Advertisement

ಮತ ಹಾಕದವರ ಮನ ಗೆಲ್ಲಿ

02:41 AM Aug 05, 2019 | Team Udayavani |

ಹೊಸದಿಲ್ಲಿ: ‘ನಿಮ್ಮಲ್ಲಿರುವ ಎಲ್ಲ ನಕಾರಾತ್ಮಕ ಭಾವನೆಗಳನ್ನು ಬಿಟ್ಟು, ಸಕಾರಾತ್ಮಕ ಮನಸ್ಥಿತಿಯೊಂದಿಗೆ ಕಾರ್ಯನಿರ್ವಹಿಸಿ. ಆ ಮೂಲಕ ನಮ್ಮ ಪಕ್ಷಕ್ಕೆ ಮತ ಹಾಕದವರ ಮನಸ್ಸನ್ನೂ ಗೆಲ್ಲಲು ಪ್ರಯತ್ನಿಸಿ.’

Advertisement

ಇದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ನೂತನ ಸಂಸದರಿಗೆ ಹೇಳಿರುವ ಕಿವಿಮಾತು. ಸುಮಾರು 380 ಜನಪ್ರತಿನಿಧಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ 2 ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಈ ಮಾತು ಗಳನ್ನಾಡಿದ್ದಾರೆ. ನಿಮಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಅಂಥವರನ್ನು ನಿರ್ಲಕ್ಷ್ಯ ಮಾಡಬೇಡಿ. ಅವರೂ ನಿಮ್ಮತ್ತ ಆಕರ್ಷಿತರಾಗುವಂತೆ ಕೆಲಸ ಮಾಡಬೇಕು. ಎಲ್ಲರ ಕ್ಷೇಮಾಭಿವೃದ್ಧಿಗಾಗಿ ರಾಜಕೀಯ ಮಾಡಬೇಕು ಎಂದಿದ್ದಾರೆ.

ಇದೇ ವೇಳೆ, 2024ರ ಲೋಕಸಭೆ ಚುನಾವಣೆ ಕುರಿತೂ ಪ್ರಸ್ತಾವಿಸಿದ ಮೋದಿ, ನಿಮ್ಮ ನಿಮ್ಮ ಕ್ಷೇತ್ರಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂದರೆ, ನಿಮ್ಮ ಕೆಲಸಗಳು ಹಾಗೂ ನಡವಳಿಕೆಗಳ ಸಾಮರ್ಥ್ಯದಿಂದಲೇ ನಿಮ್ಮನ್ನು ಜನ ತಮ್ಮ ಸಂಸದರಾಗಿ ಉಳಿಸಿಕೊಳ್ಳಬೇಕು ಎಂದೂ ಹೇಳಿರುವುದಾಗಿ ಸಂಸದ ಪ್ರಹ್ಲಾದ್‌ ಜೋಷಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಯಾವ ಬೂತ್‌ಗಳಲ್ಲಿ ಉತ್ತಮ ಸಾಧನೆ ಮಾಡಿಲ್ಲವೋ, ಅಂಥ ಕಡೆ ನಿಮ್ಮ ಅಸ್ತಿತ್ವವನ್ನು ಬಲಿಷ್ಠಗೊಳಿಸಿ ಎಂದೂ ಮೋದಿ ಸಲಹೆ ನೀಡಿದ್ದಾರೆ.

ರಾಜಕೀಯದ ವಿಚಾರ ಬಂದಾಗ ನಿಮ್ಮ ನಿಮ್ಮ ಕ್ಷೇತ್ರಗಳ ಹಾಗೂ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಜತೆಗೆ, ಜನರ ಭಾಗೀದಾರಿಕೆ, ಜನ ಪರ ನೀತಿಗಳೇ ನಿಮ್ಮ ಜೀವಾಳವಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ, ಸೈದ್ಧಾಂತಿಕ ಹಾಗೂ ವೈಯಕ್ತಿಕ ಅಂಶಗಳ ಕುರಿತೂ ಸಂಸದರಿಗೆ ಪ್ರಧಾನಿ ಕಿವಿಮಾತುಗಳನ್ನು ಹೇಳಿದ್ದಾರೆ.

ಶಾ ಭಾಷಣದ ಕೃತಿ ಬಿಡುಗಡೆ: ಇದೇ ಸಂದರ್ಭದಲ್ಲಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಭಾಷಣಗಳ ಸಂಗ್ರಹವಾದ ‘ಸಾಂಸ್ಕೃತಿಕ್‌ ರಾಷ್ಟ್ರವಾದ್‌ ಕೆ ಶಿಲ್ಪಿ’ (ಸಾಂಸ್ಕೃತಿಕ ರಾಷ್ಟ್ರೀಯವಾದದ ಶಿಲ್ಪಿ) ಎಂಬ ಕೃತಿಯನ್ನೂ ಬಿಡುಗಡೆಗೊಳಿಸಲಾಯಿತು. ಚಾಣಕ್ಯನಿಂದ ಹಿಡಿದು ಪಕ್ಷದ ಸ್ಥಾಪಕ ಶ್ಯಾಮ್‌ಪ್ರಸಾದ್‌ ಮುಖರ್ಜಿವರೆಗೆ ವಿವಿಧ ಗಣ್ಯರ ಕುರಿತು ಅಮಿತ್‌ ಶಾ ಆಡಿರುವ ಮಾತುಗಳು ಈ ಕೃತಿಯಲ್ಲಿವೆ.

Advertisement

ಪರಿವಾರವಾದ ಬೇಡವೇ ಬೇಡ
ನಿಮ್ಮ ವೈಯಕ್ತಿಕ ನಡವಳಿಕೆ ಮತ್ತು ವೃತ್ತಿಪರ ವರ್ತನೆಯು ಯಾವತ್ತೂ ಉತ್ತಮವಾಗಿರಲಿ ಎಂದು ಹೇಳುವಾಗ ಪ್ರಧಾನಿ ಮೋದಿ ತಮ್ಮದೇ ಶುದ್ಧ ಹಸ್ತ ಹಾಗೂ ವರ್ಚಸ್ಸನ್ನು ಉದಾಹರಣೆಯಾಗಿ ನೀಡಿದರು. ಇದೇ ವೇಳೆ, ನಿಮ್ಮ ನಿಮ್ಮ ಕುಟುಂಬಗಳಿಗೆ ಸಾಕಷ್ಟು ಸಮಯ ಕೊಡಿ. ಆದರೆ, ಯಾವ ಕಾರಣಕ್ಕೂ ಪರಿವಾರವಾದ(ವಂಶಾಡಳಿತ)ಕ್ಕೆ ಇಂಬು ಕೊಡಬೇಡಿ ಎಂದೂ ಸಂಸದರಿಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next