Advertisement

ಪಂಚಾಯತ್‌ ಅಧ್ಯಕ್ಷರಿಗೆ ಕನಿಷ್ಠ ವಿದ್ಯಾರ್ಹತೆ ಪ್ರಗತಿಗಾಮಿ ಸಲಹೆ

10:17 AM Nov 29, 2017 | |

ಪ್ರಜಾಸತ್ತೆಯ ತಳಹದಿ ಎಂದೇ ಪರಿಗಣಿಸಲ್ಪಟ್ಟಿರುವ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರಾಗುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸುವ ಸಂಬಂಧ ಇದೀಗ ಮತ್ತೆ ಚರ್ಚೆ ಆರಂಭಗೊಂಡಿದೆ. ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಇಂತಹ ಒಂದು ನಿಯಮ ಈಗಾಗಲೇ ರಾಜಸ್ಥಾನ ಮತ್ತು ಹರಿಯಾಣದಲ್ಲಿ ಜಾರಿಯಲ್ಲಿದ್ದು, ಇದೇ ಮಾದರಿಯನ್ನು ಅನುಸರಿಸುವಂತೆ ಸಚಿವರು ಎಲ್ಲ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.   ರಾಜಸ್ಥಾನ ಮತ್ತು ಹರಿಯಾಣದಲ್ಲಿನ ಬಿಜೆಪಿ ಸರಕಾರಗಳು 2015ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ಕಾಯಿದೆಯ ಪ್ರಕಾರ ಪಂಚಾಯತ್‌ ಚುನಾವಣೆಗಳಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

Advertisement

ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆಯಲ್ಲಿ ಒಂದಿಷ್ಟು ವಿನಾಯಿತಿ ನೀಡಲಾಗಿದೆ. ಈ ಎರಡು ಸರಕಾರಗಳು ಜಾರಿಗೆ ತಂದ ತಿದ್ದುಪಡಿ ಕಾಯಿದೆಯ ವಿರುದ್ಧ ಕೆಲ ಸಾಮಾಜಿಕ ಕಾರ್ಯಕರ್ತರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರಾದರೂ ಅವರ ಮನವಿಯನ್ನು ನ್ಯಾಯಾಲಯಗಳು ತಿರಸ್ಕರಿಸುವ ಮೂಲಕ ತಿದ್ದುಪಡಿ ಕಾಯಿದೆಯನ್ನು ಎತ್ತಿಹಿಡಿದಿದ್ದವು. ಸರಿ-ತಪ್ಪು, ಒಳಿತು-ಕೆಡುಕುಗಳ ನಿರ್ಧಾರವನ್ನು ಶಿಕ್ಷಣದಿಂದಲಷ್ಟೇ ಮಾಡಲು ಸಾಧ್ಯವಾಗಿರುವುದರಿಂದ ಉತ್ತಮ ಆಡಳಿತದ ದೃಷ್ಟಿಯಿಂದ ಶೈಕ್ಷಣಿಕ ಅರ್ಹತೆಯನ್ನು ಅಪ್ರಸ್ತುತ ಎಂದು ಪರಿಗಣಿಸಲು ಸಾಧ್ಯವಾಗದು ಎಂದಿತ್ತು ಸುಪ್ರೀಂ ಕೋರ್ಟ್‌. ದೇಶದ ಸಂವಿಧಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಜನರಿಗೆ ವಿವಿಧ ಅರ್ಹತೆ, ಷರತ್ತುಗಳನ್ನು ವಿಧಿಸಲಾಗಿದೆ ಯಾದರೂ ಸ್ಪರ್ಧಾಳುಗಳ ಶೈಕ್ಷಣಿಕ ಅರ್ಹತೆಯ ಬಗೆಗೆ ಮಾತ್ರ ಎಲ್ಲೂ ಉಲ್ಲೇಖವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರುಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿ ಪಡಿಸುವುದು ಎಷ್ಟು ಸರಿ?; ಈ ನಿಯಮ ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸುವವರಿಗೇಕಿಲ್ಲ? ಎಂಬ ಪ್ರಶ್ನೆಗಳನ್ನು ಈ ನಿಯಮಾವಳಿಯ ವಿರೋಧಿಗಳು ಎತ್ತುತ್ತಲೇ ಬಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಮಕ್ಕಳು ಶಿಕ್ಷಣದಿಂದ ಒಂದಿಷ್ಟು ದೂರವುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಂಚಾಯತ್‌ ಸಂಸ್ಥೆಗಳಿಗೆ ಸ್ಪರ್ಧಿಸುವವರಿಗೆ ಸರಕಾರ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸುವುದು ಸರಿಯಲ್ಲ ಎಂಬುದು ಇವರ ವಾದ. ಶಿಕ್ಷಣದ ಮಹತ್ವದ ಕುರಿತಂತೆ ಸಮಾಜದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಪರಿಣಾಮಕಾರಿ ಹೆಜ್ಜೆಯಾಗಬಹುದು ಮತ್ತು ಇದರಿಂದ ಪೋಷಕರು ತಮ್ಮ ಮಕ್ಕಳಿಗೆ ಒಂದಿಷ್ಟು ಶಿಕ್ಷಣ ಕೊಡಿಸಿಯಾರು ಎಂಬ ಆಶಯದಲ್ಲಿ ಇದರ ಹಿಂದೆ ಇದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿನ ಶೈಕ್ಷಣಿಕ ಮೂಲಸೌಕರ್ಯಗಳ ಶೋಚನೀಯ ಪರಿಸ್ಥಿತಿಯನ್ನು ಸುಧಾರಿಸದೇ ಇಂತಹ ನಿರ್ಬಂಧಗಳನ್ನು ಹೇರುವುದರಿಂದ ಸಮಾಜದ ಒಂದು ವರ್ಗವನ್ನು ಆಡಳಿತ ವ್ಯವಸ್ಥೆಯಿಂದ ದೂರ ಇರಿಸಿದಂತಾಗದೇ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. 

ಈ ಎಲ್ಲ ಗೊಂದಲ, ಸವಾಲುಗಳ ನಡುವೆ ಇದೀಗ ಸಚಿವೆ ಮೇನಕಾ ಗಾಂಧಿ ಪಂಚಾಯತ್‌ ಅಧ್ಯಕ್ಷರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಲು ಮುಂದಾಗಿರುವುದಕ್ಕೆ ಸಹಜವಾಗಿಯೇ ವಿರೋಧಗಳು ವ್ಯಕ್ತವಾಗತೊಡಗಿವೆ. ಓರ್ವ ಉತ್ತಮ ಆಡಳಿತಗಾರನಾಗಬೇಕಾದಲ್ಲಿ ಆತ ವಿದ್ಯಾವಂತ ಆಗಬೇಕೆಂದೇನೂ ಇಲ್ಲ. ಹಾಗೊಂದು ವೇಳೆ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿಗೊಳಿಸುವುದೇ ಆದಲ್ಲಿ ಅದು ಪ್ರಜಾಸತ್ತೆಯ ಮೇಲ್‌ಸ್ತರಗಳಾದ ಸಂಸತ್‌ ಮತ್ತು ವಿಧಾನಸಭೆ ಚುನಾವಣೆಯಿಂದಲೇ ಆರಂಭಗೊಳ್ಳಲಿ ಎಂಬುದು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯ. 

ಪರ-ವಿರೋಧಗಳೇನೇ ಇರಬಹುದು. ಸುಪ್ರೀಂಕೋರ್ಟ್‌ ಈ ಹಿಂದೆ ವ್ಯಕ್ತಪಡಿಸಿದ ಅಭಿಪ್ರಾಯದಂತೆ ಪಂಚಾಯತ್‌ ರಾಜ್‌ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸುವ ಕೇಂದ್ರ ಸರಕಾರದ ಸಲಹೆ ಪ್ರಗತಿಗಾಮಿ ನಡೆ ಎನ್ನಲಡ್ಡಿ ಇಲ್ಲ. ಪ್ರಜಾಸತ್ತೆಯ ತಳಹದಿಯಿಂದ ಈ ನಿಯಮವನ್ನು ಜಾರಿಗೆ ತಂದು ಕ್ರಮೇಣ ಇದನ್ನು ತಾಲೂಕು, ಜಿಲ್ಲೆ, ವಿಧಾನಸಭೆ ಮತ್ತು ಸಂಸತ್‌ ಮಟ್ಟಕ್ಕೆ ವಿಸ್ತರಿಸಿದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಸದೃಢಗೊಳ್ಳುವುದರಲ್ಲಿ ಸಂಶಯವಿಲ್ಲ. ಇದೇ ವೇಳೆ ಕನಿಷ್ಠ ವಿದ್ಯಾರ್ಹತೆಯನ್ನು ಪಡೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ನೀಡುವ ಮತ್ತು ಅಂತಹ ವ್ಯವಸ್ಥೆಯನ್ನು ರೂಪಿಸುವ ಹೊಣೆಯೂ ಸರಕಾರದ್ದಾಗಿದೆ. “ಸರ್ವರಿಗೂ ಶಿಕ್ಷಣ’ ಕೇವಲ ಘೋಷಣೆಯಾಗಿ ಉಳಿಯದೇ ಅದನ್ನು ಸಾಕಾರಗೊಳಿಸಲೇಬೇಕಿದೆ. ಜನಪ್ರತಿನಿಧಿಯಾದವನಿಗೆ ಶೈಕ್ಷಣಿಕ ವಿದ್ಯಾರ್ಹತೆಯ ಜತೆಜತೆಯಲ್ಲಿ ವಿವೇಕ, ಪ್ರೇರಣೆ, ಸಂಕಲ್ಪ ಮತ್ತು ಬದ್ಧತೆ ಅತಿಮುಖ್ಯ ಎಂಬುದನ್ನು ನಾವು ಮರೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next