Advertisement

1ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ವಿತರಣೆ

02:20 AM Jul 14, 2017 | Team Udayavani |

ಕೊಟ್ಟಾರ: ಕ್ಷೀರ ಭಾಗ್ಯ ಯೋಜನೆಯಡಿ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಜು. 17 ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನ ಹಾಲು ಲಭ್ಯವಾಗಲಿದೆ. ಮೈಸೂರು ಹಾಗೂ ರಾಯಚೂರು ಹೊರತುಪಡಿಸಿ, ಇತರ ಜಿಲ್ಲೆಗಳಲ್ಲಿ ಇದು ಜಾರಿಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್‌ ಡಿ’ಮೆಲ್ಲೋ ವಿಷಯ ತಿಳಿಸಿದರು. ಈ ಮಕ್ಕಳಿಗೆ ವಾರದಲ್ಲಿ 3 ದಿನ ಮಾತ್ರ ಹಾಲು ವಿತರಣೆ ಆಗುತ್ತಿತ್ತು. ಬಜೆಟ್‌ನಲ್ಲಿ ಘೋಷಣೆಯಾದ ಪ್ರಕಾರ ಐದು ದಿನಕ್ಕೆ ವಿಸ್ತರಣೆಯಾಗಲಿದೆ ಎಂದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಒಂದನೇ ತರಗತಿಗೆ 3,22,769 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಜಿಲ್ಲೆಯಾದ್ಯಂತ ಶೇ. 90 ರಷ್ಟು ಪಠ್ಯ ಪುಸ್ತಕಗಳು ಶಾಲೆಗಳಿಗೆ ವಿತರಣೆಯಾಗಿವೆ. 15,432 ಸೈಕಲ್‌ಗ‌ಳ ಬೇಡಿಕೆ ಇದ್ದು, 11,597 ಸೈಕಲ್‌ಗ‌ಳು ಬಂದಿವೆ. ಶೇ. 94ರಷ್ಟು ಮಕ್ಕಳಿಗೆ ಸಮವಸ್ತ್ರ ವಿತರಣೆಯಾಗಿದೆ. ಶೂ ವಿತರಣೆಗೆ ಸಂಬಂಧಿಸಿ ಎಸ್‌ಡಿಎಂಸಿಗೆ ಹಣ ಬಿಡುಗಡೆಯಾಗಿದೆ. ಎರಡನೇ ಸೆಟ್‌ ಸಮವಸ್ತ್ರಕ್ಕೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

Advertisement

ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು..!
ಸಚಿವ ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆಯೇ? ಮಕ್ಕಳು ತಿನ್ನುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಉತ್ತರಿಸಿ, ಜೂನ್‌ನಿಂದ ಮೊಟ್ಟೆ ವಿತರಿಸಲಾಗುತ್ತಿದೆ. ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳು ಮೊಟ್ಟೆ ತಿನ್ನುತ್ತಿದ್ದಾರೆ. ಮೊಟ್ಟೆ ತಿನ್ನದ ಮಕ್ಕಳಿಗೂ ಪರ್ಯಾಯ ಆಹಾರ ನೀಡಬೇಕು ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಮಾತನಾಡಿ, ಉಳಿದ ಮಕ್ಕಳಿಗೆ ಯಾವ ಆಹಾರ ನೀಡಬಹುದು ಎಂದು ಸಲಹೆ ಕೇಳಿದರು. ಬಾಳೆಹಣ್ಣು ವಿತರಿಸಬಹುದು ಎಂದರು ಸುಂದರ ಪೂಜಾರಿ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ರೈ ಹೇಳಿದರು.

ಅರ್ಜಿಗಳು ವಿಲೇವಾರಿ
ಜಿಲ್ಲೆಯಲ್ಲಿ ’94ಸಿ’ಯಡಿ ಫೆಬ್ರವರಿ ಅಂತ್ಯಕ್ಕೆ ಒಟ್ಟು 77,682 ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 60,439 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಉಳಿದ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. 94ಸಿಸಿ ಅಡಿ 27,000 ಅರ್ಜಿಗಳು ಬಂದಿದ್ದು, ವಿಲೇವಾರಿ ನಡೆಯುತ್ತಿದೆ. ಜುಲೈ ಅಂತ್ಯಕ್ಕೆ ಮೊದಲು ಇತ್ಯರ್ಥಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಯವರು ಎಲ್ಲ ತಹಶೀಲ್ದಾರ್‌ ಗೆ ಸೂಚಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್‌ ಹೇಳಿದರು. 

ಗ್ರಾ.ಪಂ.ಗಳಲ್ಲಿ ಅಂಬೇಡ್ಕರ್‌ ಭವನ
ಗ್ರಾಮ ಪಂಚಾಯತ್‌ಗಳಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ನನೆಗುದಿಗೆ ಬಿದ್ದಿರುವ ಬಗ್ಗೆ ಸಚಿವ ರೈ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಗ್ರಾ.ಪಂ. ಮಟ್ಟದಲ್ಲಿ ನಿರ್ಮಾಣವಾಗಬೇಕಿರುವ ಅಂಬೇಡ್ಕರ್‌ ಭವನಗಳಿಗೆ ಸರಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಹಿಂದೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡುತ್ತಿದ್ದಾಗ ಈ ಕಾಯುವಿಕೆ ಇರಲಿಲ್ಲ ಎಂದು ಸಮಾಜ ಕಲ್ಯಾಣ ಅಧಿಕಾರಿ ಡಾ| ಸಂತೋಷ್‌ ಕುಮಾರ್‌ ತಿಳಿಸಿದರು. ಅದಕ್ಕೆ ಸಚಿವ ರೈ ಪ್ರತಿಕ್ರಿಯಿಸಿ, ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಹಣದ ತೊಂದರೆ ಇಲ್ಲ. ಸರಕಾರದಿಂದ ಅನುಮೋದನೆ ಆಗಿ ಬರಲು ತಡವಾಗುತ್ತಿರುವುದರಿಂದ ಜಿಲ್ಲಾಧಿಕಾರಿ ಮೂಲಕವೇ ಅನುಮೋದನೆ ಪಡೆದು ಕಾರ್ಯಾರಂಭಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಸೂಚಿಸಿದರು. 

ಪ್ರೌಢಶಾಲೆ ಮೇಲ್ದರ್ಜೆಗೆ: ಸ್ಥಳೀಯರ ಜತೆ ಚರ್ಚೆಗೆ ಸಲಹೆ
1ರಿಂದ 10ನೇ ತರಗತಿಯ ಪ್ರೌಢಶಾಲೆಯನ್ನು ಪಿಯುಸಿವರೆಗೆ ಮೇಲ್ದರ್ಜೆಗೆ ಏರಿಸುವ ಸರಕಾರದ ಆದೇಶದ ಬಗ್ಗೆ ವರದಿ ತಯಾರಿಸುವುದು ಯಾರು? ಎಂದು ಸಚಿವ ಖಾದರ್‌ ಪ್ರಶ್ನಿಸಿದರು. ಡಿಡಿಪಿಐ ಉತ್ತರಿಸಿ, ಪ್ರತಿ ತಾಲೂಕಿನಲ್ಲಿ ಹೋಬಳಿಗೊಂದು 1ರಿಂದ 10ನೇ ತರಗತಿವರೆಗಿನ ಶಾಲೆಯನ್ನು ಪಿಯುಸಿವರೆಗೆ ಮೇಲ್ದರ್ಜೆಗೇರಿಸುವ ಕುರಿತು ಡಿಡಿಪಿಐ ಹಾಗೂ ಇಲಾಖೆ ಅಧಿಕಾರಿಗಳು ಜಂಟಿಯಾಗಿ ವರದಿ ತಯಾರಿಸಬೇಕಿದೆ ಎಂದರು. ವರದಿ ತಯಾರಿಸುವ ವೇಳೆ ಸ್ಥಳೀಯರ ಜತೆ ಚರ್ಚಿಸಿ ಅವರ ಬೇಕು ಬೇಡಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಿ ಎಂದು ಸಚಿವ ಖಾದರ್‌ ಸಲಹೆ ನೀಡಿದರು.

Advertisement

ಅಕ್ಟೋಬರ್‌ನಿಂದ ‘ಮಾತೃಪೂರ್ಣ’ ಯೋಜನೆ ಆರಂಭ
ಅಂಗನವಾಡಿ ಕೇಂದ್ರಗಳಲ್ಲೇ ಬಾಣಂತಿಯರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ‘ಮಾತೃ ಪೂರ್ಣ’ ಯೋಜನೆ ಜಿಲ್ಲೆಯಲ್ಲಿ ಅಕ್ಟೋಬರ್‌ ತಿಂಗಳಿನಿಂದ ಆರಂಭಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆಯ ಉಪ ನಿರ್ದೇಶಕರಾದ ಸುಂದರ ಪೂಜಾರಿ ತಿಳಿಸಿದರು.

ಹೆದ್ದಾರಿಗಳಲ್ಲಿ ಹಳೆ ವಾಹನ ತೆರವಿಗೆ ಸಭೆಗೆ ಸೂಚನೆ
ಜಿಲ್ಲೆಯ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾದ, ಸರಕಾರದ ಉಪಯೋಗವಿಲ್ಲದ ವಾಹನಗಳಿಂದ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಕಳೆದ ಸಭೆಯಲ್ಲಿ ತಿಳಿಸಲಾಗಿದ್ದರೂ ಕ್ರಮವಾಗಿಲ್ಲ ಎಂದು ನಾಮನಿರ್ದೇಶಿತ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಸಿ ಕ್ರಮ ಕೈಗೊಳ್ಳುವಂತೆ ಸಚಿವ ರೈ ಸೂಚಿಸಿದರು.

ಸುಳ್ಯ ತಾಲೂಕಿನ ಸಬ್‌ಸ್ಟೇಷನ್‌ನ್ನು ಯಾರ ಮಾತಿಗೂ ಕಿವಿಗೊಡದೇ ನಿಗದಿತ ರೀತಿಯಲ್ಲಿ ತುರ್ತಾಗಿ ನಿರ್ಮಿಸಬೇಕು. ಬಂಟ್ವಾಳ ತಾಲೂಕು ಸಿದ್ದಕಟ್ಟೆಯಲ್ಲಿ ಬಾಕಿಯಿರುವ ಸಬ್‌ಸ್ಟೇಷನ್‌ ನಿರ್ಮಾಣಕ್ಕೂ ವೇಗ ನೀಡುವಂತೆ ಸಚಿವ ರೈ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಅಭಯಚಂದ್ರ ಜೈನ್‌, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರಾದ ಶಾಹುಲ್‌ ಹಮೀದ್‌, ಸರ್ವೋತ್ತಮ ಗೌಡ, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಸಿಇಒ ಡಾ| ಎಂ.ಆರ್‌. ರವಿ ಮುಂತಾದವರು ಉಪಸ್ಥಿತರಿದ್ದರು. 

ಜಿಲ್ಲೆಯ 68 ಸಾವಿರ ಕುಟುಂಬಗಳಿಗೆ ಅನಿಲ ಭಾಗ್ಯ
ಜಿಲ್ಲೆಯ ಅಡುಗೆ ಅನಿಲ ಸ್ಥಿತಿಗತಿ ಕುರಿತಂತೆ ಸಚಿವ ಯು.ಟಿ.ಖಾದರ್‌ ಅವರ ಪ್ರಶ್ನೆಗೆ ಉತ್ತರಿಸಿದ ಆಹಾರ ಪೂರೈಕೆ ಜಿಲ್ಲಾ ಉಪನಿರ್ದೇಶಕರು, ಒಟ್ಟು 71,300 ಕುಟುಂಬಗಳಿಗೆ ಅಡುಗೆ ಅನಿಲ ಸೌಲಭ್ಯ ಇಲ್ಲ. ಅವರಲ್ಲಿ ಸುಮಾರು 3 ಸಾವಿರ ಮಂದಿ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, 68 ಸಾವಿರ ಮಂದಿ ಗ್ಯಾಸ್‌ ರಹಿತರಿದ್ದಾರೆ ಎಂದರು. ಸಚಿವರು ಪ್ರತಿಕ್ರಿಯಿಸಿ, ಇವರೆಲ್ಲರಿಗೂ ಮುಖ್ಯಮಂತ್ರಿ ಅನಿಲ ಭಾಗ್ಯದಡಿ ಉಚಿತ ಗ್ಯಾಸ್‌ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ತಿಂಗಳೊಳಗೆ ಎಲ್ಲಾ ಪಡಿತರ ಸಾಮಗ್ರಿ ವಿತರಣಾ ಕೇಂದ್ರಗಳಲ್ಲಿ ಪಿಒಎಸ್‌ ಯಂತ್ರಗಳನ್ನು ಅಳವಡಿಸಿರುವುದನ್ನು ಖಾತರಿಪಡಿಸಬೇಕು ಎಂದು ಹೇಳಿದರು.

ಎಂಡೋ ಸಂತ್ರಸ್ತರ‌ಲ್ಲದವರ ತನಿಖೆಯಾಗಲಿ: ಸಚಿವ ರೈ
ಸಚಿವ ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಪಟ್ಟಿಯಲ್ಲಿ ಎಂಡೋ ಪೀಡಿತರಲ್ಲದವರೂ ಸೇರಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿಬಂದಿವೆ. ಇದರಿಂದ ಅರ್ಹರಿಗೆ ನ್ಯಾಯ ದೊರಕದಂತಾಗಿದೆ. ಎಂಡೋ ಪೀಡಿತರು ಅಲ್ಲದವರು ಕೂಡ  ಸೌಲಭ್ಯ ಪಡೆಯುತ್ತಿದ್ದಾರೆ. ಈ ಬಗ್ಗೆ ಸಮಗ್ರ ಸಮೀಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಸಚಿವ ಖಾದರ್‌ ಮಾತನಾಡಿ, ಎಂಡೋ ಅಲ್ಲದವರು ಈ ಹಿಂದೆ ಹಣ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಇದೆ. ಬೈಕ್‌ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಆ ಬಳಿಕ ಎಂಡೋ ಪೀಡಿತ ಎಂದು ಹೇಳಿ ಸವಲತ್ತು ಪಡೆದ ಘಟನೆಯೂ ಇದೆ ಎಂದು ತಿಳಿಸಿದರು. ಸಚಿವ ರೈ ಮಾತನಾಡಿ, ನೈಜ ಎಂಡೋ ಪೀಡಿತನಿಗೆ ಸರಕಾರದ ಎಲ್ಲ ಸವಲತ್ತು ಸಿಗಬೇಕು. ಎಂಡೋ ಅಲ್ಲದವರಿಗೆ ಈ ಸೌಲಭ್ಯ ಸಿಗಬಾರದು ಎಂದು ಸೂಚಿಸಿದರು. 

ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿ
ಸಚಿವ ರಮಾನಾಥ ರೈ ಮಾತನಾಡಿ, ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಗಮನ ಹರಿಸಲಾಗಿದೆ. ಇದೀಗ ಮಳೆಗಾಲದಲ್ಲಿ ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸರ್ವಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರಿಗೆ ಸಂಬಂಧಿಸಿ ಮಂಗಳೂರು ಜನತೆಯನ್ನು ಹಲವು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಯನ್ನು ಹೊಸ ತುಂಬೆ ಅಣೆಕಟ್ಟನ್ನು ಪೂರ್ಣಗೊಳಿಸುವ ಮೂಲಕ ನೀಗಿಸಲು ಪ್ರಯತ್ನಿಸಲಾಗಿದೆ. ಮೂರು ವರ್ಷಗಳಲ್ಲಿ ಜಿಲ್ಲೆಯ ರಾಜ್ಯ ಹೆದ್ದಾರಿಗಳು, ಲೋಕೋಪಯೋಗಿ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ. ನೆರೆಹಾವಳಿ, ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿ ಪೂರ್ವಭಾವಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ರಸ್ತೆಯ ಇಕ್ಕೆಲಗಳ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next