ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ.
ಹಾಯ್ ಶ್ರೀ,
ನಾನು ನಿನ್ನ ಮುದ್ದಿನ ಪಂಡು. ಈಗ ನೀನು ಎಲ್ಲಿದ್ದೀಯೋ? ಹೇಗಿದ್ದೀಯೋ? ನನಗಂತೂ ತಿಳಿಯದು. ನಿನ್ನನ್ನು ನೋಡಿದ ಮೊದಲ ದಿನದಿಂದಲೇ ನಿನ್ನ ಮೇಲೆ ಪ್ರೀತಿಯಾಯಿತು. ಅಂದಿನಿಂದ ಇಂದಿನವರೆಗೂ ಮನಸ್ಸಲ್ಲಿ ನಿನ್ನದೇ ಗುನುಗು. ನಿನ್ನನ್ನು ನೋಡದೇ ಸುಮಾರು ಆರೇಳು ವರ್ಷಗಳು ಉರುಳಿಹೋದವೆಂದರೆ ನನಗಿನ್ನೂ ನಂಬಲಾಗುತ್ತಿಲ್ಲ!
ಆಗ ನಾವೆಲ್ಲಾ ಹತ್ತನೇ ತರಗತಿಯಲ್ಲಿದ್ದೆವು. ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಪಕ್ಕದಲ್ಲಿ ಕೂರುತ್ತಿದ್ದ ಸ್ನೇಹಿತ, ಆ ಹುಡುಗಿ ಯಾಕೋ ನಿನ್ನನ್ನೇ ನೋಡಿ ನಗುತ್ತಿರುತ್ತಾಳೆ? ಎಂದು ಕೇಳುತ್ತಿದ್ದ. ಏನೋ ತಮಾಷೆ ಮಾಡ್ತಿದ್ದಾನೆ ಎಂದುಕೊಂಡು ನಾನು ಗಮನ ಹರಿಸಿರಲಿಲ್ಲ. ಆದರೂ ಅವನು ಪ್ರತಿದಿನವೂ ಅದನ್ನೇ ಹೇಳುತ್ತಿದ್ದುದರಿಂದ, ನೋಡಿಯೇ ಬಿಡೋಣ ಇವನು ಹೇಳುತ್ತಿರುವುದು ಸುಳ್ಳೋ? ನಿಜವೋ? ಎಂದು ಪರೀಕ್ಷಿಸಲು ಒಂದು ದಿನ ನಾನೂ ನಿನ್ನತ್ತ ತಿರುಗಿ ನೋಡಿಯೇ ಬಿಟ್ಟೆ!
ಹಾಗೆ ನೋಡಿದಾಗ ನನಗೆ ನೀನು ಮಾತ್ರ ಕಾಣಲಿಲ್ಲ. ಬದಲಿಗೆ ನನ್ನ ಭವಿಷ್ಯವೇ ನಿನ್ನಲ್ಲಿ ಕಾಣಿಸಿಬಿಟ್ಟಿತು. ಅದುವರೆಗೂ ಲಂಗು-ಲಗಾಮಿಲ್ಲದೆ, ಎಲ್ಲೆಲ್ಲೋ ಸುತ್ತುತ್ತಿದ್ದ ನನ್ನ ಮನಸ್ಸು ಅಂದಿನಿಂದ ನಿನ್ನದೇ ಧ್ಯಾನದಲ್ಲಿ ಮುಳುಗಿಹೋಯಿತು.
ನಿನ್ನ ನೋಡುವ ಸಲುವಾಗಿಯೇ, ನೋಟ್ಸ್ ಬೇಕೆಂಬ ನೆಪವೊಡ್ಡಿ ನಿಮ್ಮ ಮನೆಗೆ ಬರುತ್ತಿದ್ದೆ. ನಿನಗೂ ನನ್ನ ಮೇಲೆ ಅಷ್ಟೇ ಪ್ರೀತಿ ಇದ್ದುದರಿಂದ, ಅದೇ ನೆಪವನ್ನೊಡ್ಡಿ ನೀನೂ ನಮ್ಮ ಮನೆಗೆ ಬರುತ್ತಿದ್ದೆ. ಆದರೂ ನನ್ನ ಮನದಾಳದ ಗೊಂದಲಕ್ಕೆ ಉತ್ತರವಾಗಿ, ನೀನೇ ಅಲ್ಲವೇ ನೋಟ್ಸ್‌ಅನ್ನು ಹಿಂದಿರುಗಿಸುವಾಗ, ಅದರೊಳಗೆ “ಐ ಲವ್ ಯೂ’ ಎಂದು ಬರೆದು,ನನಗೆ ಪ್ರೇಮಲೋಕವನ್ನು ಪರಿಚಯಿಸಿದ್ದು?
ಹೀಗೆ ಸುಂದರವಾಗಿ ಸಾಗುತ್ತಿದ್ದ ನಮ್ಮಿಬ್ಬರ ಪ್ರೇಮದ ಪಯಣದ ಮೇಲೆ ಅದ್ಯಾರ ಕಣ್ಣು ಬಿತ್ತೋ? ನಮ್ಮಿಬ್ಬರ ಪ್ರೀತಿಯ ವಿಷಯ ನಮ್ಮ ಮನೆಗಳಲ್ಲಿ ತಿಳಿದು, ರಂಪವಾಯಿತು. ಅದೊಂದು ದಿನ ನಿಮ್ಮಮ್ಮ, “ಇನ್ಮುಂದೆ ನಮ್ಮ ಮನೆಯ ಹತ್ತಿರ ಬರಬೇಡಪ್ಪ’ ಎಂದು ಹೇಳಿಬಿಟ್ಟರು. ಅಂದಿನಿಂದ ನಿನ್ನನ್ನು ಭೇಟಿಯಾಗಲು ನಾನು ಮಾಡದ ಪ್ರಯತ್ನವಿಲ್ಲ. ನಿನ್ನ ಮನೆಯವರು ನಿನಗೇನು ಹೇಳಿ ನನ್ನಿಂದ ದೂರವಿಟ್ಟರೋ ನನಗಂತೂ ಗೊತ್ತಿಲ್ಲ. ನೀನು ನನ್ನನ್ನು ಬಿಟ್ಟು ಹೋಗಿ ಎಷ್ಟೋ ವರ್ಷಗಳು ಕಳೆದರೂ, ನಿನ್ನ ನೆನಪುಗಳು ಈಗಲೂ ಕಾಡುತ್ತಲೇ ಇವೆ. ಮನಸ್ಸು ಇಂದಿಗೂ ನಿನ್ನನ್ನೇ ಬಯಸುತ್ತಿದೆ. ಈಗ ಹಠಾತ್ತಾಗಿ ನಾನು ಈ ಪತ್ರ ಬರೆಯಲು ಕಾರಣ ಕೂಡ ನೀನೇ ಶ್ರೀ. ಈ ಪತ್ರ ಓದಿದರೆ ನೀನು ವಾಪಸ್ ಬಂದೇ ಬರ್ತೀಯಾ ಅನ್ನೋ ಭರವಸೆ ನನ್ನದು. ಹಾಗೆಯೇ ಆಗಲಿ ಎಂದು ಆಶಿಸುತ್ತಾ…….
ಇಂತಿ,
ನಿನ್ನ ಮುದ್ದಿನ ಪಂಡು
-ಗಿರೀಶ್ ಚಂದ್ರ ವೈ.ಆರ್.