Advertisement

ರೈತರಿಗೆ ಹಾಲಿನ ದರ ಸಾಲುತ್ತಿಲ್ಲ

09:49 PM Dec 27, 2019 | Lakshmi GovindaRaj |

ಚಿಕ್ಕಬಳ್ಳಾಪುರ: ದಿನದಿಂದ ದಿನಕ್ಕೆ ಪಶು ಆಹಾರ ಬೆಲೆ ಮಾರುಕಟ್ಟೆಯಲ್ಲಿ ವಿಪರೀತವಾಗಿ ಏರಿಕೆ ಆಗುತ್ತಿರುವ ಪರಿಣಾಮ ಹಾಲು ಒಕ್ಕೂಟದಿಂದ ರೈತರಿಗೆ ನೀಡಲಾಗುತ್ತಿರುವ ದರ ಸಾಲುತ್ತಿಲ್ಲ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಒಕ್ಕೂಟ ಹಾಲಿನ ದರ ಹೆಚ್ಚಿಸಬೇಕಿದೆ ಎಂದು ಕೋಚಿಮುಲ್‌ನ ಚಿಕ್ಕಬಳ್ಳಾಪುರ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ತಿಳಿಸಿದರು.

Advertisement

ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸ್ಥಳೀಯ ಹಾಲು ಒಕ್ಕೂಟದ ಸಹಕಾರ ಸಂಘದ ವತಿಯಿಂದ ನೂತನವಾಗಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆ, ಕುವೆಂಪು ಸಭಾಂಗಣ, ಪಶುಆಹಾರ ಗೋದಾಮು ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಲುತ್ತಿಲ್ಲ: ಒಕ್ಕೂಟದಿಂದ ಸಿಗುವ ಕಡಿಮೆ ದರದಿಂದಾಗಿ ಜಿಲ್ಲೆಯ ಹಾಲು ಉತ್ಪಾದಕರು ಒಕ್ಕೂಟದಿಂದ ದೂರ ಸರಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸದ್ಯ ಒಕ್ಕೂಟದಿಂದ ಇತ್ತೀಚೆಗೆ 2 ರೂ. ಹೆಚ್ಚಳ ಆಗಿದ್ದು, ಹಾಲಿನ ದರ ಪ್ರತಿ ಲೀ.ಗೆ 25 ರೂ. ಹೆಚ್ಚಳ ಆಗಿದೆ. ಸರ್ಕಾರ ನೀಡುವ ಪ್ರೋತ್ಸಾಹ ಧನ ಸೇರಿ ಒಟ್ಟು 30 ರೂ. ಸಿಕ್ಕರೂ ರೈತರಿಗೆ ಯಾವುದೇ ರೀತಿ ಸಾಲುತ್ತಿಲ್ಲ ಎಂದರು.

ಇದಕ್ಕೆ ಸರ್ಕಾರಗಳು ರೈತರಿಗೆ ಪಶು ಆಹಾರವನ್ನು ಕನಿಷ್ಠ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಒದಗಿಸಿದರೆ ತುಂಬ ಅನುಕೂಲವಾಗುತ್ತದೆ ಎಂದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಹೈನೋದ್ಯಮದಿಂದಲೇ ಇಂದು ಉಳಿದಿವೆ. ಇಂತಹ ಸಂದರ್ಭದಲ್ಲಿ ಒಕ್ಕೂಟ ಸೇರಿದಂತೆ ಸರ್ಕಾರ ವಿಭಜಿತ ಜಿಲ್ಲೆಗಳ ಹೈನುಗಾರರಿಗೆ ಹೆಚ್ಚಿನ ಸೌಲಭ್ಯ, ಸೌಕರ್ಯಗಳನ್ನು ಒದಗಿಸಬೇಕಿದೆ ಎಂದರು.

ಕಾಲಮಿತಿಯಲ್ಲಿ ಪೂರ್ಣ: ವರ್ಷದಿಂದ ವರ್ಷಕ್ಕೆ ಪಶುಗಳಿಗೆ ನೀಡುವ ಇಂಡಿ, ಬೂಸ, ಚಕ್ಕೆ, ಫೀಡ್‌ ಬೆಲೆ ಹೆಚ್ಚಾಗುತ್ತಿದೆ. ಇಡೀ ತಾಲೂಕಿಗೆ ಮಾದರಿಯಾಗಿ ನಾಯನಹಳ್ಳಿ ಸಂಘದ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾನೇ ಶಂಕು ಸ್ಥಾಪನೆ ಮಾಡಿ ಕಾಮಗಾರಿಗೆ ಚಾಲನೆ ನೀಡಿ ಕಾಲಮಿತಿಯಲ್ಲಿ ಕಟ್ಟಡಗಳು ಪೂರ್ಣಗೊಂಡಿವೆ ಎಂದು ಹೇಳಿದರು.

Advertisement

ಬಲವರ್ಧನೆ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿ ಪ್ರಧಾನ ವ್ಯವಸ್ಥಾಪಕ ತಿಪ್ಪಾರೆಡ್ಡಿ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೈನೋದ್ಯಮ ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿವೆ. ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸಿದಷ್ಟು ಒಕ್ಕೂಟ ಆರ್ಥಿಕವಾಗಿ ಬಲವರ್ಧನೆಯಾಗಲಿದೆ. ಹಾಲು ಉತ್ಪಾದಕರಿಗೆ ಇನ್ನಷ್ಟು ಸೌಕರ್ಯಗಳನ್ನು ಒದಗಿಸಲು ಇದರಿಂದ ಸಾಧ್ಯವಾಗಲಿದೆ ಎಂದರು.

ಒಕ್ಕೂಟ ಲಾಭಕ್ಕಿಂತ ಉತ್ಪಾದಕರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಇತ್ತೀಚೆಗಷ್ಟೆ ಪ್ರತಿ ಲೀ. ಹಾಲಿನ ಮೇಲೆ 2 ರೂ. ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಕ್ಕೂಟ ರೈತ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಹಾಲು ಉತ್ಪಾದಕರು ಒಕ್ಕೂಟ ಜಾರಿ ಮಾಡಿರುವ ಗುಂಪು ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಎಂಪಿಸಿಎಸ್‌ ಅಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮದ ಕೆನರಾ ಬ್ಯಾಂಕ್‌ ವ್ಯವಸ್ಥಾಪಕಿ ರೂಬಿಕುಮಾರಿ, ಕೋಚಿಮುಲ್‌ ಚಿಕ್ಕಬಳ್ಳಾಪುರದ ಉಪ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಪಾಪೇಗೌಡ, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಸದಾಶಿವ, ರಮೇಶ್‌ ಬಾಬು, ಪಾಪಣ್ಣ, ನಾಯನಹಳ್ಳಿ ಎಂಪಿಸಿಎಸ್‌ ಮಾಜಿ ಅಧ್ಯಕ್ಷ ಪಿ.ನಾರಾಯಣಸ್ವಾಮಿ, ಎಸ್‌.ನಾರಾಯಣಸ್ವಾಮಿ, ಆರ್‌.ಶ್ರೀನಿವಾಸ್‌, ಗ್ರಾಪಂ ಸದಸ್ಯ ನವೀನ್‌ ಕುಮಾರ್‌, ರತ್ನಮ್ಮ ಮುನಿರಾಜು, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ರಾಮಕೃಷ್ಣಪ್ಪ, ವೈ.ವೆಂಕಟೇಶ್‌, ಕೆ.ಮುನಿರಾಜು, ಎಸ್‌.ಮಂಜುನಾಥ, ಮುನಿನಾರಾಯಣಪ್ಪ, ರಾಮರೆಡ್ಡಿ, ಕಾರ್ಯದರ್ಶಿ ಸಿ.ವಿ.ಮೋಹನ್‌ ಉಪಸ್ಥಿತರಿದ್ದರು.

ತಿಂಗಳ ಪೂರ್ತಿ ರೈತರು ಕಷ್ಟಪಟ್ಟು ಡೇರಿಗಳಿಗೆ ಹಾಲು ಹಾಕಿದರೂ ಮುಕ್ಕಾಲು ಪಾಲು ಪಶು ಆಹಾರಕ್ಕೆ ಬರುವ ಬಿಲ್‌ ಪಾವತಿಸಲು ರೈತರಿಂದ ಆಗುತ್ತಿಲ್ಲ. ಸರ್ಕಾರಗಳು ಹೈನೋದ್ಯಮವನ್ನು ಇನ್ನಷ್ಟು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಒಕ್ಕೂಟಗಳಿಗೆ ರಿಯಾಯಿತಿ ದರದಲ್ಲಿ ಪಶು ಆಹಾರ ವಿತರಿಸಬೇಕು.
-ಎನ್‌.ಸಿ.ವೆಂಕಟೇಶ್‌, ನಿರ್ದೇಶಕರು. ಕೋಚಿಮುಲ್‌

Advertisement

Udayavani is now on Telegram. Click here to join our channel and stay updated with the latest news.

Next