Advertisement

ಬಿಸನಾಳ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಶ್ರೇಷ್ಠ ಸಹಕಾರಿ ರಾಷ್ಟ್ರ ಪ್ರಶಸ್ತಿ

09:28 PM Feb 04, 2022 | Team Udayavani |

ಮಹಾಲಿಂಗಪುರ : ರೈತರ ಹೈನೋದ್ಯಮ ನಿರಂತರ ಚಟುವಟಿಕೆ ಉಳಿಸಿಕೊಳ್ಳಲು ಸಹಕಾರಿಯಾಗಿ ಹಾಲು ಉತ್ಪಾದಕರಿಗೆ ಲಾಭಾಂಶ ಬಿಟ್ಟು ಕೊಟ್ಟು ಅವಳಿ ಜಿಲ್ಲೆಯಲ್ಲೇ ಮಾದರಿಯಾಗಿದ್ದ ರಬಕವಿ ಬನಹಟ್ಟಿ ತಾಲೂಕಿನ ಬಿಸನಾಳದ ಹಾಲು ಉತ್ಪಾದಕರ ಸಹಕಾರಿ ಸಂಘವು 2021ರ ಶ್ರೇಷ್ಠ ಸಹಕಾರಿ ರಾಷ್ಟ್ರೀಯ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡಿದೆ.

Advertisement

ಇದು ವಿಜಯಪುರ ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಾದರಿ ಹಾಲು ಉತ್ಪಾದಕರ ಸಹಕಾರಿ ಸಂಘವಾಗಿದೆ.

ಆರಂಭದಲ್ಲಿ 100 ಸದಸ್ಯರಿಂದ ಪ್ರತಿ ದಿನ 10 ಲೀ. ಹಾಲು ಸಂಗ್ರಹವಿತ್ತು. ಸದ್ಯ 213 ಸದಸ್ಯರಿಂದ ನಿತ್ಯ 2500 ಲೀ ಹಾಲು ಸಂಗ್ರಹಿಸುತ್ತಿದ್ದು, 11.60 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ನಿರ್ದೇಶಕ ಮಹಾದೇವ ಚಿನಗುಂಡಿ ಅವರ ತಂದೆ ಕಲ್ಲಪ್ಪ ಅವರ ಸ್ಮರಣಾರ್ಥ ದೇಣಿಗೆ ನೀಡಿದ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಪ್ರತಿ ವಾರ ಹಾಲಿನ ಬಿಲ್ ಆನ್‌ಲೈನ್ ಮೂಲಕ ನೇರವಾಗಿ ಹಾಲು ಉತ್ಪಾದಕರ ಖಾತೆಗೆ ಜಮಾ ಮಾಡಲಾಗುತ್ತಿದೆ.

ಸಂಘದ ಮಾದರಿ ಚಟುವಟಿಕೆಗಳು:
ಕೆಸರಗೊಪ್ಪ ಗ್ರಾಪಂ ವ್ಯಾಪ್ತಿಯ ಬಿಸನಾಳ ಗ್ರಾಮದಿಂದ ಬಿಸನಾಳ ಗ್ರಾಮದಿಂದ 2.5 ಕಿ.ಮೀ ದೂರದ ತೋಟದ ವಸತಿಯಲ್ಲಿ 1993 ರಲ್ಲಿ ಡೇರಿ ಸ್ಥಾಪನೆಯಾಯಿತು. 2010 ರಲ್ಲಿ ಬೃಹತ್ ಪ್ರಮಾಣದ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನ ಏರ್ಪಡಿಸಿ ಬಹುಮಾನ ನೀಡಿ ಉತ್ತೇಜಿಸಿದೆ. 2016 ರಲ್ಲಿ ಅವಳಿ ಜಿಲ್ಲೆ ಹಾಲು ಒಕ್ಕೂಟದಿಂದ 5 ಸಾವಿರ ಲೀ. ಸಾಮರ್ಥ್ಯದ ಹಾಲು ಶೀತಲೀಕರಣ ಘಟಕ ಸ್ಥಾಪಿಸಿದೆ.

2018 -19ನೇ ಸಾಲಿನಲ್ಲಿ ಹಾಲಿನ ಶುದ್ಧತೆಗೆ ಎಲ್ಲ ಹಾಲು ಉತ್ಪಾದಕರಿಗೆ ರೂ. 1.29 ಲಕ್ಷ ವೆಚ್ಚದಲ್ಲಿ ಉಚಿತ ಸ್ಟೀಲ್ ಕ್ಯಾನ್ ವಿತರಿಸಿದೆ. 2019- 20ನೇ ಸಾಲಿನಲ್ಲಿ ನೆರೆ ಹಾವಳಿಯಿಂದ ಸಂಕಷ್ಟದಲ್ಲಿದ್ದ ಹಾಲುತ್ಪಾದಕರ ಜಾನುವಾರುಗಳಿಗೆ ರೂ. 50 ಸಾವಿರ ವೆಚ್ಚದಲ್ಲಿ ಉಚಿತ ಪಶು ಆಹಾರ ವಿತರಿಸಿದೆ. ಪ್ರತಿ ವರ್ಷ ಹಾಲು ಉತ್ಪಾದಕರ ಪ್ರತಿಭಾವಂತ ಮಕ್ಕಳಿಗೆ 5 ಸಾವಿರ ಪ್ರೋತ್ಸಾಹಧನ ವಿತರಿಸುತ್ತಿದೆ. ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಸೌಲಭ್ಯವಿದೆ. 2020 21ನೇ ಸಾಲಿನ ಕೊರೊನಾ ವಾರಿಯರ‍್ಸ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಿ ಸನ್ಮಾನಿಸಿದೆ. ಲಾಕ್‌ಡೌನ್‌ನಲ್ಲಿ ಸಂಕಷ್ಟದಲ್ಲಿದ್ದ ಹಾಲುತ್ಪಾದಕರಿಗೆ (ಅವಳಿ ಜಿಲ್ಲೆಯಲ್ಲೇ ಮೊದಲು) ರೂ. 1.51 ಲಕ್ಷ ಲಾಭಾಂಶ ವಿತರಿಸಿದೆ. ಹಾಲುತ್ಪಾದಕರಿಗೆ ನಿಯಮಿತವಾಗಿ ಡಿವಿಡಂಡ್ ಮತ್ತು ಬೋನಸ್ ವಿತರಿಸಲಾಗುತ್ತಿದೆ.

Advertisement

ಸಂಘದ ಯಶಸ್ವಿನ ರೂವಾರಿಗಳು:
ಸಂಘದ ಅಧ್ಯಕ್ಷ ಗಿರಿಮಲ್ಲಪ್ಪ ಚಿಂಚಲಿ, ಉಪಾಧ್ಯಕ್ಷ ಶ್ರೀಶೈಲ ಅಂದಾನಿ, ನಿರ್ದೇಶಕರಾದ ಶಿವಲಿಂಗಪ್ಪ ವಾಲಿ, ಚನ್ನಪ್ಪ ನಿಪನಾಳ, ಮುರಿಗೆಪ್ಪ ಶಿರೋಳ, ಮಹಾಲಿಂಗಪ್ಪ ಬಂದಿ, ಸುರೇಶ ಉಳ್ಳಾಗಡ್ಡಿ, ಮಹಾದೇವ ಚಿನಗುಂಡಿ, ಬಾಳಪ್ಪ ಹುಕ್ಕೇರಿ, ಕಲ್ಲೋಲೆಪ್ಪ ವಡ್ಡರ, ಪಾರ್ವತಿ ಉಳ್ಳಾಗಡ್ಡಿ, ಕಾಶವ್ವ ಹೊಸೂರ, ಮುಖ್ಯ ಕಾರ್ಯನಿರ್ವಾಹಕ ಗಿರಿಮಲ್ಲಪ್ಪ ಸುಳ್ಳನವರ, ಸಿಬ್ಬಂದಿ ಶಿವಲಿಂಗ ಸಪ್ತಸಾಗರ, ಮಹಾಂತೇಶ ಬಾಗೇವಾಡಿ, ಮಲ್ಲಿಕಾರ್ಜುನ ಚಿಂಚಲಿ ಸಂಘದ ಶ್ರೇಯಸ್ಸಿಗೆ ಶ್ರಮಿಸಿದ್ದಾರೆ.

ಅವಳಿ ಜಿಲ್ಲೆಯ ಅತ್ಯುತ್ತಮ ಸಂಘ :
ವಿಜಯಪುರ ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದ ಅವಳಿ ಜಿಲ್ಲೆಯ ಹಾಲು ಉತ್ಪಾದರಕ ಸಹಕಾರಿ ಸಂಘಗಳಲ್ಲಿಯೇ ಬಿಸನಾಳದ ಸಂಘವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಮಾದರಿ ಸಂಘವಾದ ಕಾರಣ ಅವಳಿ ಜಿಲ್ಲೆಯ ವಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಡಿ.ದೀಕ್ಷಿತ ಅವರು, ಆಡಳಿತ ಮಂಡಳಿ ಸದಸ್ಯರು ಹಾಗೂ ಜಮಖಂಡಿ ಸಹಕಾರಿ ಸಂಘಗಳ ನಿಬಂಧಕ ಎಸ್.ಬಿ.ಬಾಡಗಿ ಅವರು ಬಿಸನಾಳ ಸಂಘದ ಕಾರ್ಯವೈಖರಿಯನ್ನು ಮೆಚ್ಚಿಕೊಂಡು ಪ್ರಶಸ್ತಿ ವಿಜೇತ ಸಂಘಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅವಳಿ ಜಿಲ್ಲೆಯ ವಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಡಿ.ದೀಕ್ಷಿತ ಹಾಗೂ ಸಹಕಾರಿ ಸಂಘಗಳ ನಿಬಂಧಕ ಎಸ್.ಬಿ.ಬಾಡಗಿ ಅವರ ಮಾರ್ಗದರ್ಶನದಲ್ಲಿ ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿಯ ದಕ್ಷ ಕಾರ್ಯಕ್ಕೆ ಪ್ರತಿಫಲವಾಗಿ ನಮ್ಮ ಸಂಘಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ.
– ಗಿರಿಮಲ್ಲಪ್ಪ ಸುಳ್ಳನವರ, ಮುಖ್ಯ ಕಾರ್ಯನಿರ್ವಾಹಕ, ಬಿಸನಾಳ ಡೇರಿ.

ಬಿಸನಾಳ ಡೇರಿಯ ಎಲ್ಲ ಪದಾಧಿಕಾರಿಗಳು ಮತ್ತು ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನ, ಸಮರ್ಪಣಾ ಮನೋಭಾವದ ದುಡಿಮೆಯಿಂದ ಡೇರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ಲಭಿಸಿದೆ. ಎಲ್ಲ ಹಾಲುತ್ಪಾದಕರಿಗೂ ಆಡಳಿತ ಮಂಡಳಿಗೂ ಹಾಗೂ ಸಿಬ್ಬಂದಿಗೂ ಅಭಿನಂದನೆಗಳು. ಇದು ಇತರ ಸಂಘಗಳಿಗೆ ಮಾದರಿಯಾಗಲಿ.
– ಸಿದ್ದು ಸವದಿ, ಶಾಸಕ ತೇರದಾಳ ಮತಕ್ಷೇತ್ರ

ವರದಿ : ಚಂದ್ರಶೇಖರ ಮೋರೆ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next