Advertisement

ಮಲೇಷಿಯಾ ಮರಳಿನಲ್ಲಿ ಕೋಟ್ಯಂತರ ಗೋಲ್‌ಮಾಲ್‌: ಜಗದೀಶ ಶೆಟ್ಟರ್‌

11:49 AM Jan 24, 2018 | Team Udayavani |

ಹುಬ್ಬಳ್ಳಿ: ಮಲೇಷಿಯಾದಿಂದ ಮರಳು ಆಮದು ದಂಧೆಯಲ್ಲಿ ಅಂದಾಜು 5,800 ಕೋಟಿ ರೂ. ಗೋಲ್‌ಮಾಲ್‌ ಶಂಕೆ ಇದೆ.
ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಭಾಗಿಯಾಗಿರುವ ಮಾಹಿತಿ ಇದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಳಪಡಿಸಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಎಸ್‌ ಐಎಲ್‌ನಿಂದ 50 ಕೆ.ಜಿ. ಚೀಲದಲ್ಲಿ ಮರಳು ಮಾರಾಟಕ್ಕೆ ಮುಂದಾಗಿದೆ. ಮಲೇಷಿಯಾದಿಂದ ಮರಳು ಆಮದು ಮಾಡುವ ಟೆಂಡರ್‌ ಪಡೆದ ಪೋಸಿಡಾನ್‌ ಎಫ್ಝಡ್‌ಇ ಎಂಬ ಕಂಪನಿ ಬಗ್ಗೆಯೇ ಹಲವು ಸಂಶಯಗಳು ವ್ಯಕ್ತವಾಗಿವೆ. ಎಂಎಸ್‌ಐಎಲ್‌ ಮಲೇಷಿಯಾದಿಂದ ವಾರ್ಷಿಕ 36 ಲಕ್ಷ ಟನ್‌ನಂತೆ ಐದು ವರ್ಷಕ್ಕೆ ಸುಮಾರು 180 ಲಕ್ಷ ಟನ್‌ನಷ್ಟು ಮರಳು ಆಮದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಎಂಎಸ್‌ ಐಎಲ್‌ ಆಡಳಿತ ಮಂಡಳಿ ಅನುಮತಿ ಪಡೆದಿಲ್ಲ. ಸಚಿವ ಸಂಪುಟದಲ್ಲೂ ಚರ್ಚೆಯಾಗಿಲ್ಲ ಎಂಬ ಮಾಹಿತಿ ಇದೆ ಎಂದರು. 

ಮಲೇಷಿಯಾದಿಂದ ಬರುವ ಮರಳು ಆಂಧ್ರದ ಕೃಷ್ಣಾಪಾರ್ಕ್‌ಂ ಖಾಸಗಿ ಬಂದರಿಗೆ ಬಂದು ಅಲ್ಲಿಂದ ರಾಜ್ಯಕ್ಕೆ ಬರಲಿದೆ. ಪ್ರತಿ ಟನ್‌ಗೆ 2,300 ರೂ.ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೇ ಮಲೇಷಿಯಾದಿಂದ ತಮಿಳುನಾಡು ಪ್ರತಿ ಟನ್‌ಗೆ 925 ರೂ.ನಂತೆ ತರಿಸುತ್ತಿದೆ. ಕೃಷ್ಣ ಪಾರ್ಕ್‌ಂ ಬಂದರಿನಿಂದ ರಾಜ್ಯಕ್ಕೆ ಮರಳು ಸಾಗಣೆಗೆ 1,980 ಕೋಟಿ ರೂ. ಆಗುತ್ತದೆ. ಎಂಎಸ್‌ಐಎಲ್‌ ಪ್ರತಿ ಟನ್‌ ಮರಳನ್ನು 3,900 ರೂ.ಗಳಿಗೆ ಮಾರಾಟ ಮಾಡುತ್ತಿದೆ ಎಂದರು. ಎಂಎಸ್‌ಐಎಲ್‌ ಎಂಡಿ ವಿರುದ್ಧ ಆರೋಪ: ಮಲೇಷಿಯಾ ಮರಳು ಆಮದು ಪ್ರಕರಣದಲ್ಲಿ ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ, ಪ್ರಧಾನ ವ್ಯವಸ್ಥಾಪಕ ಮಹಾವೀರ
ನೇರವಾಗಿ ಭಾಗಿಯಾಗಿದ್ದು, ನನಗಿರುವ ಮಾಹಿತಿಯಂತೆ ಮುಖ್ಯಮಂತ್ರಿ ಕಚೇರಿ ಹಿರಿಯ ಐಎಎಸ್‌ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. 

ಕೇಂದ್ರಕ್ಕೂ ಪತ್ರಬರೆಯುತ್ತೇನೆ
ಮಲೇಷಿಯಾದಿಂದ ಮರಳು ಆಮದು ಕುರಿತಾಗಿ ಕೇಂದ್ರ ಸರ್ಕಾರದಿಂದಲೂ ಸೂಕ್ತ ಪರವಾನಗಿ ಅಗತ್ಯ. ಎಂಎಸ್‌ ಐಎಲ್‌ ಈ ನಿಟ್ಟಿನಲ್ಲಿ ನಿಯಮ ಉಲ್ಲಂಘಿಸಿದೆಯೇ ಎಂಬುದರ ಕುರಿತಾಗಿ ಹಾಗೂ ಇದೊಂದು ಅಂತಾರಾಷ್ಟ್ರೀಯ ಅಪರಾಧ ವ್ಯಾಪ್ತಿಗೆ ಬರುತ್ತಿದ್ದು, ಈ ನಿಟ್ಟಿನಲ್ಲಿಯೂ ಪರಿಶೀಲಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಶೆಟ್ಟರ್‌ ತಿಳಿಸಿದರು. 

40 ಸಾವಿರ ಟನ್‌ ಬೇಡಿಕೆ
ಬೆಂಗಳೂರು: ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿ. ಮಲೇಷಿಯಾದಿಂದ ಆಮದು ಮಾಡಿಕೊಂಡ ಮರಳಿನ ಮಾರಾಟಕ್ಕೆ ಸೋಮವಾರ ಚಾಲನೆ ನೀಡಿದ್ದು, ಎರಡು ದಿನದಲ್ಲಿ 40,000 ಟನ್‌ಗೆ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ ಬಿಡದಿ ಬಳಿಯ ಸಂಸ್ಥೆಯ ಯಾರ್ಡ್‌ನಲ್ಲಿ ಸೀಮಿತ ಪ್ರಮಾಣದ ದಾಸ್ತಾನು ಇದ್ದು, ಎರಡು ದಿನದಲ್ಲಿ 2,000 ಟನ್‌ ಮರಳು ಮಾರಾಟವಾಗಿದೆ. ಯಾರ್ಡ್‌ಗೆ ಮರಳು ಚೀಲ ಪೂರೈಕೆಯಾಗುತ್ತಿದ್ದಂತೆ ಪೂರೈಸಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಮಲೇಷಿಯಾದಿಂದ ಆಮದು ಮಾಡಿಕೊಂಡ ಮರಳಿನ ಮಾರಾಟ ಸೋಮವಾರದಿಂದ ಆರಂಭವಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಪ್ರತಿಷ್ಠಿತ ಸಂಸ್ಥೆಗಳು, ಕಂಪನಿಗಳಿಂದ ಬೇಡಿಕೆ ಬರಲಾರಂಭಿಸಿದೆ. ಈವರೆಗೆ 40,000 ಟನ್‌ಗೆ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ ದಾಸ್ತಾನು ಇದ್ದ 2,000
ಟನ್‌ ಪೂರೈಸಲಾಗಿದೆ. ಆಂಧ್ರದ ಕೃಷ್ಣಪಟ್ಟಣಂನ ಬಂದರಿನಿಂದ ರೈಲಿನ ಮೂಲಕ ಬಿಡದಿಯ ಯಾರ್ಡ್‌ಗೆ ಮರಳು ಚೀಲ ಸಾಗಣೆಯಾಗುತ್ತಿದ್ದು, ಸದ್ಯದಲ್ಲೇ ಬೇಡಿಕೆಯಿರುವಷ್ಟೂ ಮರಳನ್ನು ಪೂರೈಸಲಾಗುವುದು ಎಂದು ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ಪ್ರಕಾಶ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next