿಸರಕ್ಕೆ ಹಾನಿ ಉಂಟು ಮಾಡಲು ಅಲ್ಲ ಎಂಬು ದನ್ನು ಗಣಿ ಉದ್ಯಮಿಗಳು, ಕಂಪೆನಿಗಳು ಮೊದಲು ಅರ್ಥೈಸಿಕೊಳ್ಳಬೇಕು.