ಲಿಂಗಸುಗೂರು: ತಾಲೂಕಿನ ಯರಡೋಣಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯ ಸುಮಾರು 50 ಕೆಜಿ ಹಾಲಿನ ಪುಡಿಯನ್ನು ಅಡುಗೆ ಸಿಬ್ಬಂದಿಯೇ ಗುಂಡಿ ತೋಡಿ ಮುಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಗೆ ಪೂರೈಕೆಯಾದ 50 ಕೆಜಿ ಹಾಲಿನ ಪುಡಿ ಪಾಕೆಟ್‌ಗಳನ್ನು ಅಡುಗೆ ಸಿಬ್ಬಂದಿ ಐದು ತಿಂಗಳ ಹಿಂದೆಯೇ ಬಿಸಿಯೂಟ ಅಡುಗೆ ಕೊಠಡಿಯ ಹಿಂಬದಿಯಲ್ಲಿ ಗುಂಡಿ ತೋಡಿ ಅರೆಬರೆ ಮಣ್ಣು ಹಾಕಿ ಮುಚ್ಚಿದ್ದಾರೆ. ಅಲ್ಲಿ ದಿನವೂ ನೀರು ಸಂಗ್ರಹವಾಗುತ್ತಿದ್ದರಿಂದ ಹಾಲಿನ ಪುಡಿ ಕೆಟ್ಟು ದುರ್ನಾತ ಬೀರಲು ಆರಂಭವಾಗಿದೆ. ದುರ್ನಾತ ಹೆಚ್ಚಿದ್ದರಿಂದ ಸಿಬ್ಬಂದಿ ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ನಿರೂಪಿಸಲು ತಗ್ಗಲ್ಲಿ ಮುಚ್ಚಿದ್ದ ಹಾಲಿನಪುಡಿ ಪಾಕೆಟ್‌ಗಳನ್ನು ತೆಗೆದು ಬೇರೆಡೆ ಸಾಗಿಸಲು ಮುಂದಾದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಿಸಿಯೂಟಕ್ಕೆ ಎಷ್ಟು ದಾಸ್ತಾನು ಶಾಲೆಗೆ ಪೂರೈಕೆ ಆಗುತ್ತಿದೆ, ಎಷ್ಟು ಬಳಕೆಯಾಗಿದೆ ಎಂಬುದರ ಮಾಹಿತಿ ಮುಖ್ಯ ಶಿಕ್ಷಕರಿಗೆ ಇರಬೇಕು. ಆದರೆ ಈ ಶಾಲೆಯ ಮುಖ್ಯ ಶಿಕ್ಷಕರಿಗೆ ದಾಸ್ತಾನು ಬಗ್ಗೆ ಕನಿಷ್ಠ ಮಾಹಿತಿ ಇಲ್ಲದಾಗಿದೆ. ಅವರ ನಿರ್ಲಕ್ಷéದಿಂದಲೇ ಹಾಲಿನಪುಡಿ ಪಾಕೆಟ್ ಮಣ್ಣು ಸೇರಿವೆ. ಇದಲ್ಲದೆ ಹಾಲಿನಪುಡಿ ಪಾಕೆಟ್‌ಗಳನ್ನು ತೆಗೆಯಲು ಅಗೆಯಲಾದ ಗುಂಡಿ ಮುಚ್ಚಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಾಲಿನಪುಡಿ ಪಾಕೆಟ್‌ಗಳನ್ನು ಮಣ್ಣಲ್ಲಿ ತಾವೇ ಮುಚ್ಚಿದ್ದಾಗಿ ಅಡುಗೆ ಸಿಬ್ಬಂದಿ ತಪ್ಪು ಒಪ್ಪಿಕೊಂಡಿದ್ದಾರೆ. ಪಾಕೆಟ್‌ಗಳ ಮೇಲೆ ನೀರು ಬಿದ್ದು ಗಟ್ಟಿಯಾಗಿದ್ದವು. ಇದನ್ನು ಮಕ್ಕಳಿಗೆ ಕುಡಿಸಬಾರದು ಎಂದು ಮಣ್ಣಲ್ಲಿ ಮುಚ್ಚಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಯರಡೋಣಾ ಶಾಲೆಯಲ್ಲಿ ಕ್ಷೀರಭಾಗ್ಯದ ಹಾಲಿನಪುಡಿ ಪಾಕೆಟ್‌ಗಳನ್ನು ಮಣ್ಣಲ್ಲಿ ಮುಚ್ಚಿದ್ದು ಅಪರಾಧ. ಈ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ಚಂದ್ರಶೇಖರ ಕುಂಬಾರ, ಸಹಾಯಕ ನಿರ್ದೇಶಕ, ಅಕ್ಷರದಾಸೋಹ ಯೋಜನೆ ಲಿಂಗಸುಗೂರು