Advertisement

250 ಅಭ್ಯರ್ಥಿಗಳಿಗೆ ಸೇನಾ ತರಬೇತಿ; 225 ಬಾಲಕ-25 ಬಾಲಕಿಯರು ಆಯ್ಕೆ

05:46 PM Aug 13, 2021 | Team Udayavani |

ಬೀದರ: ಗ್ಲೊಬಲ್‌ ಸೈನಿಕ ಅಕಾಡೆಮಿ ವತಿಯಿಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಕಲ್ಯಾಣ
ಕರ್ನಾಟಕದ 7 ಜಿಲ್ಲೆಗಳ ಅಭ್ಯರ್ಥಿಗಳಿಗೆ ಆ.15ರಿಂದ ಮೂರು ತಿಂಗಳ ಕಾಲ ಸಶಸ್ತ್ರ ಪಡೆಗಳು ಹಾಗೂ ಅರೆಸೇನಾ ಪಡೆಗಳ ಪೂರ್ವ ಸಿದ್ಧತಾ ತರಬೇತಿ ಹಮ್ಮಿಕೊಂಡಿದೆ.

Advertisement

ನಗರದ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿ ಇರುವ ಅಕಾಡೆಮಿಯಲ್ಲಿ ಈ ತರಬೇತಿ ನಡೆಯಲಿದ್ದು, ಬೀದರ ಸೇರಿದಂತೆ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸೇನೆಗೆ ಭರ್ತಿಯಾಗ ಬಯಸುವ ಎಸ್ಸೆಸ್ಸೆಲ್ಸಿಯಿಂದ ಪದವಿವರೆಗಿನ 18ರಿಂದ 23 ವರ್ಷದ ಒಳಗಿನ 250 ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಊಟ, ವಸತಿ ಸಹಿತ ಮೂರು ತಿಂಗಳ ತರಬೇತಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಕರ್ನಲ್‌ ಶರಣಪ್ಪ ಸಿಕೇನಪುರೆ ಹಾಗೂ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ನಗರದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತರಬೇತಿಗಾಗಿ 1,200 ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 225 ಬಾಲಕರು ಹಾಗೂ 25 ಬಾಲಕಿಯರು ಸೇರಿ 250 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೆ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿ, ವ್ಯಕ್ತಿತ್ವ ವಿಕಸನ, ಸ್ಫೋಕನ್‌ ಇಂಗ್ಲಿಷ್‌, ಅಂತಾರಾಷ್ಟ್ರೀಯ ಸಂಬಂಧಗಳು ಸೇರಿದಂತೆ ಸೇನೆ ಭರ್ತಿಗೆ ಅಗತ್ಯ ಇರುವ ಎಲ್ಲ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಬಹುತೇಕ ಪಾಲಕರು ತಮ್ಮ ಮಕ್ಕಳು ವೈದ್ಯ ಇಲ್ಲವೇ ಎಂಜಿನಿಯರ್‌ ಆಗಬೇಕು ಎಂದು ಬಯಸುತ್ತಾರೆ. ಆದರೆ, ಸೇನೆಯಲ್ಲೂ ಬಹಳಷ್ಟು ಉದ್ಯೋಗ ಅವಕಾಶಗಳ ಇರುವ ಬಗ್ಗೆ ಹೆಚ್ಚಿನ ಜನರಿಗೆ ತಿಳಿವಳಿಕೆ ಇಲ್ಲ. ಸೇನೆಯಲ್ಲಿ ಆಕರ್ಷಕ ಸಂಬಳ, ಪಿಂಚಣಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳು ಇವೆ. ದೇಶ ಸೇವೆಗೆ ಒಳ್ಳೆಯ ಅವಕಾಶವಾಗಿದೆ ಎಂದು ತಿಳಿಸಿದರು.

ಈ ಭಾಗದ ಅಭ್ಯರ್ಥಿಗಳನ್ನು ಸೇನಾ ಭರ್ತಿಗೆ ಅಣಿಗೊಳಿಸುವುದು ತರಬೇತಿಯ ಉದ್ದೇಶವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಭಾಗದ ಐದಾರು ಸಾವಿರ ಅಭ್ಯರ್ಥಿಗಳು ಸೇನೆಗೆ ಸೇರುವ ದಿಸೆಯಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಸಂಘದ ವತಿಯಿಂದ ಈಗಾಗಲೇ ಕಲಬುರ್ಗಿಯಲ್ಲಿ ಐಎಎಸ್‌, ಐಪಿಎಸ್‌, ಕೆಎಎಸ್‌, ಬ್ಯಾಂಕಿಂಗ್‌ ಸೇವೆಗಳಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಈ ಭಾಗದಲ್ಲಿ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಕಲೆ, ಸಂಸ್ಕೃತಿಗೆ ಉತ್ತೇಜನ ಹಾಗೂ ಯುವ ಸಬಲೀಕರಣಕ್ಕಾಗಿ ನಿರಂತರ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಂಘದ ಜಿಲ್ಲಾ ಸಂಯೋಜಕ ರೇವಣಸಿದ್ದ ಜಾಡರ, ತಾಲೂಕು ಸಂಯೋಜಕ ಗಣಪತಿ ಹಡಪದ ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

15ರಂದು ತರಬೇತಿಗೆ ಚವ್ಹಾಣ ಚಾಲನೆ
ಗ್ಲೊಬಲ್‌ ಸೈನಿಕ ಅಕಾಡೆಮಿಯಲ್ಲಿ ಆ.15ರಂದು ಬೆಳಿಗ್ಗೆ 11:45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸಶಸ್ತ್ರ ಪಡೆಗಳು ಹಾಗೂ ಅರೆಸೇನಾ ಪಡೆಗಳ ಪೂರ್ವ ಸಿದ್ಧತಾ ತರಬೇತಿ ಚಾಲನೆ ನೀಡಲಿದ್ದಾರೆ. ಬೀದರ ವಾಯುಪಡೆ ತರಬೇತಿ ಕೇಂದ್ರದ ಏರ್‌ ಕಮಾಡೋರ್‌ ಸಮೀರ್‌ ಸೋಂ , ಚೀಫ್‌ ಆಪರೇಟಿಂಗ್‌ ಆಫೀಸರ್‌ ಅಜೀತ್‌ ಕುಲಕರ್ಣಿ, ಡಿಸಿ ರಾಮಚಂದ್ರನ್‌ ಆರ್‌. ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ.
*ಕರ್ನಲ್‌ ಶರಣಪ್ಪ ಸಿಕೇನಪುರೆ

Advertisement

Udayavani is now on Telegram. Click here to join our channel and stay updated with the latest news.

Next