ಮಹಾನಗರ: ಕೋವಿಡ್ ಕರ್ಫ್ಯೂ ಹಾಲು ಮಾರಾಟದ ಮೇಲೆ ಪರಿಣಾಮ ಬೀರಿದ್ದು, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟಕ್ಕೆ ದಿನವಹಿ ಸರಾಸರಿ 80,000 ಲೀ. ಗಳಿಂದ 1 ಲಕ್ಷ ಲೀ. ಮಾರಾಟವಾಗದೆ ಉಳಿಕೆಯಾಗುತ್ತಿದೆ. ಮಿಗತೆ ಹಾಲನ್ನು ಹುಡಿಯಾಗಿ ಪರಿವರ್ತಿಸಲಾಗುತ್ತಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಒಕ್ಕೂಟವು ಪ್ರಸ್ತುತ ದಿನಕ್ಕೆ ಸರಾಸರಿ 5,10,000 ಲೀ. ಹಾಲು ಶೇಖರಣೆ ಮಾಡುತ್ತಿದೆ. ಕರ್ಫ್ಯೂ ಜಾರಿಗೆ ಮೊದಲು ದಿನಕ್ಕೆ ಸರಾಸರಿ 4 ಲಕ್ಷ ಲೀ. ಹಾಲು ಮಾರಾಟವಾಗುತ್ತಿದ್ದರೆ ಈಗ 3,20,000 ಲೀ. ಮಾತ್ರ ಮಾರಾಟ ಆಗುತ್ತಿದೆ. ಮೊದಲು 50,000 ಲೀ. ಮೊಸರು ತಯಾರಿಕೆಗೆ, 30,000 ಲೀ. ಲಸ್ಸಿ, ಮಜ್ಜಿಗೆ ಇತ್ಯಾದಿಗೆ ಬಳಕೆಯಾಗುತ್ತಿತ್ತು. ಈಗ 65,000 ಲೀ. ಹಾಲನ್ನು ಮೊಸರು ತಯಾರಿಗೆ ಹಾಗೂ 40,000 ಲೀ. ಹಾಲನ್ನು ಲಸ್ಸಿ, ಮಜ್ಜಿಗೆ ಇತ್ಯಾದಿ ತಯಾರಿಗೆ ಬಳಸಲಾಗುತ್ತಿದೆ.
ಪ್ರಸ್ತುತ ಹೊಟೇಲ್‌ಗಳಿಗೆ ಹಾಲು ಪೂರೈಕೆ ಕಡಿಮೆಯಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಲ್ಲ. ಮದುವೆ ಇತ್ಯಾದಿ ಸಮಾರಂಭಗಳಿಗೆ ನಿರ್ಬಂಧ ಇರುವುದು ಹಾಲು ಮಾರಾಟ ಕಡಿಮೆಯಾಗಲು ಕಾರಣ. ಮೊಸರು ಮತ್ತು ಇತರ ಉತ್ಪನ್ನಗಳಿಗೂ ಬೇಡಿಕೆ ಕುಸಿದಿದೆ.
ಮಿಗತೆ ಹಾಲು ಲೀ.ಗೆ 8ರಿಂದ 10 ರೂ. ನಷ್ಟ ! :
ದ.ಕ. ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ರಾಜ್ಯದಲ್ಲಿಯೇ ಗರಿಷ್ಠ ದರ ನೀಡುತ್ತಿದೆ. ಇದೀಗ ಮಿಗತೆ ಹಾಲನ್ನು ಅನಿವಾರ್ಯವಾಗಿ ಹಾಲಿನ ಪುಡಿ ತಯಾರಿಸಲು ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಪುಡಿ ತಯಾರಿಸಲು ಹಾಲನ್ನು ದೂರದ ಚೆನ್ನಪಟ್ಟಣ ಅಥವಾ ರಾಮನಗರಕ್ಕೆ ಕೊಂಡೊಯ್ಯಬೇಕು. ಇದಕ್ಕಾಗಿ ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆ, ಸಾಗಾಟ ವೆಚ್ಚ ಮಾತ್ರವಲ್ಲದೆ ಹಾಲನ್ನು ಸಂಸ್ಕರಿಸಿ ಪುಡಿಯಾಗಿ ಪರಿವರ್ತಿಸಲು ಇನ್ನೊಂದಿಷ್ಟು ಖರ್ಚು. ಹಾಲಿನ ಪುಡಿಗೆ ರಾಜ್ಯದಲ್ಲಿ ಬೇಡಿಕೆ ಇಲ್ಲದಿದ್ದರೆ ಅದನ್ನು ಇತರ ರಾಜ್ಯಗಳಿಗೆ ಸಾಗಿಸಬೇಕಾಗಿದೆ. (ಹಾಲಿನ ಪುಡಿಗೆ ಪ್ರಸ್ತುತ ಕೆ.ಜಿ.ಗೆ 195 ರೂ. ಬೆಲೆ ಇದೆ). ಹಾಲಿನ ಪುಡಿ ತಯಾರಿಕೆಯಲ್ಲಿ ಖರ್ಚೇ ಜಾಸ್ತಿ; ಲಾಭದ ಸಾಧ್ಯತೆ ಕಡಿಮೆ. ಪುಡಿ ತಯಾರಿಸಲು ಬಳಕೆಯಾಗುವ ಪ್ರತಿ ಲೀ. ಹಾಲಿನಲ್ಲಿ 8ರಿಂದ 10 ರೂ. ನಷ್ಟದ ಸಾಧ್ಯತೆ ಹೆಚ್ಚು ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಕಳೆದ ಲಾಕ್‌ಡೌನ್ ವೇಳೆ ಹಳ್ಳಿ ಸೇರಿದವರಲ್ಲಿ ಜಮೀನು ಇರುವ ಹಲವು ಮಂದಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಈ ವರ್ಷ ಮಳೆಯೂ ಉತ್ತಮ ವಾಗಿರುವುದರಿಂದ ಹಸಿರು ಹುಲ್ಲು ಕೂಡ ಯಥೇತ್ಛ ವಾಗಿದೆ. ವಾತಾವರಣವೂ ಅನುಕೂಲ ಕರವಾಗಿರುವುದರಿಂದ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ (ಮೇ ಮೊದಲ ವಾರ) ದಿನಕ್ಕೆ 3,95,000 ಲೀ. ಹಾಲು ಶೇಖರವಾಗಿದ್ದರೆ ಈ ವರ್ಷ 4,96,000 ಲೀಟರ್‌ಗೆ ಏರಿದೆ. ಮೇ 2ರಂದು ದಾಖಲೆಯ 5,18,000 ಲೀ. ಉತ್ಪಾದನೆಯಾಗಿದೆ. ಇದೀಗ ಕರ್ಫ್ಯೂ ಕಾರಣ ಹೆಚ್ಚುವರಿ ಹಾಲು ಉತ್ಪಾದನೆಯ ಮಾರಾಟವೇ ಸವಾಲಾಗಿದೆ.
-ರವಿರಾಜ ಹೆಗ್ಡೆ, ಅಧ್ಯಕ್ಷರು, ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ
– ಹಿಲರಿ ಕ್ರಾಸ್ತಾ