ಬೆಂಗಳೂರು: “ಕೇಂದ್ರ ಸರ್ಕಾರ ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರೆ ದೇಶದ ರೈತರಿಗೆ ವಿಷವುಣಿಸಿದಂತೆ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಇಸಿಪಿ) ಅಡಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದು ಇದರಿಂದ ದೇಶದ ಹೈನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಭಾರತದ ಗ್ರಾಮೀಣ ಆರ್ಥಿಕತೆಯ ಮೇಲೆ ಗುಂಡೇಟು ಹೊಡೆದಂತಾಗುತ್ತದೆ ಎಂದು ಹೇಳಿದರು.
ಆರ್‌ಇಸಿಪಿ ಒಪ್ಪಂದದ ಮೂಲಕ ಭಾರತ ನ್ಯೂಜಿಲ್ಯಾಂಡ್‌ನಿಂದ ಹಾಲು ಆಮದು ಮಾಡಿಕೊಳ್ಳಲು ಮುಂದಾದರೆ ಸುಮಾರು 10 ಕೋಟಿ ಜನರ ಉದ್ಯೋಗವನ್ನು ಕಸಿದುಕೊಂಡಂತಾಗುತ್ತದೆ. ಭಾರತದಲ್ಲಿ ಶೇ.49 ರಷ್ಟು ಜನರು ಕೃಷಿ ಸಂಬಂಧಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಹೈನುಗಾರಿಕೆ ಶೇ.70 ರೈತರು, ಕೂಲಿ ಕಾರ್ಮಿಕರ ಆದಾಯದ ಮೂಲವಾಗಿದೆ. ಕೇಂದ್ರ. ಸರ್ಕಾರ 2022ಕ್ಕೆ ಕೃಷಿಕರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದೆ.
ಆದರೆ, ವಿದೇಶದಿಂದ ಹಾಲು ಆಮದು ಮಾಡಿಕೊಂಡರೆ ಅವರ ಆದಾಯ ಈಗಿರುವುದಕ್ಕಿಂತಲೂ ಅರ್ಧಕ್ಕೆ ಇಳಿಯುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿಗೆ ಪತ್ರ ಬರೆದಿದ್ದೇವೆ ಎಂದು ಹೇಳುತ್ತಾರೆ. ಇದು ಕೇವಲ ಪತ್ರದಿಂದ ಮುಕ್ತಾಯವಾಗುವುದಿಲ್ಲ. ರಾಜ್ಯದ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಸಿಎಂ ಸಂಸದರ ನಿಯೋಗ ತೆಗೆದುಕೊಂಡು ಹೋಗುತ್ತೇನೆಂದು ಹೇಳುತ್ತಿದ್ದಾರೆ.
ಅಷ್ಟರಲ್ಲಿ ಒಪ್ಪಂದ ಮಾಡಿಕೊಂಡು ಮುಕ್ತಾಯವಾಗುತ್ತದೆ. ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರ ಬಳಿ ಎಂಪಿಗಳ ನಿಯೋಗ ಕರೆದುದುಕೊಂಡು ಹೋಗುವ ಬದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಹೋಗಬೇಕು. ಅವರ ಮನವೊಲಿಸುವ ಪ್ರಯತ್ನ ಮಾಡಬೇಕು. ಅಡಿಕೆ ಆಮದು ಮಾಡಿಕೊಳ್ಳುವುದರಿಂದಲೂ ಅಡಿಕೆ ಬೆಳೆಗಾರರಿಗೂ ನಷ್ಟವಾಗುತ್ತದೆ. ಅದನ್ನೂ ಪ್ರಧಾನಿ ಗಮನಕ್ಕೆ ತರಬೇಕು ಎಂದು ಹೇಳಿದರು.