Advertisement
ಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಪ್ರತೀ ವರ್ಷ ರಾಜ್ಯದ ವಿವಿಧೆಡೆ ನೇಮಕಾತಿ ರ್ಯಾಲಿ ನಡೆಯುತ್ತದೆ. ಈ ವರ್ಷ ಮೇ 12ರಿಂದ ವಿಜಯಪುರದಲ್ಲಿ ರ್ಯಾಲಿ ನಡೆಯಲಿದೆ. ಮಾ. 12ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಎ. 25ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.ಸಾಮಾನ್ಯ ಸೈನಿಕ, ಸೈನಿಕ ಟ್ರೇಡ್ಸ್‌ಮೆನ್ (ಎಸೆಸ್ಸೆಲ್ಸಿ ಉತ್ತೀರ್ಣರಾಗಿರುವವರು), ತಾಂತ್ರಿಕ ಸೈನಿಕ (ದ್ವಿತೀಯ ಪಿಯುಸಿ ಪಿಸಿಎಂ), ನರ್ಸಿಂಗ್ ಸಹಾಯಕ (ದ್ವಿತೀಯ ಪಿಯುಸಿ ಪಿಸಿಬಿ) ಹಾಗೂ ಸೈನಿಕ ಗುಮಾಸ್ತ (ದ್ವಿತೀಯ ಪಿಯುಸಿ ಇಂಗ್ಲಿಷ್, ಅಕೌಂಟ್ಸ್/ಗಣಿತ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ಸೈನಿಕ (21 ವರ್ಷ) ಹಾಗೂ ಉಳಿದ ಹುದ್ದೆಗಳಿಗೆ 23 ವರ್ಷದೊಳಗಿನ ಪುರುಷರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ.
Related Articles
Advertisement
ಸೌಲಭ್ಯಗಳು: ಸೇನೆಗೆ ಆಯ್ಕೆಯಾದವರಿಗೆ ಮಾಸಿಕ ಸುಮಾರು 25,000 ರೂ. ವೇತನ ನೀಡಲಾಗುವುದು. ಅಲ್ಲದೇ, ಉಚಿತ ಸಮವಸ್ತ್ರ, ಆಹಾರ, ವಸತಿ, ವೈದ್ಯಕೀಯ ಸೌಲಭ್ಯ, ಉಚಿತ ರೈಲು ಪ್ರಯಾಣ ಹಾಗೂ ಕ್ಯಾಂಟೀನ್ ಸೌಲಭ್ಯ ದೊರಕಲಿದೆ. ಪ್ರತೀ ವರ್ಷ 90 ದಿನಗಳ ರಜಾ ಸೌಲಭ್ಯವೂ ದೊರಕಲಿದೆ.
ಸೈನಿಕರು ಸರಾಸರಿ 15-17 ವರ್ಷ ಮಾತ್ರ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅನಂತರ ಸೇನೆಯಿಂದ ನಿವೃತ್ತನಾಗಿ ಜೀವನದ ಉಳಿದ ಅವಧಿಯುದ್ದಕ್ಕೂ ಪಿಂಚಣಿ ದೊರಕಲಿದೆ. ತಂದೆ, ತಾಯಿ, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ದೊರಕಲಿದೆ. ಕರ್ನಾಟಕ ರಾಜ್ಯ ಸರಕಾರಿ ನೇಮಕಾತಿಗಳಲ್ಲಿ ನಿವೃತ್ತ ಸೈನಿಕರಿಗೆ ಶೇ. 10ರಷ್ಟು ಮೀಸಲಾತಿ ಇದೆ. ದೇಶಾದ್ಯಂತ ಸಂಚರಿಸುವ ವಿಮಾನಯಾನ ಟಿಕೆಟ್‌ಗಳಲ್ಲಿ ರಿಯಾಯಿತಿ ದೊರಕಲಿದೆ.
ಕರಾವಳಿಯಿಂದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಈ ವರ್ಷ ಉತ್ತಮ ಸ್ಪಂದನೆ ಕಂಡು ಬಂದಿದೆ. ಅರ್ಜಿ ಸಲ್ಲಿಸಲು ಇನ್ನೂ ಹತ್ತು ದಿನಗಳಿರುವುದರಿಂದ ಇನ್ನಷ್ಟು ಆಕಾಂಕ್ಷಿಗಳು ಬರಬಹುದು ಎಂಬ ವಿಶ್ವಾಸ ಸೇನಾ ನೇಮಕಾಧಿಕಾರಿ ಪ್ರಶಾಂತ್ ಪೇಟ್ಕರ್ ಅವರಿಗೆ ಇದೆ.
ಪ್ರಸಕ್ತ ವರ್ಷ ಮಂಗಳೂರು ಕೂಳೂರಿನಲ್ಲಿರುವ ಸೇನಾ ನೇಮಕಾತಿ ಕೇಂದ್ರ ಜಿಲ್ಲಾಡಳಿತದ ಸಹಯೋಗದಲ್ಲಿ ಸೇನಾ ನೇಮಕಾತಿ ರ್ಯಾಲಿ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿತ್ತು. ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ, ಮಾಧ್ಯಮಗಳ ಮೂಲಕ ನೇಮಕಾತಿಯ ಪ್ರಚಾರ ನಡೆಸಿತ್ತು. ಉಡುಪಿ ಜಿಲ್ಲಾಡಳಿತ ಪ್ರಚಾರದ ಜೊತೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಉಚಿತ ತರಬೇತಿ ಆಯೋಜಿಸಿದೆ ಎಂದು ಪ್ರಕಟನೆ ತಿಳಿಸಿದೆ.