ಶಹಾಬಾದ: ಪದರುಗಲ್ಲಿನಿಂದಲೇ ಪ್ರಖ್ಯಾತಿ ಪಡೆದ ಮಾಲಗತ್ತಿ ಗ್ರಾಮ ದೇಶ ಹಾಗೂ ವಿದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರೂ ಕೊರೊನಾ ಕಾಲದಲ್ಲಿ ಕೂಲಿ ಕೆಲಸ ದೊರಕದೇ ಪರದಾಡುತ್ತಿದ್ದ ಕಾರ್ಮಿಕರ ಬದುಕಿಗೆ ಉದ್ಯೋಗ ಖಾತ್ರಿ ಆಸರೆಯಾಗಿದೆ. ಮಾಲಗತ್ತಿ ಗ್ರಾಮದ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಫರ್ಸಿ ಕಲ್ಲಿನ ಅಪಾರ ಗಣಿಗಳಿವೆ. ಈ ಗಣಿಗಳನ್ನೇ ನಂಬಿಕೊಂಡು ಸಾವಿರಾರು ಕಾರ್ಮಿಕರು ಬದುಕುತ್ತಿದ್ದಾರೆ.
ಬೆಳಗ್ಗೆ ಗ್ರಾಮದಿಂದ ಗಣಿ ಕೆಲಸಕ್ಕೆ ಹೋದ ಜನರು ವಾಪಸ್ಸು ಬರೋದು ಸಂಜೆಯೇ. ಇವರ ಬದುಕಿನ ಜಟಕಾ ಬಂಡಿ ನಡೆಯುವುದು ಈ ಕಲ್ಲುಗಣಿಗಳಿಂದಲೇ. ಇಲ್ಲಿನ ಸಾವಿರಾರು ಜನರು ಕಲ್ಲುಗಣಿಗಳ ಮೇಲೆ ಅವಲಂಬಿರಾಗಿದ್ದಾರೆ. ಆದರೆ ಕೊರೊನಾ ಸೋಂಕಿನ ಎರಡನೇ ಹೊಡೆತಕ್ಕೆ ಗಣಿಗಳು ಬಂದ್ ಆಗಿದ್ದರಿಂದ ಕಾರ್ಮಿಕರು ಆರ್ಥಿಕ ಸಂಷಕ್ಟಕ್ಕೆ ಒಳಗಾಗಿದ್ದಾರೆ. ಈ ವೇಳೆ ಇವರ ನೆರವಿಗೆ ಬಂದಿದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ. ತಾಲೂಕಿನ ಮಾಲಗತ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಮಾಲಗತ್ತಿ, ಯರಗಲ್, ಶಂಕರವಾಡಿ ಗ್ರಾಮಗಳು ಬರುತ್ತವೆ.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ತಾಲೂಕಿನಲ್ಲಿಯೇ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಈ ಗ್ರಾಮ ಪಂಚಾಯಿತಿಗಿದೆ. ಗ್ರಾಪಂ ಸದಸ್ಯರೆಲ್ಲರೂ ಆಸಕ್ತಿ ವಹಿಸಿ, ಸಮಾ ಲೋಚನೆ ನಡೆಸಿ ರೈತರ ಹೊಲಗಳಿಗೆ ಬದು ನಿರ್ಮಾಣ, ನಾಲಾ ಹೂಳೆತ್ತುವುದು, ಚೆಕ್ ಡ್ಯಾಮ್ ಹೂಳೆತ್ತುವುದು, ಕೃಷಿ ಹೊಂಡ ಕಾರ್ಯವನ್ನು ಮಾಡಿಸಿದ್ದಾರೆ. ಇಲ್ಲಿನ ಕಾಮಗಾರಿಗಳನ್ನು ನೋಡಿ ಇನ್ನಿತರ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸುಮಾರು 1317 ಜನರಿಗೆ ಜಾಬಕಾರ್ಡ್ ನೀಡಲಾಗಿದೆ. ಇದರಲ್ಲಿ 954 ಜಾಬಕಾರ್ಡ್ ಸಕ್ರಿಯವಾಗಿವೆ. ಸುಮಾರು 1551 ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಗಂಡು 614 ಹಾಗೂ ಹೆಣ್ಣು 937 ಕಾರ್ಮಿಕರು ಇದ್ದಾರೆ. ಏಪ್ರಿಲ್ ತಿಂಗಳಿನಿಂದ ಯೋಜನೆಯಡಿ ಕಾಮಗಾರಿ ಆರಂಭವಾಗಿದೆ. ಜೂನ್ ತಿಂಗಳ 10ರ ವರೆಗೆ ಸುಮಾರು 15557 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಸುಮಾರು 44.45 ಲಕ್ಷ ರೂ. ಹಣವನ್ನು ಕೂಲಿ ಕಾರ್ಮಿಕರಿಗೆ ಸಂದಾಯ ಮಾಡಲಾಗಿದೆ. ಗ್ರಾಮದಲ್ಲೂ ಕೃಷಿ ಹೊಂಡ, ಬದು ನಿರ್ಮಾಣ, ನಾಲಾ ಹೂಳೆತ್ತುವ ಕಾಮಗಾರಿಗಳು ಆಗಿವೆ.
ಹಳ್ಳ ಹೂಳೆತ್ತುವ ಕಾಮಗಾರಿ 25, ಬದು ನಿರ್ಮಾಣ 53, ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಇಲ್ಲಿನ ಪ್ರತಿ ಕೂಲಿ ಕಾರ್ಮಿಕರಿಗೆ ದಿನಕ್ಕೆ 289ರೂ. ಜತೆಗೆ ಸಲಕರಣಾ ವೆಚ್ಚ 10ರೂ. ಸೇರಿ 299ರೂ. ಕೂಲಿ ಪಾವತಿ ಮಾಡಲಾಗುತ್ತಿದೆ. ಪ್ರತಿ ಇಪ್ಪತ್ತು ಕೂಲಿಕಾರ್ಮಿಕರಿಗೆ ಒಬ್ಬ ಕಾಯಕ ಬಂಧು (ಮೇಟಿ) ನೇಮಿಸಲಾಗಿದೆ. ಗ್ರಾಪಂ ಅಧ್ಯಕ್ಷೆ ಅಂಬಿಕಾ ಶಿವಾನಂದ ಅಲ್ಲೂರ್, ಉಪಾಧ್ಯಕ್ಷ ರಾಜು ಜಿರಕಲ್, ಸರ್ವ ಸದಸ್ಯರು, ತಾಪಂ ಇಒ, ಪಿಡಿಒ ನಾಗಚಿತ್ರ ಚಿಕ್ಕಮಠ, ಉದ್ಯೋಗ ಖಾತ್ರಿ ಯೋಜನೆ ಸಹಾಯ ನಿರ್ದೇಶಕ ಸೋಮಶೇಖರ ಜಾಡರ್, ಜೆಇ ರವೀಂದ್ರ ರೆಡ್ಡಿ ಹೆಚ್ಚಿನ ನರೇಗಾ ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ.