ತಂದೆ ಆಟೋ ಡ್ರೈವರ್. ಆತನ ಪುತ್ರ ಶಾಲೆಗೆ ಹೋಗುತ್ತಲೇ ದೊಡ್ಡ ದೊಡ್ಡ ಕನಸು ಕಾಣುವ ಕನಸುಗಾರ. ಆದರೆ ಕಿತ್ತು ತಿನ್ನುವ ಬಡತನ ಆ ಪುಟ್ಟ ಪೋರನ ಕನಸು ಕನಸಾಗಿಯೇ ಉಳಿದಿರುತ್ತದೆ. ಕನಿಷ್ಠ ಶಾಲೆಯಲ್ಲಿ ಕೊಟ್ಟ ಹೋಂವರ್ಕ್ ಮಾಡದಿರುವಷ್ಟು “ಬೆಳಕಿನ’ ಕೊರತೆ ಆತನನ್ನು ಕಾಡುತ್ತಿರುತ್ತದೆ. ಯಾರದ್ದೋ ಮನೆ, ಬುಡ್ಡಿ ದೀಪದ ಬೆಳಕಿನಡಿಯಲ್ಲಿ ಊಟ-ಉಪಚಾರ. ಒಪ್ಪೊತ್ತಿಗೂ ಕಷ್ಟಪಡುವ ತಂದೆ-ಮಗ, ಇನ್ನಿಲ್ಲದ ಶ್ರಮವಹಿಸಿ ಮುಂದೆಬರಲು ತವಕಿಸುತ್ತಿರುತ್ತಾರೆ… ತಂದೆಯ ಕುಡಿತ ಮಗನ ವಿದ್ಯಾಭ್ಯಾಸಕ್ಕೆ ತೊಡಕುಂಟು ಮಾಡುತ್ತದೆ. “ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ’ ಎನ್ನುವ ಹಾಗೆ, ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ, ಪ್ರತಿನಿತ್ಯ ಮಧ್ಯಪಾನವಂತೂ ಖಾಯಂ. ಶಾಲೆಯಲ್ಲಿ ಟೀಚರ್ ಬಳಿ ಶಿಕ್ಷೆಗೊಳಪಡುವ ಕಿರಣ್ (ಮಾ.ಪ್ರೀತಮ್), ರಾತ್ರಿ ಯೋಚಿಸುತ್ತಾ ಕುಳಿತಿರುವಾಗ “ಮಿಂಚುಹುಳು’ ದಾರಿದೀಪವಾಗುತ್ತದೆ. ಅಲ್ಲಿಂದ ಆತನ ಮತ್ತೂಂದು ಅಧ್ಯಾಯ ಶುರುವಾಗುತ್ತದೆ.
ಮೊದಲಾರ್ಧದಲ್ಲಿ ಕಥೆಯ ತಿರುಳನ್ನು ಇಂಚಿಂಚಾಗಿ ತಿಳಿಪಡಿಸುವ ನಿರ್ದೇಶಕ ಮಹೇಶ್ ಕುಮಾರ್, ಅಸಲಿ ಕಥೆಗೆ ಹೊರಳಿಕೊಳ್ಳುತ್ತಾರೆ. ಕನಸುಗಾರ “ಕಿರಣ’ನ ಬಾಳಿನಲ್ಲಿ ನವಕಿರಣಗಳು ಹೇಗೆ ಮೂಡುತ್ತದೆ ಎಂಬುದನ್ನು ಸವಿಸ್ತಾರವಾಗಿ ಬಿಚ್ಚಿಟ್ಟಿದ್ದಾರೆ.
ಮುಖ್ಯವಾಗಿ ಈ ಚಿತ್ರ ಮಕ್ಕಳ ಬದುಕನ್ನು ಹೊಸ ಮಜಲಿಗೆ ಕೊಂಡೊಯ್ಯುವಲ್ಲಿ ಸಹಕಾರಿಯಾಗುವಂತಿದೆ. ಕಿರಣನ ದಾರಿಗೆ ಬೆಳಕಾಗುವ ಮತ್ತೂಬ್ಬ ವ್ಯಕ್ತಿಯಾಗಿ ಪೃಥ್ವಿರಾಜ್ ನಿಲ್ಲುತ್ತಾರೆ. ಮಾ.ಪ್ರೀತಮ್ ತನ್ನ ಪಾತ್ರ ಇತಿಮಿತಿ ಅರಿತು ಜೀವಿಸಿರುವುದು “ಮಿಂಚುಹುಳು’ವಿನ ಪ್ಲಸ್ ಪಾಯಿಂಟ್. ಪೃಥ್ವಿರಾಜ್‌ಗಿದು ಮೊದಲ ಸಿನಿಮಾವಾದರೂ ಗಮನಾರ್ಹ ನಟನೆ. ಪರಶಿವ ಮೂರ್ತಿ, ರಶ್ಮಿ ಗೌಡ, ಹಿಸಾಕ್ ಮುಂತಾದ ವರದ್ದು ಪಾತ್ರಕ್ಕೆ ತಕ್ಕ ಅಭಿನಯ.