Advertisement
ಕನಿಷ್ಠ ಪಕ್ಷ ನಮ್ಮ ನೂತನ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗೆ ದಕ್ಕಿರುವ ಖಾತೆಗೆ ಸಂಬಂಧಿಸಿದಂತೆ ತಮಗಿರುವ ಇತಿಮಿತಿ ಏನೆಂಬುದು ಗೊತ್ತಿದೆ; ಅವರು ಒಂದು ಹೇಳಿಕೆ ನೀಡುವ ಮೂಲಕ ತಮಗಿರುವ ಮಿತಿಯನ್ನು ವಿನಯ ಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಅಥವಾ ಅವರ ಈ ನಡೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಇತರ ಸಚಿವರಲ್ಲಿರುವಂತೆ ತಮಗೆ ದಕ್ಕಿದ ಸಚಿವ ಖಾತೆಯ ಬಗೆಗಿನ “ಆತೃಪ್ತಿ’ಯ ಪ್ರಕಟನೆಯೂ ಆಗಿದ್ದೀತು. ಇತರ ಖಾತೆಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣ ಖಾತೆ “ಕಡಿಮೆ ಆಕರ್ಷಕ’ ಎಂಬುದು ದೇವೇಗೌಡರ ಭಾವನೆಯಾಗಿ ದ್ದಿರಲೂಬಹುದು! ಉನ್ನತ ಶಿಕ್ಷಣ ಖಾತೆ ನಮ್ಮ ಹುಡುಗ ಹುಡುಗಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹೊಣೆಗಾರಿಕೆಯನ್ನು ಒಳಗೊಂಡಿರುವುದರಿಂದ ನಿಜಕ್ಕೂ ಇದೊಂದು ಘನತೆವೆತ್ತ ಖಾತೆಯೇ ಹೌದು. ಈ ಖಾತೆಯನ್ನು ನಿರ್ವಹಿಸುವ ಸಚಿವರು 300ಕ್ಕೂ ಹೆಚ್ಚು ವಿ.ವಿ.ಗಳೊಂದಿಗೆ ವಿ.ವಿ. ಅನುದಾನ ಆಯೋಗ (ಯುಜಿಸಿ)ದೊಂದಿಗೆ, ಭಾರತ ಸರಕಾರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ
ದೊಂದಿಗೆ ವ್ಯವಹರಿಸ ಬೇಕಾಗುತ್ತದೆ. ಕುಲಪತಿಯಂಥ ಹುದ್ದೆಗಳಿಗೆ ಹಾಗೂ ವಿ ವಿ ಸಿಂಡಿಕೇಟ್‌ನಂಥ ಘಟಕಗಳಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವಂಥ ಕೆಲಸಗಳನ್ನು ನಿಭಾಯಿಸ ಬೇಕಾಗುತ್ತದೆ. ಈಚಿನ ದಶಕಗಳಲ್ಲಿ ಈ ಖಾತೆಯನ್ನು ಡಾ| ಜಿ. ಪರಮೇಶ್ವರ ಹಾಗೂ ಡಿ.ಎಚ್. ಶಂಕರಮೂರ್ತಿಯವರು ಸಮರ್ಥವಾಗಿ ನಿಭಾಯಿ ಸಿದ್ದಾರೆ. ಉನ್ನತ ಶಿಕ್ಷಣ ಖಾತೆಯ ಮಾಜಿ ಸಚಿವ ಬಸವರಾಜ ರಾಯರೆಡ್ಡಿ (ಈ ಚುನಾವಣೆಯಲ್ಲವರು ಸೋಲುಂಡಿದ್ದಾರೆ)ನಮ್ಮ ವಿವಿಗಳು ಹೇಗೆ ತೊಂದರೆ ತಾಪತ್ರಯ ಎದುರಿಸುತ್ತಿವೆ ಎಂಬುದನ್ನು ಒಪ್ಪಿಕೊಂಡು ಪ್ರಾಮಾಣಿಕತೆ ಮೆರೆದಿದ್ದಾರೆ. ನಮ್ಮ ವೈಸ್‌ಚಾನ್ಸಲರ್‌ಗಳು ಭ್ರಷ್ಟರು ಎಂಬ ಮಾತನ್ನವರು ಒಂದಲ್ಲ, ಅನೇಕ ಸಲ ಹೇಳಿದ್ದಾರೆ!
Related Articles
Advertisement
ಈ ನಡುವೆ, ಜಿ.ಟಿ. ದೇವೇಗೌಡರನ್ನು ಮಂತ್ರಿಯಾಗಿ ನೇಮಿಸುವ ಅಗತ್ಯವೇನಿದೆ ಎಂದು ವಾದಿಸುವ ಸಾಧ್ಯತೆಯೂ ಇದೆ. ಅವರಿಗೆ ಮಂತ್ರಿ ಪದವಿ ನೀಡಿದ್ದು ಚಾಮುಂಡೇ ಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿದ್ದಕ್ಕಾಗಿಯೇ? ಈ ಹಿಂದೆಯೂ ಅವರು ಸಚಿವ ಪದವಿ ಅನುಭವಿಸಿದ್ದಾರೆ. ಪಕ್ಷದಲ್ಲಿ ಕಳಪೆ ಅರ್ಹತೆಯವರು ಸಾಕಷ್ಟು ಜನರಿ ದ್ದಾರೆಂಬುದೇನೋ ನಿಜವೇ; ಆದರೂ ಜೆಡಿಎಸ್‌ನ ಇತರ ಯಾರನ್ನಾದರೂ ಮಂತ್ರಿಗಿರಿಗೆ ಆಯ್ದುಕೊಳ್ಳಬಹುದಾಗಿತ್ತು. ದೇವೇಗೌಡರನ್ನು ಸ್ವಲ್ಪ ಪಕ್ಕಕ್ಕಿರಿಸಿ ನೋಡುವುದಾದರೆ ಕಾಂಗ್ರೆಸ್ ಹಾಗೂ ಜೆಡಿ(ಎಸ್)ಗಳಲ್ಲಿ ಈಗ ಮೊಳಗುತ್ತಿರುವ ಅಪಸ್ವರಗಳು “ಆಕರ್ಷಕ’ ಖಾತೆಗಳನ್ನು ಬಾಚಿಕೊಳ್ಳುವುದು ಹೇಗೆ ಎಂಬುದಕ್ಕೆ ಸಂಬಂಧಿಸಿವೆ. ಇದಕ್ಕಷ್ಟೆ ಪ್ರಾಮುಖ್ಯ; ರಾಜ್ಯದ ಜನತೆಯ ಕಲ್ಯಾಣಕ್ಕೆ ಕೊಡಬೇಕಾದ ಸ್ಥಾನ ಅಮೇಲಿನದು ಎಂಬಂತಾಗಿದೆ. ಕೋಮುವಾದಿ ಬಿಜೆಪಿಯಿಂದ ರಾಜ್ಯವನ್ನು ರಕ್ಷಿಸಬೇಕೆಂಬ ಹಾಗೂ ಬಿಜೆಪಿ ತನ್ನ ಹಿಂದಿನ ಆಳ್ವಿಕೆಯಲ್ಲಿ ಮೆರೆದ ದುರಾಡಳಿತದಿಂದ ಜನರನ್ನು ಕಾಪಾಡಬೇಕೆಂಬ ವಾದದೊಂದಿಗೆ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಿ ಎರಡೂ ಪಕ್ಷಗಳು ಮೈತ್ರಿ ಸಾಧಿಸಿ ಅಧಿಕಾರಕ್ಕೆ ಬಂದವು. ಜನತಾದಳ (ಜಾತ್ಯತೀತ) ತಾನು ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುತ್ತಿದ್ದರೂ ಅದೀಗ ಜಾತ್ಯತೀತ ಎಂಬು ದಕ್ಕಿಂತಲೂ ಹೆಚ್ಚಿನಮಟ್ಟಿಗೆ ಒಂದು ಜಾತಿ ಆಧಾರಿತ ಪಕ್ಷವಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಒಬ್ಬ ಮುಖ್ಯಮಂತ್ರಿ ಒಂದು ನಿರ್ದಿಷ್ಟ ಜಾತಿ (ಒಕ್ಕಲಿಗ ಸಮುದಾಯ)ಗೆ ಸೇರಿದ್ದಲ್ಲಿ, ಆತನ ಸಂಪುಟದಲ್ಲಿ ಸ್ವಜಾತಿಯವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ತಮ್ಮ ಸರಕಾರದಲ್ಲಿ ಒಕ್ಕಲಿಗರ ಸಂಖ್ಯೆಗೆ ಕಡಿವಾಣ ಹಾಕಬಹುದಿತ್ತು.
ಈ 2 ಪಕ್ಷಗಳು ಹಣಕಾಸು ಖಾತೆಗಾಗಿ ನಡೆಸಿದ ಮೇಲಾಟಕ್ಕೀಗ ತೆರೆಬಿದ್ದಿದೆ; ಈ ಪೈಪೋಟಿಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಹಣಕಾಸು ಖಾತೆಯೇ ಇತರ ಎಲ್ಲವುಗಳಿಗಿಂತ ಪ್ರಮುಖ. ಏಕೆಂದರೆ ಸರಕಾರದ ಇತರ ಖಾತೆಗಳಿಗೆ “ಇನಾಮು’ ಬಟವಾಡೆ ಯಾಗುವುದು ಅದರ ಮೂಲಕವೇ. ವಿತ್ತ ಖಾತೆಗೆ ಸಂಬಂಧಿಸಿದ ಸಚಿವ, ಸರಕಾರಕ್ಕೆ ದೊರೆಯುವ ಆದಾಯದ ಪಾಲಿಗೆ ಅಕ್ಷರಶಃ ಯಜಮಾನನಾಗಿರುತ್ತಾನೆ; ವಿವಿಧ ವಿಭಾಗಗಳಿಗೆ ಸಲ್ಲಬೇಕಾದ ಮೊತ್ತಗಳನ್ನು ಪಾಲು ಮಾಡಿ ಹಂಚುತ್ತಾನೆ; ವಾರ್ಷಿಕ ಬಜೆಟ್‌ನಲ್ಲಿ ಸರಕಾರದ ಹೊಸ ಯೋಜನೆಗಳನ್ನು ಘೋಷಿಸುತ್ತಾನೆ. ವಾಣಿಜ್ಯ ತೆರಿಗೆಗಳಲ್ಲಿ ಏಕರೂಪತೆ ಸಾಧಿಸುವ ಆಶಯದ ಜಿಎಸ್‌ಟಿ ನಿಯಮ ಜಾರಿಗೆ ಬಂದಿದೆ ಯೇನೋ ಹೌದು; ಆದರೂ ಹಣಕಾಸು ಖಾತೆ, ಉಳಿದವುಗಳಿಗೆ ಹೋಲಿಸಿದರೆ ದೊಡ್ಡಣ್ಣನೇ. ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಮುಂಚಿನ ವರ್ಷದಲ್ಲಿ ಹಂಗಾಮಿ ಸರಕಾರ ಇತ್ತು; ಆಗ ಈ ಖಾತೆಯನ್ನು ನಿರ್ವಹಿಸಿದ್ದ ಮುಸ್ಲಿಂ ಲೀಗ್ ನಾಯಕ ಲಿಯಾಕತ್ ಅಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಹಣದ ನೆರವು ಒದಗಿಸುತ್ತಿದ್ದ ವಾಣಿಜ್ಯೋದ್ಯಮಿಗಳನ್ನು ಹಾಗೂ ಕೈಗಾರಿಕೋದ್ಯಮಿಗಳನ್ನು ಶಿಕ್ಷಿಸುವ ಉದ್ದೇಶದಿಂದೆಂಬಂತೆ ತೆರಿಗೆ ದರ ಜಾರಿಗೊಳಿಸುವ ಮೂಲಕ ಹಣಕಾಸು ಖಾತೆಯನ್ನು ದುರುಪಯೋಗಪಡಿಸಿದ್ದು ಈಗ ಇತಿಹಾಸ. ಇದೇ ರೀತಿ ಜನತಾಪಕ್ಷ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದಾಗ ಅಂದಿನ ಉಪಪ್ರಧಾನಿ ಚೌಧುರಿ ಚರಣ್‌ಸಿಂಗ್ ಅವರು ಸರಕಾರವನ್ನು ಒಳಗಿಂದೊಳಗೇ ಭಗ್ನಗೊಳಿಸುವ ರೀತಿಯಲ್ಲಿ “ಬಜೆಟ್ ಪ್ರಹಾರ’ ನಡೆಸಿದ್ದರು.
ಪಾಟೀಲ್ ಸವಾಲುಇದೀಗ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ, ಸಚಿವ ಪದವಿಯನ್ನಾಗಲಿ, ಉಪ ಮುಖ್ಯಮಂತ್ರಿ ಹುದ್ದೆಯನ್ನಾಗಲಿ ಪಡೆದುಕೊಳ್ಳುವುದಕ್ಕೆ ಯಾವುದೇ “ಮೂಲಭೂತ’ ಹಕ್ಕಿಲ್ಲವೆಂದು; ಹಾಗೆಯೇ ಅವರು ಉಳಿದವರಿಗಿಂತ ಹೆಚ್ಚಿನ ಅರ್ಹತೆ ಯೋಗ್ಯತೆ ಹೊಂದಿಲ್ಲವೆಂದು ಯಾರಾದರೂ ಸ್ಪಷ್ಟವಾಗಿ ತಿಳಿ ಹೇಳಬೇಕಾದ ಸಮಯ ಒದಗಿಬಂದಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ಅತ್ಯುತ್ತಮ ಯೋಗ್ಯತೆಯುಳ್ಳ , ಸಮಚಿತ್ತದ ರಾಜಕಾರಣಿ ಗಳಲ್ಲೊಬ್ಬರಾದ ಎಚ್.ಕೆ. ಪಾಟೀಲ್ ಅವರ ಮಂತ್ರಿಗಿರಿಯ ಹಕ್ಕು ಸಾಧನೆಯನ್ನು ಕಡೆಗಣಿಸಿದೆಯೆಂದೇ ಹೇಳಬೇಕು. ಅವರಿಗೆ ಕನಿಷ್ಠ ಪಕ್ಷ ಓರ್ವ ಉಪಮುಖ್ಯಮಂತ್ರಿಯಾಗುವ ಯೋಗ್ಯತೆಯಂತೂ ಇದ್ದೇ ಇದೆ. ಮುಖ್ಯಮಂತ್ರಿಗಳು ಹಳೇ ಮೈಸೂರು ಸೀಮೆಯವರು; ಹೀಗಿರುತ್ತ ಉಪಮುಖ್ಯಮಂತ್ರಿ ಉತ್ತರ ಕರ್ನಾಟಕದವರಾಗಿರಲಿ ಎಂಬ ವಾದ ಹೆಚ್ಚು ತರ್ಕ ಬದ್ಧವಾಗಿದೆ. ಆ ಹುದ್ದೆಗೆ ಇತರರಿಗಿಂತಲೂ ಹೆಚ್ಚು ಅರ್ಹರಾಗಿದ್ದವರು ಎಚ್.ಕೆ. ಪಾಟೀಲರೇ.