ಮಧುಗಿರಿ: ಹಾಲು ಒಕ್ಕೂಟವು ಲಾಭದಲ್ಲಿದ್ದು, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಬರುವ ಫೆ.1 ರಿಂದ ಲೀ.ಹಾಲಿಗೆ 1.50 ರೂ. ಹೆಚ್ಚಿಸಲಾಗುವುದು ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಮಧುಗಿರಿಯ ಕ್ಷೀರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಹಾಗೂ ಮೃತಪಟ್ಟ ಹಾಲು ಉತ್ಪಾದಕರ ಕುಟುಂಬಗಳಿಗೆ ಪರಿಹಾರ ಧನ ವಿತರಿಸಿ ಸಂಸ್ಥೆಯ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂಕಷ್ಟದಿಂದ ಪಾರಾಗಬಹುದು: ಒಕ್ಕೂಟವು ಹಿಂದೆ 28 ಲಕ್ಷ ರೂ.ಲಾಭದಲ್ಲಿತ್ತು. 5 ವರ್ಷದ ಅವಧಿಯಲ್ಲಿ 100 ಕೋಟಿ ರೂ. ಲಾಭದಲ್ಲಿದೆ. ಪ್ರತಿವರ್ಷ 4.5 ಕೋಟಿಯಷ್ಟು ಹಣವನ್ನು ಜಿಲ್ಲೆಯ 72 ಸಾವಿರ ರಾಸುಗಳ ಆರೋಗ್ಯ ವಿಮೆಗೆ ನೀಡ ುತ್ತಿದೆ. ಟಿ.ಬಿ.ಜಯಚಂದ್ರ ಇಲಾಖೆಯ ಸಚಿವರಾದ ಮೇಲೆ ರಾಸುಗಳ ವಿಮೆಗೆ ಅವಕಾಶ ಮಾಡಿಕೊಟ್ಟಿ ದ್ದರು.ಆದರೆ, ಈಗ ಇದನ್ನು ಒಕ್ಕೂಟವೇ ಭರಿಸು ತ್ತಿದೆ. ಪ್ರಸ್ತುತ ರಾಜ್ಯದಲ್ಲೇ ತುಮಕೂರು ಹಾಲು ಒಕ್ಕೂಟ ಗುಣಮಟ್ಟದಲ್ಲಿ ನಂ.2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಹಲವು ಯೋಜನೆ: ಹಾಲು ಉತ್ಪಾದಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ 25 ಸಾವಿರದವರೆಗೂ ಧನಸಹಾಯ, ಮೃತಪಟ್ಟವರ ಕುಟುಂಬಗಳಿಗೆ 10 ಸಾವಿರ, ಎಮ್ಮೆ, ಹಸು, ಎತ್ತುಗಳಿಗೂ 50 ಸಾವಿರ ದವರೆಗೂ ಆರೋಗ್ಯ ವಿಮೆ, ವಿದ್ಯಾವಂತ ಹೆಣ್ಣು ಮಕ್ಕಳಿಗೆ ಜಿಲ್ಲಾ ಕೇಂದ್ರದಲ್ಲಿ ಹಾಸ್ಟೆಲ್ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿದ್ದೇವೆ. ಈಗ ಮೃತಪಟ್ಟ ಉತ್ಪಾದಕರ ಕುಟುಂಬಗಳಿಗೆ ನೀಡುವ 10 ಸಾವಿರವನ್ನು 1 ಲಕ್ಷಕ್ಕೆ ಏರಿಸಿದ್ದು, ತಾಲೂಕಿನ 10,447 ಉತ್ಪಾದಕರ ಪೈಕಿ 4,900 ಮಂದಿಗೆ ಮಾತ್ರ ವಿಮೆ ಮಾಡಿದ್ದಾರೆ. ಇದರಿಂದ ಆಕಸ್ಮಿಕ ಸಾವು ಸಂಭವಿಸುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ನೇರವಾಗಿ ಲೀ.ಗೆ 5 ರೂ.ಗಳನ್ನು ಉತ್ಪಾದಕರ ಖಾತೆಗೆ ಹಾಕುವುದಾಗಿ ಘೋಷಿಸಿದೆ ಎಂದರು.
ಕಾಲುಬಾಯಿ ಲಸಿಕೆ ಹಾಕಿಸಿ: ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗ ಭೂಷಣ್ ಮಾತನಾಡಿ, ಕಾಲುಬಾಯಿ ರೋಗ ಬಂದಾಗ ರೈತರು ರಾಸುಗಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುವುದು ಸರಿಯಲ್ಲ. ಇದರಿಂದ ಹಸುಗಳ ಸಾವು ಸಂಭವಿಸುತ್ತದೆಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.
ಈ ವೇಳೆ ಉತ್ಪಾದಕರ ಮಕ್ಕಳ ಉನ್ನತ ವಿಧ್ಯಾ ಭ್ಯಾಸಕ್ಕೆಂದು 20 ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ಗಳ ಚೆಕ್ ವಿತರಿಸಿದ್ದು, ಮೃತಪಟ್ಟ 10 ಹಾಲು ಉತ್ಪಾದಕರ ಕುಟುಂಬಗಳಿಗೆ ತಲಾ 10 ಸಾವಿರದ ಚೆಕ್ ವಿತರಿಸಲಾಯಿತು. ತುಮುಲ್ ತಾಲೂಕು ವಿಸ್ತರಣಾಧಿಕಾರಿಗಳಾದ ಗಿರೀಶ್, ಶಂಕರನಾಗ್, ದಿಲೀಪ್, ವೈದ್ಯರಾದ ಡಾ.ದೀಕ್ಷೀತ್, ಎಲ್ಲ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಜರಿದ್ದರು.