ಚಾಮರಾಜನಗರ: ಗುಣಮಟ್ಟದ ಹಾಲು ಪೂರೈಕೆ ಮಾಡಿ, ಡೇರಿ ಹಾಗೂ ಒಕ್ಕೂಟದ ಪ್ರಗತಿಗೆ ಹಾಲು ಉತ್ಪಾದಕರ ರೈತರು ಸಹಕರಿಸಿ, ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳಬೇಕು ಎಂದು ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ಹೇಳಿದರು.
ತಾಲೂಕಿನ ಬಂದಿಗೌಡನಹಳ್ಳಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆ ಪ್ರಮುಖ ಉದ್ಯಮವಾಗಿದೆ. ಬೇಸಾಯದ ಜೊತೆಗೆ ಹೈನುಗಾರಿಕೆ ಹೆಚ್ಚಿನ ಪ್ರಾಮುಖ್ಯತೆ ಹಾಗು ವೈಜ್ಞಾನಿಕವಾಗಿ ಹಸು ಸಾಕಾಣಿಕೆ ಮಾಡುವುದನ್ನು ಹೈನುಗಾರರು ಅಳವಡಿಸಿಕೊಳ್ಳಬೇಕು. ಹಸು ಎರಡು ಹೊತ್ತು ಹಾಲು ಕೊಡುವ ಜೊತೆಗೆ ನಮ್ಮ ಜೀವನಾಡಿಯಾಗಿದೆ ಎಂದರು.
ಇನ್ನೂ ಹೆಚ್ಚಿನ ಹಾಲು ಪೂರೈಸಿ: ಹಸುವನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ತರಬೇತಿ ಯನ್ನು ರೈತರು ಪಡೆದುಕೊಳ್ಳಬೇಕು. ಒಕ್ಕೂಟ ಹಾಗೂ ಡೇರಿಯಿಂದ ಇಂಥ ತರಬೇತಿಗಳನ್ನು ಆಯೋಜನೆ ಮಾಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರು ಒಕ್ಕೂಟದ ಯೋಜನೆಗಳನ್ನು ಸದ್ಬಳಕೆ ಮಾಡಿ ಕೊಂಡು ಇನ್ನೂ ಹೆಚ್ಚಿನ ಹಾಲು ಪೂರೈಕೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ರೈತರಿಗೆ 10 ದಿನಕ್ಕೊಮ್ಮೆ ಹಣ: ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ, ರೈತರು ಹೈನುಗಾರಿಕೆಯಿಂದ ಹೆಚ್ಚಿನ ಲಾಭ ಕಾಣಲು ಸಾಧ್ಯವಿದೆ. ಇದನ್ನರಿತು ಅಂದು ಸಹಕಾರ ಸಚಿವರಾಗಿದ್ದ ದಿ. ಮಹದೇವಪ್ರಸಾದ್ ಅವರು ಮೈಸೂರಿನಿಂದ ಒಕ್ಕೂಟವನ್ನು ಪ್ರತ್ಯೇಕಗೊಳಿಸಿ ಚಾ.ನಗರ ಹಾಲು ಒಕ್ಕೂಟ ರಚನೆ ಮಾಡಿ, ಹೆಚ್ಚಿನ ಹಾಲು ಸಂಗ್ರಹವಾಗುತ್ತಿದ್ದ ಒಕ್ಕೂಟವನ್ನು ಉಳಿಸಲು ಟೆಟ್ರಾ ಪ್ಯಾಕೆಟ್ ಯೂನಿಟ್ ಆರಂಭಿಸಿದರು. ಆದರ ಫಲವಾಗಿ ಇಂದು ಡೇರಿ ಪ್ರಗತಿಯತ್ತ ಸಾಗುತ್ತಿದೆ. ರೈತರಿಗೆ 10 ದಿನಕ್ಕೊಮ್ಮೆ ಹಣ ನೀಡಲು ಸಾಧ್ಯವಾಗುತ್ತಿದೆ. ಕುದೇರಿನಲ್ಲಿ ಸುಸಜ್ಜಿತ ಒಕ್ಕೂಟ ನಿರ್ಮಾಣವಾಗಿದೆ. ನೀವು ನೀಡುವ ಹಾಲು ಯಾವ ರೂಪದಲ್ಲಿ ಎಲ್ಲಿಗೆ ಹೋಗುತ್ತದೆ ಎಂಬುದನ್ನು ತಿಳಿಯಲು ಒಮ್ಮೆ ಒಕ್ಕೂಟಕ್ಕೆ ಭೇಟಿ ನೀಡಿ, ಅಲ್ಲಿನ ಘಟಕವನ್ನು ವೀಕ್ಷಣೆ ಮಾಡಿ, ನಿಮಗೂ ಪ್ರೇರಣೆಯಾಗುತ್ತದೆ ಎಂದರು.
ಮಾದರಿ ಸಂಘವನ್ನಾಗಿ ಮಾಡಲು ಶ್ರಮಿಸಿ: ಬಂದಿಗೌಡನಹಳ್ಳಿ ಕಾಲೋನಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ. ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘ ಸ್ಥಾಪನೆಗೆ ಅನೇಕರ ಶ್ರಮ ಕಾರಣವಾಗಿದೆ. ಈ ಹಿಂದೆ ಬಿಸಲವಾಡಿಯಲ್ಲಿದ್ದ ಡೇರಿಗೆ ಈ ಭಾಗದ ರೈತರು ಹಾಲು ಸರಬರಾಜು ಮಾಡುತ್ತಿದ್ದರು. ನಂತರ ಬಂದಿಗೌಡನಹಳ್ಳಿಯಲ್ಲಿ ಡೇರಿಯನ್ನು ಆರಂಭಿಸಲಾಯಿತು. ಇದಾದ ಬಳಿಕ ಕಾಲೋನಿ ಯಲ್ಲಿರುವ ರೈತರು ಐದಾರು ಕಿ.ಮೀ. ದೂರದಲ್ಲಿ ರುವ ಬಂದಿಗೌಡನಹಳ್ಳಿ, ಬೊಮ್ಮನಹಳ್ಳಿ, ಬಿಸಲ ವಾಡಿಗಳಿಗೆ ಹೋಗಬೇಕಾಗಿತ್ತು. ಬಂದಿಗೌಡ ನಹಳ್ಳಿ ಕಾಲೋನಿಯಲ್ಲಿಯು ಸಹ 2006ರಲ್ಲಿ ಡೇರಿಯನ್ನು ಸ್ಥಾಪನೆ ಮಾಡಿ, ಈಗ ಸ್ವಂತ ಕಟ್ಟಡವನ್ನು ಹೊಂದಿದೆ. 100ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಇನ್ನೂ ಹೆಚ್ಚಿನ ಹಾಲು ಸರಬರಾಜು ಮಾಡುವ ಮೂಲಕ ಮಾದರಿ ಸಂಘವನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು. ಡೇರಿ ಕಟ್ಟಡ ನಿರ್ಮಾಣಕ್ಕೆ ಸಂಘದಲ್ಲಿ ಕೇವಲ 1.50 ಲಕ್ಷ ರೂ. ಹಣ ಇತ್ತು. ಕ್ಷೇತ್ರದ ಶಾಸಕರು 5 ಲಕ್ಷ ರೂ. ವಿಧಾನ ಪರಿಷತ್ ಸದಸ್ಯರು 5 ಲಕ್ಷ ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 75 ಸಾವಿರ ರೂ.ಗಳನ್ನು ನೀಡಿದೆ. ಹಿಂದಿನ ಚಾಮುಲ್ ನಿರ್ದೇಶಕರು ಅನುದಾನ ನೀಡಿದ್ದಾರೆ ಎಂದರು.
ಚಾಮುಲ್ ನಿರ್ದೇಶಕರಾದ ಸದಾಶಿವ ಮೂರ್ತಿ, ಶೀಲಾ, ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಮೂರ್ತಿ, ಪ್ರಧಾನ ವ್ಯವಸ್ಥಾಪಕ ಕೆ. ರಾಜಕುಮಾರ್, ಸಹಾಯಕ ವ್ಯವಸ್ಥಾಪಕ ಡಾ. ಎಸ್. ಅಮರ್, ಸಮಾಲೋಚಕ ನಂಜುಂಡಸ್ವಾಮಿ, ಬಿಸಲವಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಈಶ್ವರ್, ಉಪಾಧ್ಯಕ್ಷ ಗುರುಸ್ವಾಮಿ, ಸದಸ್ಯರಾದ ಮಲ್ಲೇಶ್, ಮಣಿ ಬಿಜಿ ಕಾಲೋನಿ, ಜ್ಯೋತಿ, ಡೇರಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ನಿರ್ದೇಶಕರಾದ ಮಹದೇವಸ್ವಾಮಿ, ಬಸವರಾಜು, ಎಂ. ಬಸವಣ್ಣ, ಶಿವಮಲ್ಲಪ್ಪ, ಚನ್ನಬಸಪ್ಪ, ಚಿನ್ನಮ್ಮ, ಕೆಂದೇವಪ್ಪ, ಸಿಇಓ ಸಿ. ಬಸವಣ್ಣ, ಮುಖಂಡರಾದ ಶಾಂತಮಲ್ಲಪ್ಪ, ಮಹದೇವಪ್ಪ, ನಂಜಪ್ಪ, ಬಿಸಲವಾಡಿ ಡೇರಿ ಮಹೇಶ್, ಪುನೀತ್ ಇದ್ದರು.