ಶಿರಸಿ: ತಾಲೂಕಿನ ಬಂಡಲದಲ್ಲಿ ಮಂಜುಗುಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ 3ನೇ ನೂತನ ಹಾಲು ಶೇಖರಣಾ ಕೇಂದ್ರವನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹಾಲು ಅಳೆಯುವುದರ ಮುಖಾಂತರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಮಾರು 1138 ಗ್ರಾಮಗಳಿದ್ದು, ಎಲ್ಲಾ ಗ್ರಾಮಗಳಲ್ಲೂ ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪಿಸುವ ಗುರಿಯೊಂದಿಗೆ ಹೊರಟಿದ್ದೇವೆ ಎಂದು ಧಾರವಾಡ ಹಾಲು ಒಕ್ಕೂಟದ ಹಾಗೂ ಕಲ್ಯಾಣ ಸಂಘದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು. ಕೋವಿಡ್ ಬಂದಿರುವುದು ಹಾಲು ಕ್ಷೇತ್ರಕ್ಕೆ ಅನುಕೂಲ ವಾತಾವರಣ ಕಲ್ಪಿಸಿದ್ದು, ಹೊಸಬೆಳಕು ಮೂಡಿಸಿದೆ ಎಂದರು.
ಕೋವಿಡ್ ಕಾರಣ ಪಟ್ಟಣ ತೊರೆದು ಹಳ್ಳಿಗೆ ಬಂದಿರುವ ಯುವಸಮೂಹ ಹೈನುಗಾರಿಕೆಯತ್ತ ಒಲವುತೋರಿಸುತ್ತಿರುವುದು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಈ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿ ಉತ್ತಮ ಸಹಕಾರ ನೀಡುತ್ತಿದ್ದು ಜಿಲ್ಲೆಯ ಹೊಸ ಭರವಸೆ ಮೂಡಿಸಿದೆ ಎಂದರು. ಸಂಘಕ್ಕೆ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ಕೊಡಿಸಲು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಪ್ರವೀಣ ಶಿವಲಿಂಗ ಗೌಡ ತೆಪ್ಪಾರ್ ಮಾತನಾಡಿ, ನಮ್ಮ ಭಾಗದ ಜನರು ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು. ನಿರ್ದೇಶಕರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಮಂಗಲಾ ರವಿ ನಾಯ್ಕ, ಕೋಳಿ ಸಾಕಾಣಿಕಾ ಸಂಘ ಬಂಡಲದ ಅಧ್ಯಕ್ಷ ಸಂತೋಷ ಗೌಡರ್, ಮಾಜಿ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಗ್ರಾಪಂ ಸದಸ್ಯ ಮಂಜು ಗೌಡ, ಸಂಘದನಿರ್ದೇಶಕ ನರಸಿಂಹ ಹೆಗಡೆ,ವೆಂಕಟ್ರಮಣ ಬಡಗಿ, ಹಾಗೂಮತ್ತು ವಿಶ್ವನಾಥ ಮರಾಠಿ, ಗಜಾನನ ಹೆಗಡೆ, ನಾರಾಯಣ ಶಾನಭಾಗ, ಪರಮೇಶ್ವರ ಹೆಗಡೆ, ನಾರಾಯಣ ಹೆಗಡೆ ಹಾಗೂಸಂಘದ ಸಿಬ್ಬಂದಿ ಶುಭ ಕೋರಿದರು.
ಧಾರವಾಡ ಹಾಲು ಒಕ್ಕೂಟದ ವಿಸ್ತರಣಾ ಸಮಾಲೋಚಕ ವಾಸುದೇವ ಭಟ್ ಉಪಸ್ಥಿತರಿದ್ದರು.