ವಿಧಾನಪರಿಷತ್ತು: ಗಣಿ ಬಾಧಿತ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 24 ಸಾವಿರ ಕೋಟಿ ರೂ. ಮೊತ್ತದ “ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳ ಸಮಗ್ರ ಪರಿಸರ ಯೋಜನೆ’ಯ ಅನುಷ್ಠಾನದ ಅನುಮತಿಗಾಗಿ ಎಂಟು ಬಾರಿ ಸುಪ್ರೀಂಕೋರ್ಟ್ ಕದ ತಟ್ಟಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕೆ.ಎ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸುಪ್ರೀಂಕೋರ್ಟ್ ಆದೇಶದಂತೆ ಗಣಿ ಬಾಧಿತ ಪ್ರದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿಗೆ ಪೂರಕವಾದ ಪರಿಸರ ಪುನಶ್ಚೇತನ, ಕೃಷಿ, ನೈರ್ಮಲ್ಯ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು 2018ರಲ್ಲಿ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದರು.
ಈ ಯೋಜನೆಗೆ ಸುಪ್ರೀಂಕೋರ್ಟ್ ಅನುಮೋದನೆ ಸಿಕ್ಕಿಲ್ಲ. ಅನುಮೋದನೆ ಪಡೆದುಕೊಳ್ಳಲು ಅಡ್ವೋಕೇಟ್ ಜನರಲ್, ಸಾಲಿಸಿಟರ್ ಜನರಲ್ ಮುಖಾಂತರ ಸುಮಾರು ಎಂಟು ಬಾರಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಲಾಗಿದೆ. ಅಲ್ಲದೇ 2022ರ ಜನೆವರಿ ಅಂತ್ಯದವರೆಗೆ 19 ಸಾವಿರ ಕೋಟಿ ರೂ. ಸಂಗ್ರಹವಾಗಿದ್ದು, ಈ ಹಣ ಸುಪ್ರೀಂಕೋರ್ಟ್ ರಚಿಸಿರುವ ಮೇಲ್ವಿಚಾರಣಾ ಸಮಿತಿಯ ಸುಪರ್ದಿಯಲ್ಲಿದೆ ಎಂ ದು ಸಚಿವರು ತಿಳಿಸಿದರು.
ಇದನ್ನೂ ಓದಿ:ಖಾಸಗಿ ಸಂಸ್ಥೆಗಳು ಅಕ್ರಮವಾಗಿ ನೆಲ ಅಗೆದಿದ್ದರೆ ಕ್ರಮ: ಸಿಎಂ ಭರವಸೆ
ಇದರ ಹೊರತಾಗಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ 2015-16ರಿಂದ 2020-21ರವರೆಗೆ ಮೂಲಸೌಕರ್ಯ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ 3,695 ಕೋಟಿ ರೂ. ವೆಚ್ಚದಲ್ಲಿ 8,952 ಯೋಜನೆಗಳನ್ನು ರೂಪಿಸಲಾಗಿದ್ದು, ಈ ಪೈಕಿ 3,074 ಯೋಜನೆಗಳು ಪೂರ್ಣಗೊಂಡಿದ್ದು, ಇದಕ್ಕಾಗಿ 1,266 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.