ಬಫಾರಿಕ್: ಕಳೆದ ತಿಂಗಳಷ್ಟೇ, ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿ 49 ಮಂದಿ ದಾರುಣ ಸಾವನ್ನಪ್ಪಿದ ಘಟನೆ ಮನಸ್ಸಿನಿಂದ ಮಾಸುವ ಮುನ್ನವೇ, ಉತ್ತರ ಆಫ್ರಿಕಾದ ರಾಷ್ಟ್ರವಾದ ಅಲ್ಜೀರಿಯಾದಲ್ಲಿ ಅದಕ್ಕಿಂತಲೂ ಭೀಕರ ವಿಮಾನ ದುರಂತವೊಂದು ನಡೆದಿದೆ.
ಅಲ್ಜೀರಿಯಾದ ಸೈನಿಕರು, ಅವರ ಕುಟುಂಬ ಸದಸ್ಯರು, ಸೇನಾ ಸಿಬ್ಬಂದಿ ಹಾಗೂ ವೆಸ್ಟರ್ನ್ ಸಹಾರಾದ ಕೆಲವು ಸ್ವಾÌತಂತ್ರ ಹೋರಾಟಗಾರರನ್ನು ಹೊತ್ತೂಯ್ಯುತ್ತಿದ್ದ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಧರೆಗುರುಳಿದ್ದು, ಅದರಲ್ಲಿದ್ದ ಎಲ್ಲಾ 257 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಾದ ಅಗ್ನಿ ಆಕಸ್ಮಿಕವೇ ಅಪಘಾತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ. ನಿಖರ ಕಾರಣ ಪತ್ತೆಗಾಗಿ ತನಿಖೆಗೆ ಆದೇಶಿಸಲಾಗಿದೆ.
ಎಲ್ಲಾಯ್ತು ಪತನ?: ಇಲ್ಯೂಷಿನ್ 2-76 ಎಂಬ ರಷ್ಯಾ ನಿರ್ಮಿತ ಈ ವಿಮಾನ, ರಾಜಧಾನಿ ಅಲ್ಜೀರ್ಸ್‌ನಿಂದ ನೈರುತ್ಯ ದಿಕ್ಕಿಗೆ ಸುಮಾರು 30 ಕಿ.ಮೀ. ದೂರದಲ್ಲಿರುವ ಬಫಾರಿಕ್‌ನಿಂದ ಅದೇ ಪ್ರಾಂತ್ಯದಲ್ಲಿರುವ ಬೆಚಾರ್‌ನಲ್ಲಿರುವ ಸೇನಾ ನೆಲೆಗೆ ತೆರಳಬೇಕಿತ್ತು. ಆದರೆ, ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ನಿಲ್ದಾಣದಾಚೆಗಿನ ವಿಶಾಲವಾದ ನಿರ್ಜನ ಕೃಷಿ ಭೂಮಿಯೊಂದರ ಮೇಲೆ ಪತನಗೊಂಡಿತು ಎಂದು ಅಸೋಸಿಯೇಟೆಡ್ ಪ್ರಸ್ ವರದಿ ಮಾಡಿದೆ. ಸುದ್ದಿ ತಿಳಿಯುತ್ತಲೇ, 14 ಆ್ಯಂಬುಲೆನ್ಸ್‌ಗಳು ಸೇರಿದಂತೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದವಾದರೂ, ಅಷ್ಟರಲ್ಲಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರೆಂದು ಅಲ್ಜೀರಿಯಾ ಸರಕಾರ ತಿಳಿಸಿದೆ.
ಸ್ವಾತಂತ್ರ್ಯ ಹೋರಾಟಗಾರರ ಮರಣ: ಅಲ್ಜೀರಿಯಾದ ಪಕ್ಕದ ಲ್ಲಿರುವ ವೆಸ್ಟರ್ನ್ ಸಹಾರಾ ಪ್ರಾಂತ್ಯವನ್ನು ಮೊರೊಕ್ಕೊ ರಾಷ್ಟ್ರವು ಆಕ್ರಮಿಸಿಕೊಂಡಿರುವ ಹಿನ್ನೆಲೆಯಲ್ಲಿ, ಅಲ್ಲಿಂದ ಚದುರಿದ ಹಲವಾರು ಪ್ರಜೆಗಳಿಗೆ ಅಲ್ಜೀರಿಯಾ ದೇಶ ಆಶ್ರಯ ಕೊಟ್ಟಿದೆ. ಇವರೆಲ್ಲರೂ ಪೊಲಿಸಾರಿಯೋ ಫ್ರಂಟ್ ಎಂಬ ಸಂಘಟನೆ ಕಟ್ಟಿ ಕೊಂಡು ಅಲ್ಜೀರಿಯಾ ಸರಕಾರದ ನೆರವಿನಿಂದ, ವೆಸ್ಟರ್ನ್ ಸಹಾ ರಾದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಹಾಗಾಗಿ, ಇವರಲ್ಲಿ ಕೆಲವರು ಪತನಗೊಂಡ ವಿಮಾನದಲ್ಲಿ ಪ್ರಯಾಣಿಸಿದ್ದರು.
ದುರ್ಘಟನೆಗಳ ಸರಮಾಲೆ
2003: ಏರ್ ಅಲ್ಜೀರ್ಸ್ ವಿಮಾನವೊಂದು ಟೇಕಾಫ್ ವೇಳೆ ಪತನ; 103 ಸಾವು.
2012: ಗಗನದಲ್ಲಿ ತರಬೇತಿ ನಿರತರಾಗಿದ್ದ ಎರಡು ಸೇನಾ ವಿಮಾನಗಳು ಡಿಕ್ಕಿ; 2 ಪೈಲಟ್‌ಗಳ ಸಾವು.
2014: ಅರ್ಜೀರಿಯಾ ದಕ್ಷಿಣ ಭಾಗದಲ್ಲಿ ಸೇನಾ ವಿಮಾನ ಅಪಘಾತ; 77 ಸೈನಿಕರ ಬಲಿ
2014: ಏರ್ ಅಲ್ಜೀರಿ ವಿಮಾನ ಪತನ; 54 ಫ್ರಾನ್ಸ್ ನಾಗರಿಕರು ಸೇರಿ, 116 ಮಂದಿ ದುರ್ಮರಣ.
ಮತ್ತೆರಡು ವಿಮಾನ ಅಪಘಾತ
ಬುಧವಾರ ವಿವಿಧೆಡೆ, ವಿಮಾನ ಅಪಘಾತಗಳು ಸಂಭವಿಸಿದ್ದು ಒಟ್ಟು 7 ಜನರು ಮೃತಪಟ್ಟಿದ್ದಾರೆ. ಅಮೆರಿಕದ ಅರಿಜೋನಾ ಗಾಲ್ಫ್ ಮೈದಾನದ ಮೇಲೆ ಪತನಗೊಂಡ ವಿಮಾನವೊಂದು ಆರು ಮಂದಿಯನ್ನು ಬಲಿಪಡೆದಿದ್ದರೆ, ಮ್ಯಾನ್ಮಾರ್‌ನ ಸೇನಾ ಜೆಟ್ ವಿಮಾನವೊಂದು ಹಾರಾಟದ ವೇಳೆ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಕೆಳಗುರುಳಿ, ಅದರಲ್ಲಿದ್ದ ಪೈಲಟ್ ಮೃತಪಟ್ಟಿದ್ದಾನೆ.