ನವದೆಹಲಿ: ಸೌದಿ ಅರೇಬಿಯಾದಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ 53 ವರ್ಷದ ವ್ಯಕ್ತಿಯೋರ್ವನಿಗೆ ತಾವು ಕಸ್ಟಮ್ಸ್ ಅಧಿಕಾರಿಗಳೆಂದು ನಂಬಿಸಿ ಆತನಿಂದ 4 ಲಕ್ಷ ರೂ.ಗಿಂತಲೂ ಹೆಚ್ಚು ವಿದೇಶೀ ಹಣವನ್ನು ಪಡೆದು ವಂಚಿಸಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸೌದಿ ಅರೇಬಿಯಾದಿಂದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಜಸ್ಥಾನ ದ ಮೊಹಮ್ಮದ್ ಸುಲೇಮಾನ್ ಎಂಬಾತನಿಗೆ ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ವ್ಯಕ್ತಿಗಳಿಬ್ಬರು ತಮ್ಮನ್ನು ತಾವು ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿ ಕಾರು ಹತ್ತಿಸಿಕೊಂಡಿದ್ದಾರೆ.
ಮಿಹಿಲ್‌ಪುರ್ ಹೆದ್ದಾರಿಯಲ್ಲಿ ದಾರಿ ಮಧ್ಯೆ ಸುಲೇಮಾನ್ ಅವರ ಬ್ಯಾಗ್, ಪಾಸ್‌ಪೋರ್ಟ್ ಕಸಿದುಕೊಂಡು, ಬಳಿಕ ಯಾರೂ ಇಲ್ಲದ ಜಾಗದಲ್ಲಿ ಕಾರು ನಿಲ್ಲಿಸಿ ಆತನ ಮೊಬೈಲ್ ಫೋನ್ ಕಸಿದುಕೊಂಡು ಆತನ ಬಳಿಯಲ್ಲಿದ್ದ 19,000 ಸೌದಿ ರಿಯಾದ್ (4.15 ಲಕ್ಷ ರೂ.) ಮತ್ತು ಹಣವನ್ನು ದೋಚಿದ್ದಾರೆ. ಆತನ ಬಳಿಯಲ್ಲಿ ಸೌದಿ ರಿಯಾದ್ ಬಗ್ಗೆ ಪ್ರಶ್ನಿಸಿ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ವಿಚಾರಿಸಿದ್ದಾರೆ.
ಬಳಿಕ ಆತನನ್ನು ದಾರಿ ಮಧ್ಯದಲ್ಲೇ ಬಿಟ್ಟು ಹಿರಿಯ ಅಧಿಕಾರಿಗಳ ಜೊತೆ ಬಂದು ವಿಚಾರಣೆ ನಡೆಸುತ್ತೇವೆ ಎಂದು ಹೇಳಿ ಪರಾರಿಯಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲೀಸರು ಆರೋಪಿಗಳ ಮೇಲೆ IPC ಸೆಕ್ಷನ್ 420 ಅಡಿಯಲ್ಲಿ ವಂಚನೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
ಪ್ರಗತಿ ಮೈದಾನ ದರೋಡೆ ಪ್ರಕರಣ:1600 ಜನರ ವಿಚಾರಣೆ ನಡೆಸಿ ಐವರನ್ನು ಬಂಧಿಸಿದ ದೆಹಲಿ ಪೊಲೀಸರು