Advertisement

ರೈತನ ಕೈ ಹಿಡಿಯಲಿದೆ ಮಿಲ್ಕ್-ಸಿಲ್ಕ್ ವೃತ್ತಿ

12:06 PM Aug 28, 2017 | |

ಹುಣಸೂರು: ಎಲ್ಲಾ ಬೆಳೆಗಳಿಗೂ ದಳ್ಳಾಳಿಗಳ ಹಾವಳಿ ಇದೆ. ಆದರೆ, ಮಿಲ್ಕ್ ಮತ್ತು ಸಿಲ್ಕ್ನ್ನು ವೃತ್ತಿಯನ್ನಾಗಿಸಿಕೊಂಡಿರುವ ರೈತನಿಗೆ ದಳ್ಳಾಗಳ ಭಯವೂ ಇಲ್ಲ, ಆತ್ಮಹತ್ಯೆ ಪ್ರಮೇಯವೇ ಬರುವುದಿಲ್ಲ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಮೀನುಗಾರಿಕೆ ಸಚಿವ ಎ.ಮಂಜು ಅಭಿಪ್ರಾಯಪಟ್ಟರು. ತಾಲೂಕಿನ ಚಿಲ್ಕುಂದ ಗ್ರಾಮದಲ್ಲಿ 20.5 ಲಕ್ಷರೂ ವೆಚ್ಚದಡಿ ನಿರ್ಮಿಸಿರುವ ನೂತನ ಪಶು ಚಿಕಿತ್ಸಾಲಯ ಹಾಗೂ 7 ಲಕ್ಷರೂ ವೆಚ್ಚದ ಮಹಿಳಾ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

Advertisement

ಈ ಹಿಂದಿನ ಪಶುಸಂಗೋಪನೆ ಸಚಿವ ಕೃಷ್ಣಪ್ಪ ಅವರ ಒತ್ತಾಸೆಯಿಂದಾಗಿ  ರಾಜ್ಯದಲ್ಲಿ ಹೈನೋದ್ಯಮ ಬೃಹದಾಕಾರವಾಗಿ ಬೆಳೆದಿದೆ. ರಾಜ್ಯದಲ್ಲಿ ನಿತ್ಯ 77 ಲಕ್ಷ ಲೀಟರ್‌ ಹಾಗೂ ಮೈಸೂರು ಡೇರಿಗೆ 9.11 ಲಕ್ಷ ಲೀ ಹಾಲು ಬರುತ್ತಿದ್ದು, ಸರ್ಕಾರ ಲಾಭ ನಷ್ಟವನ್ನೂ ಗಮನಿಸದೆ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಪ್ರತಿ ಲೀಟರ್‌ಗೆ 5 ರೂ ನಂತೆ 1300 ಕೋಟಿ ರೂ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ತಿಳಿಸಿದರು.

ಪಶುಭಾಗ್ಯ ಯೋಜನೆಯಡಿ 25 ಸಾವಿರ ಮಂದಿಗೆ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕರ ಬೇಡಿಕೆಯಂತೆ ಹುಣಸೂರಿಗೆ ಹೆಚ್ಚುವರಿ ನೂರು ಪಶುಭಾಗ್ಯ ಘಟಕಗಳನ್ನು ನೀಡಲಾಗುತ್ತಿದೆ ಎಂದು ನುಡಿದರು. ರೇಷ್ಮೆ ಬೆಳೆಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಉತ್ತಮ ಬೆಲೆಯೂ ಸಿಗುತ್ತಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಮಿಲ್ಕ್ ಮತ್ತು ಸಿಲ್ಕ್ ಮಾತ್ರ ಕೈಹಿಡಿಯುತ್ತಿದೆ ಎಂದು ತಿಳಿಸಿದರು. 

ವೈದ್ಯರಿಗೂ ಜಿಪಿಎಸ್‌: ಎಲ್ಲಾ ಪಶು ವೈದ್ಯರಿಗೂ ಇಲಾಖೆ ವತಿಯಿಂದಲೇ  ಜಿಪಿಎಸ್‌ ಅಳವಡಿಸಿರುವ ಮೊಬೈಲ್‌ ಕೊಡಿಸಲಾಗುತ್ತಿದೆ. ಈ ಮೂಲಕ ಅವರ ಕರ್ತವ್ಯದ ಮೇಲೆ ನಿಗಾ ಇಡಲಾಗುವುದೆಂದರು.

ಗೇಯುವ ಎತ್ತಿಗೆ ಮೇವು ಹಾಕಿ: ನುಡಿದಂತೆ ನಡೆದಿರುವ ಸರ್ಕಾರ ಸಿದ್ದರಾಮಯ್ಯರದ್ದು, ಮುಂದೆಯೂ ನಮ್ಮದೇ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಶಾಸಕ ಮಂಜುನಾಥ್‌ ತನ್ನ ಕ್ಷೇತ್ರಕ್ಕಿಂತಲೂ ಹೆಚ್ಚಿನ ಅನುದಾನವನ್ನು ಹುಣಸೂರಿಗೆ ತಂದು ಜನಪರ ಕೆಲಸ ಮಾಡಿದ್ದಾರೆ. ಇಂತಹ ಗೇಯುವ ಎತ್ತಿಗೆ ಮೇವು ಹಾಕಿ, ಹೊರಗಿನಿಂದ ಜಾತ್ರೆಗೆ ಬರುವ ಎತ್ತುಗಳಿಗೆ ಮೇವು ಹಾಕಬೇಡಿರೆಂದು ಮನವಿ ಮಾಡಿದರು.

Advertisement

ಶಾಸಕ ಎಚ್‌.ಪಿ.ಮಂಜುನಾಥ್‌, ತಾಲೂಕಿಗೆ  ಐದು ವರ್ಷಗಳಲ್ಲಿ 7 ಪಶು ಆಸ್ಪತ್ರೆ ಕಟ್ಟಡ ಮಂಜೂರು ಮಾಡಿದ್ದಲ್ಲದೆ, ಎರಡು ಹೊಸ ಆಸ್ಪತ್ರೆಗೆ ಸಚಿವರು ಅನುದಾನ ನೀಡಿದ್ದಾರೆಂದು ಪ್ರಶಂಸಿಸಿದರು. ಮೆಮುಲ್‌ ಅಧ್ಯಕ್ಷ ಕೆ.ಜಿ.ಮಹೇಶ್‌, ಕಟ್ಟೆಮಳಲವಾಡಿ, ಚಿಲ್ಕುಂದ,ಬಿಳಿಕೆರೆ, ಹನಗೋಡು ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಚಿಲ್ಕುಂದ-ಮುತ್ತುರಾಯನಹೊಸಹಳ್ಳಿ ಹಾಗೂ ಹಬ್ಬನಕುಪ್ಪೆ ಹಾಗೂ ಹಿರಿಕ್ಯಾತನಹಳ್ಳಿ ಭಾಗದ ರಸ್ತೆ ಅಭಿವೃದ್ಧಿಪಡಿಸಬೇಕು ಹಾಗೂ ಹಿರಿಕ್ಯಾತನಹಳ್ಳಿ, ಗುರುಪುರ,ಚಿಲ್ಕುಂದಕ್ಕೆ ಪಿಯು ಕಾಲೇಜು ಮಂಜೂರು ಮಾಡಿಸುವಂತೆ  ಕೋರಿದರು.

ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ  ಜಯಲಕ್ಷಿ, ಮೆಮುಲ್‌ ನಿರ್ದೇಶಕರಾದ ಕೆ.ಎಸ್‌.ಕುಮಾರ್‌, ಶಿವಗಾಮಿ, ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗೇಗೌಡ, ವ್ಯವಸ್ಥಾಪಕ  ಮಲ್ಲಿಕಾರ್ಜುನ್‌, ಡೇರಿ ಅಧ್ಯಕ್ಷೆ ರಾಧಾಮಣಿ, ಉಪಾಧ್ಯಕ್ಷೆ ಶಂಸದ್‌ ಬಾನು, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್‌ ಮತ್ತಿತರರಿದ್ದರು.
  
ಪಶು ವೈದ್ಯರ ನೇಮಕದಲ್ಲಿ ಕರ್ನಾಟಕ ನಂ1
ತಾವು ಅಧಿಕಾರ ವಹಿಸಿಕೊಂಡಾಗ  ರಾಜ್ಯದೆಲ್ಲೆಡೆ ಪಶು ವೈದ್ಯರಿಲ್ಲವೆಂಬ ಕೂಗು ಕೇಳಿ ಬಂದಿತ್ತು. ಸರ್ಕಾರ ಕೆಪಿಎಸ್‌ಇ ವತಿಯಿಂದ ನೇಮಕ ಮಾಡಿಕೊಳ್ಳಲಾದ 126 ಮಂದಿ ಸೇರಿದಂತೆ 624 ಮಂದಿ ಪಶು ವೈದ್ಯರನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ವೈದ್ಯರನ್ನು ಇನ್ನು 10-15 ದಿನಗಳಲ್ಲಿ ಎಲ್ಲ ಆಸ್ಪತ್ರೆಗಳಿಗೆ ನಿಯೋಜಿಸಲಾಗುತ್ತಿದ್ದು, ದೇಶದಲ್ಲೇ  ಪೂರ್ಣ ಪ್ರಮಾಣದಲ್ಲಿ ಪಶು ವೈದ್ಯರ ನೇಮಕ ಮಾಡಿದ ಹೆಗ್ಗಳಿಕೆ ಕರ್ನಾಟಕದ್ದಾಗಿದೆ ಎಂದು ಸಚಿವ ಎ.ಮಂಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next