ಉಡುಪಿ: ಬನ್ನಂಜೆಯಲ್ಲಿ ಹಳೆ ಡಿಸಿ ಕಚೇರಿ(ಈಗಿನ ತಾಲೂಕು ಕಚೇರಿ) ಆವರಣದಲ್ಲಿ 10 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿರುವ “ಮಿನಿ ವಿಧಾನ ಸೌಧ’ ನಿರ್ಮಾಣ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ.
ನೆಲ ಅಂತಸ್ತು ಮತ್ತು ಎರಡು ಅಂತಸ್ತುಗಳ ಭವ್ಯ ಕಟ್ಟಡ ಇದಾಗಿದ್ದು ತಹಶೀಲ್ದಾರ್ ಕಚೇರಿ, ಆಹಾರ ಮತ್ತು ನಾಗರಿಕ ಪೂರೈಕೆ ಕಚೇರಿ, ಚುನಾವಣಾ ಶಾಖೆ, ರೆಕಾರ್ಡ್ ರೂಂ, ಸರ್ವೆ ವಿಭಾಗ ಹಾಗೂ ಉಡುಪಿ ಶಾಸಕರ ಕಚೇರಿಯನ್ನೊಳಗೊಂಡಿರುತ್ತದೆ. ಸಾಕಷ್ಟು ವಿಶಾಲ ಕಚೇರಿಗಳಿಗೆ ಸ್ಥಳಾವಕಾಶವಿದೆ. ವಾಹನ ಪಾರ್ಕಿಂಗ್, ಅಂಗವಿಕಲರಿಗೆ ರ್‍ಯಾಂಪ್ ಹಾಗೂ ಲಿಫ್ಟ್ ವ್ಯವಸ್ಥೆಗಳಿರುತ್ತವೆ.
“ಇನ್ನು ಪೈಂಟಿಂಗ್, ವಿದ್ಯುತ್ ಸಂಪರ್ಕ ಮೊದಲಾದ ಕೆಲಸಗಳು ಮಾತ್ರ ಬಾಕಿ ಇವೆ. ಇವೆಲ್ಲವು ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿವೆ’ ಎಂದು ಕಾಮಗಾರಿ ನಿರ್ವಹಿಸುತ್ತಿರುವ ಕರ್ನಾಟಕ ಹೌಸಿಂಗ್ ಬೋರ್ಡ್‌ನ ಎಂಜಿನಿಯರ್ ತಿಳಿಸಿದ್ದಾರೆ.
ಹೊಸ ಕಟ್ಟಡದಲ್ಲಿ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿರು ವುದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಹೊಸ ಕಟ್ಟಡವು ಒಟ್ಟು 43,177 ಚದರಡಿ ವಿಸ್ತೀರ್ಣ ಹೊಂದಿದೆ. ತಹಶೀಲ್ದಾರ್ ಕೊಠಡಿ ಮತ್ತು ಶಾಸಕರ ಕಚೇರಿಗಳಿಗೆ ಹವಾ ನಿಯಂತ್ರಕವನ್ನು ಅಳವಡಿಸಲು ಅವಕಾಶ ನೀಡಲಾಗಿದೆ.