Advertisement
ಜೈನ ಧರ್ಮದಲ್ಲಿ ಪರ್ವಗಳ ರಾಜ ಎಂದೇ ಚಿರಪರಿಚಿತವಾಗಿರುವ ದಶಲಕ್ಷಣ ಪರ್ವವನ್ನು ಪರ್ಯೂಷಣ ಪರ್ವ ಎಂದೂ ಕರೆಯುತ್ತಾರೆ. ಇದನ್ನು ಮುನಿಗಳೂ, ಶ್ರಾವಕ-ಶ್ರಾವಕಿಯರೂ ಆತ್ಮೋನ್ನತಿಗಾಗಿ ಪ್ರತೀ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಪಂಚಮಿಯಿಂದ ಹತ್ತು ದಿನಗಳ ಕಾಲ ಉಪವಾಸ, ತಪ, ಧ್ಯಾನ, ಸ್ವಾಧ್ಯಾಯ ಹಾಗೂ ಸತ್‌ಚಿಂತನೆಗಳ ಮೂಲಕ ಭಕ್ತಿ, ಶ್ರದ್ಧೆಗಳಿಂದ ಆಚರಿಸುತ್ತಾರೆ. ಇದು ಸಂಭ್ರಮ-ಸಡಗರದ ಪರ್ವವಲ್ಲ. ಇದರ ಉದ್ದೇಶ ಮನಃಶುದ್ಧಿ ಹಾಗೂ ಕರ್ಮನಿರ್ಜರೆ, ರಾಗ-ದ್ವೇಷಗಳನ್ನು ದೂರ ಮಾಡುವುದೇ ಆಗಿದೆ.
Related Articles
Advertisement
ಮುನಿಧರ್ಮದ ಈ ಕಠಿನ ಚರ್ಯೆಗೆ ಪ್ರಸ್ತುತ ಜ್ವಲಂತವಾದ ನಿದರ್ಶನವನ್ನು ನೀಡುವುದು ಔಚಿತ್ಯಪೂರ್ಣವಾಗಿದೆ. ಜೈನರ ಅತಿಶಯ ಕ್ಷೇತ್ರವಾದ ಸಮ್ಮೇದ ಶಿಖರ್ಜಿಯ ಪಾರ್ಶ್ವನಾಥ ಕೂಟದಲ್ಲಿ ಆಚಾರ್ಯ ಪೂಜ್ಯಶ್ರೀ 108 ಪ್ರಸನ್ನ ಸಾಗರ್‌ಜಿ ಮುನಿಮಹಾರಾಜರು ಚಾತುರ್ಮಾಸ ವ್ರತಾಚರಣೆಯಲ್ಲಿದ್ದು ಜಪ, ತಪ, ಧ್ಯಾನ, ಉಪವಾಸ, ಸ್ವಾಧ್ಯಾಯ ಮೊದಲಾದ ಆತ್ಮಚಿಂತನೆಯೊಂದಿಗೆ ಅನೇಕ ವ್ರತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಪೂಜ್ಯರು ದಿನಾಂಕ 14-09-2021ರಿಂದ 28-01-2023ರ ವರೆಗೆ ಸಿಂಹನಿಷ್ಕ್ರಿàಡಿತ ವ್ರತವೆಂಬ ಕಠಿನ ವ್ರತವನ್ನು ಆಚರಿಸಿದ್ದಾರೆ.
ಈ ವ್ರತವನ್ನು ವ್ರತಗಳ ರಾಜ ಎನ್ನುತ್ತಾರೆ. ಈ ವ್ರತಧಾರಣೆ ಮಾಡಿದ ಸಾಧಕ ಮುನಿಗಳು ಒಂದು ದಿನ ಆಹಾರ, ಒಂದು ದಿನ ಉಪವಾಸ, ಒಂದು ದಿನ ಆಹಾರ, ಎರಡು ದಿನ ಉಪವಾಸ, ಒಂದು ದಿನ ಆಹಾರ, ಮೂರು ದಿನ ಉಪವಾಸ – ಈ ಕ್ರಮದಲ್ಲಿ ಆಹಾರ ಮತ್ತು ಉಪವಾಸಗಳ ನಡುವಿನ ದಿನಗಳ ಅಂತರವನ್ನು ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಈ ವ್ರತದ ನಡುವೆ ಕಠಿನ ಮೌನವ್ರತವನ್ನೂ ಆಚರಿಸುತ್ತಾರೆ. ಹೀಗೆ ಒಟ್ಟು 145 ದಿನಗಳ ಕಾಲ ಉಪವಾಸ ಮತ್ತು ಕೇವಲ 32 ದಿನ ಆಹಾರ ಸ್ವೀಕಾರ ಮಾಡಿದರೆ ಅದನ್ನು ಸಿಂಹನಿಷ್ಕ್ರಿಡಿತ ವ್ರತ ಎನ್ನುತ್ತಾರೆ.ಉಪವಾಸ ಎಂದರೇನು? ಉಪ ಅಂದರೆ ಆತ್ಮ, ವಾಸ ಅಂದರೆ ತಲ್ಲೀನನಾಗುವುದು ಎಂದು ಅರ್ಥ. ಹಾಗಾಗಿ ಉಪವಾಸ ಅಂದರೆ ಆಹಾರ ಸೇವಿಸದೆ ಇರುವುದು ಮಾತ್ರವಲ್ಲ, ಆತ್ಮನ ಚಿಂತನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಕೂಡ ಆಗಿದೆ. ಪೂಜ್ಯಶ್ರೀ 108 ಶ್ರೀ ಪ್ರಸನ್ನಸಾಗರ ಮುನಿ ಮಹಾರಾಜರ ಸಿಂಹನಿಷ್ಕ್ರಿಡಿತ ವ್ರತದ ಅವಧಿ 557 ದಿನಗಳು. ಇಷ್ಟೂ ದಿನ ಪೂಜ್ಯರು ಮೌನವ್ರತದಲ್ಲಿದ್ದರು. ಇದರಲ್ಲಿ 61 ದಿನ ಮಾತ್ರ ಆಹಾರವನ್ನು ಸ್ವೀಕರಿಸಿದ್ದು, 496 ದಿನ ಉಪವಾಸ ವ್ರತದಲ್ಲಿದ್ದರು. ಆಧುನಿಕ ಯುಗದಲ್ಲಿ ಮುನಿಧರ್ಮದ ಆಚರಣೆಯನ್ನು ಪ್ರಾರಂಭಿಸಿದ ಪರಮಪೂಜ್ಯ ಆಚಾರ್ಯ 108 ಶ್ರೀ ಶಾಂತಿಸಾಗರ ಮುನಿಮಹಾರಾಜರು ತಮ್ಮ ಜೀವಿತಾವಧಿಯಲ್ಲಿ ಮೂರು ಸಲ ಸಿಂಹನಿಷ್ಕ್ರಿಡಿತ ವ್ರತಾಚಾರಣೆ ಮಾಡಿದ್ದರು. ಜೈನ ಮುನಿಗಳ ಆಹಾರ ಪದ್ಧತಿ ಅತ್ಯಂತ ಕ್ಲಿಷ್ಟಕರವಾಗಿದ್ದು, ಅದರಲ್ಲೂ ಇಂಥ ಪರ್ವಗಳು ಬಂದಾಗ ಹೆಚ್ಚಿನ ಮುನಿಗಳು 10 ದಿನಗಳ ಕಾಲ ನೀರನ್ನೂ ಸೇವಿಸದೆ ಉಪವಾಸ ವ್ರತವನ್ನು ಆಚರಿಸುತ್ತಾರೆ. ಭತೃಹರಿಯು ವೈರಾಗ್ಯ ಶತಕದಲ್ಲಿ ಹೀಗೆಂದಿದ್ದಾರೆ: ಯೋಗಿಗಳಿಗೆ ಪವಿತ್ರವಾದ ಕೈಗಳೇ ಭೋಜನಪಾತ್ರಗಳು: ಭಿಕ್ಷೆಯಿಂದ ಎತ್ತಿದ ಅನ್ನವೇ ಆಹಾರವು. ದಶದಿಕ್ಕುಗಳೇ ವಿಶಾಲವಾದ ವಸ್ತ್ರವು. ಅಖಂಡ ಭೂಮಂಡಲವೇ ಹಾಸಿಗೆಯು. ಈ ರೀತಿಯಲ್ಲಿ ಯಾವ ಮಹಾಪುರಷರು ಇರುವರೋ ಅವರು ಜನನ ಮರಣ ರೂಪವಾದ ಸಂಸಾರ ಕರ್ಮವನ್ನು ನಾಶಪಡಿಸಿಕೊಂಡು ಮೋಕ್ಷಗಾಮಿಗಳಾಗುವರು ಇದು ಜೈನ ಮುನಿಗಳಿಗೆ ಸಲ್ಲುವ ಮಾತುಗಳಾಗಿವೆ. ಆತ್ಮನ ಈ ಹತ್ತು ಶ್ರೇಷ್ಠಗುಣಗಳನ್ನು ನಾವು ನಮ್ಮ ಬದುಕಿನಲ್ಲಿ ಅಲ್ಪ ಪ್ರಮಾಣದಲ್ಲಾದರೂ ಅಳವಡಿಸಿಕೊಂಡಲ್ಲಿ ಸ್ವಹಿತ ಹಾಗೂ ಪರಹಿತಗಳು ಉಂಟಾಗಿ ಲೋಕಕಲ್ಯಾಣವಾಗುತ್ತದೆ. ಹೇಮಾವತಿ ವೀ.ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ