Advertisement

ಈತ ಸೈನಿಕರ ಆಪದ್ಬಾಂಧವ ! 

09:33 AM Feb 07, 2018 | Team Udayavani |

ಸೇನೆ ಎಂದರೆ ಸೈನಿಕರಿಗೆ ಸೂಕ್ತ ಬೆಂಗಾವಲು, ಶುಶ್ರೂಷೆಯ ತಂಡವೂ ಬೇಕು. ವೀರ ಸೈನಿಕರಿಗೆ ಅಪಾಯವಾದಲ್ಲಿ ಕೂಡಲೇ ನೆರವಿಗೆ ಧಾವಿಸುವುದು ಶುಶ್ರೂಷಾ ತಂಡ. ಇವರು ಯಾವುದೇ ರಕ್ಷಣಾ ಕೆಲಸಕ್ಕೂ ಸೈ. ಇಂತಹ ಆಪದ್ಬಾಂಧವ ತಂಡದ ಕಟ್ಟಾಳು ಇವರು. 

Advertisement

ಸುರತ್ಕಲ್‌ : ಅದು ಕಾರ್ಗಿಲ್‌ ಯುದ್ಧದ ಸಮಯ. ಇಡೀ ಭಾರತದಲ್ಲಿ ದೇಶಭಕ್ತಿಯ ಸಂಚಾರ. ವೈರಿ ಸೇನೆಯ ಹೆಡೆಮುರಿ ಕಟ್ಟಬೇಕೆಂಬ ತವಕ. ಇದೇ ವೇಳೆ ಸೇನೆಗೆ ಸೇರಬೇಕೆಂದು ನಿರಂತರ ಕನಸು ಕಂಡು ಅದನ್ನು ನನಸು ಮಾಡಿದವರು ಸುರತ್ಕಲ್‌ ಕುಳಾಯಿ ಸಮೀಪದ ನಾಯಕ್‌ ಪದ್ಮನಾಭ ಆರ್‌.ಕೆ. 


ಕುಟುಂಬ ಸದಸ್ಯರ ಜತೆ ಪದ್ಮನಾಭ 

ಬರ್ಕೆ ಹೌಸ್‌ನ ರಾಮಣ್ಣ ಮೂಲ್ಯ ಅವರ ಏಳು ಜನ ಮಕ್ಕಳಲ್ಲಿ ಓರ್ವರಾಗಿ ಸೇನೆಗೆ ಸೇರಿದ ಪದ್ಮನಾಭ ಅವರು 1997ರಲ್ಲಿ ಸುರತ್ಕಲ್‌ ಗೋವಿಂದದಾಸ ಕಾಲೇಜಿನಲ್ಲಿ ವಿಜ್ಞಾನ ಪದವಿ ಮುಗಿಸಿದ್ದರು. ಬಳಿಕ ಎಂಆರ್‌ಪಿಎಲ್‌ನಲ್ಲಿ ಸಣ್ಣ ಕೆಲಸಕ್ಕೆ ಸೇರಿದ್ದರೂ ಸೇನೆ ಸೇರುವ ಆಕಾಂಕ್ಷೆ ತೀವ್ರವಾಗಿತ್ತು. 1999ರಲ್ಲಿ ಮಂಗಳೂರಲ್ಲಿ ಸೇನಾ ನೇಮಕಾತಿ ರ್ಯಾಲಿ ಸಂದರ್ಭ ಹಾಜರಾದರೂ ಭಾರ ಕಡಿಮೆ ಎಂಬ ಕಾರಣಕ್ಕೆ ಆಯ್ಕೆಯಾಗಲಿಲ್ಲ. ಛಲ ಬಿಡದೆ 6 ತಿಂಗಳಲ್ಲಿ ಬರೋಬ್ಬರಿ ಐದು ಕೆ.ಜಿ. ಭಾರ ಹೆಚ್ಚಿಸಿ 2000ರಲ್ಲಿ ಮತ್ತೆ ರ‍್ಯಾಲಿಯಲ್ಲಿ ಭಾಗಿಯಾಗಿ ಆಯ್ಕೆಯಾದರು. 

ಸೈನಿಕರಿಗೆ ಶುಶ್ರೂಷೆ ಕಾರ್ಯ 
ತರಬೇತಿ ಬಳಿಕ ಮೊದಲ ಪೋಸ್ಟಿಂಗ್‌ ಆಗಿದ್ದು, ಗಾಯಾಳು ಸೈನಿಕರಿಗೆ ಶುಶ್ರೂಷೆ ನೀಡುವ ಹಿಮಾಚಲ ಪ್ರದೇಶದ ಮಿಲಿಟರಿ ಮೈದಾನ ಆಸ್ಪತ್ರೆ ಫೀಲ್ಡ್ ಮೆಡಿಕಲ್‌ ಕೋರ್‌)ಗೆ. 2001ರ ಸಂಸತ್‌ ಭವನಕ್ಕೆ ಉಗ್ರರ ದಾಳಿಯ ಆ ಸಂದರ್ಭ ಸೈನಿಕರಿಗೆ ಬೆಂಗಾವಲಾಗಿ ಗಾಯಾಳು ಸೈನಿಕರ ಸೇವೆಗೆ ನಿಂತರು. ಹಾಗೆಯೇ ಅಸ್ಸಾಂ ಮತ್ತಿತರ ಕಡೆ ಸೇವೆ ಸಲ್ಲಿಸಿದರು.

ಸರ್ಜಿಕಲ್‌ ಸ್ಟ್ರೈಕ್ ನ ನೆನಪು
2017ರಲ್ಲಿ ಪಾಕಿಸ್ಥಾನಿ ಉಗ್ರರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್ ನಡೆಸುವ ಕುರಿತಂತೆ ಸೇನೆ ಯೋಜನೆಯನ್ನು ರಹಸ್ಯವಾಗಿ ರೂಪಿಸಿತ್ತು. ಸೈನಿಕರು ಸೇರಿದಂತೆ ಪದ್ಮನಾಭ ಅವರಿಗೆ ನೀಡಿದ್ದ ರಜೆಯನ್ನೂ ಹಿಂದೆಗೆದುಕೊಳ್ಳಲಾಗಿತ್ತು. ಅವರಿದ್ದ ಚಿಕಿತ್ಸಾವಾಹಿನಿಯನ್ನು ಜಾಗೃತ ಸ್ಥಿತಿಯಲ್ಲಿರಿಸಿ ಗಡಿ ಸಮೀಪ ರವಾನಿಸಲಾಗಿತ್ತು. ಆಗಲೇ ದೊಡ್ಡ ವ್ಯೂಹವೊಂದು
ತಯಾರಾಗಿದೆ ಎಂದು ತಿಳಿದು ಬಂದಿದ್ದು!

Advertisement

ಹಿಮದಲ್ಲಿ ಹೂತವರನ್ನು ಮೇಲೆತ್ತಿದ ಕಥೆ
2017ರ ಮಾರ್ಚ್‌ನಲ್ಲಿ ಲಡಾಕ್‌ನಲ್ಲಿ ಒಂದೇ ಸಮನೆ ಹಿಮ ಸುರಿಯುತ್ತಿತ್ತು. ಗಡಿ ಭಾಗ ಕಾಯುತ್ತಿದ್ದ 21ನೇ ಮದ್ರಾಸ್‌
ರೆಜಿಮೆಂಟಿನ ಯೋಧರು ಹಿಮಕುಸಿತಕ್ಕೆ ಸಿಲುಕಿ 10 ಅಡಿ ಆಳದ ಹಿಮರಾಶಿಯಲ್ಲಿ ಹೂತು ಹೋಗಿದ್ದರು. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹಿತ ಮೇಲೆತ್ತುವ ಕಾರ್ಯಕ್ಕೆ ಪದ್ಮನಾಭರಿದ್ದ ತಂಡ ಕಳಿಸಲಾಗಿತ್ತು. ಪ್ರಕೃತಿಯ ತೀವ್ರ ಸವಾಲಿನ ಮಧ್ಯೆ ನಾಪತ್ತೆಯಾದ ಸೈನಿಕರಿಗೆ ಹುಡುಕಾಟ, ಗಾಯಾಳುಗಳಿಗೆ ಚಿಕಿತ್ಸೆಗೆ ತಂಡ ಶ್ರಮಿಸಿತ್ತು. ಈ ವೇಳೆ ಪದ್ಮನಾಭ ಅವರಿಗೂ ಆರೋಗ್ಯ ಏರುಪೇರಾಗಿತ್ತು. ಆಗ ಪತ್ನಿ ಮಲ್ಲಿಕಾ ಗರ್ಭಿಣಿಯಾಗಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. 

ಜೀವ ಲೆಕ್ಕಿಸದೇ ಸೈನಿಕರಿಗೆ ನೆರವು
2005-06ರ ಸಂದರ್ಭ ಮಿಜೋರಾಂನಲ್ಲಿ ನಾಗಾ ಮತ್ತು ಕುಕಿ ಉಗ್ರ ಸಂಘಟನೆಗಳ ನಡುವೆ ಭಾರೀ ಕದನ ಏರ್ಪಟ್ಟಿತ್ತು. ರಾ.ಹೆ. 53ರನ್ನು ಉಗ್ರರು ವಶಕ್ಕೆ ಪಡೆದಿದ್ದರು. ಉಗ್ರರನ್ನು ನಿಯಂತ್ರಿಸಲು ಸೇನೆ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಉಗ್ರರು ಸೈನಿಕರ ವಿರುದ್ಧ ನೆಲ ಬಾಂಬ್‌, ಗೆರಿಲ್ಲಾ ಯುದ್ಧ ತಂತ್ರ ಬಳಸುತ್ತಿದ್ದರು. ನೋಡನೋಡುತ್ತಲೇ ರಾಕೆಟ್‌ ಉಡಾಯಿಸಿ ಉಗ್ರರು ಸಿಆರ್‌ಪಿಎಫ್ ಜವಾನರನ್ನು ಬಲಿ ತೆಗೆದುಕೊಂಡರು. ಗಾಯಾಳು ಯೋಧರನ್ನು ಮೆಡಿಕಲ್‌ ಕ್ಯಾಂಪ್‌ಗೆ ಸಾಗಿಸಲು ಜೀವ ಲೆಕ್ಕಿಸದೆ ಪದ್ಮನಾಭ ಅವರ ತಂಡ ಕೆಲಸ ಮಾಡಿತ್ತು. ಸದ್ಯ ನಾ| ಪದ್ಮನಾಭ ಅವರು ಅಮೃತಸರದ ಚಿಕಿತ್ಸಾ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ದೇಶ ಕಾಯುವ ವೀರ ಸೈನಿಕರ ಜೀವ ಉಳಿಸುವ ಕಾಯಕ ಮಾಡುತ್ತಿರುವುದು ಬಹುದೊಡ್ಡ ಪುಣ್ಯ ಕಾರ್ಯ. ಸೇನೆಯಲ್ಲಿ ಸೇವೆ ಸಲ್ಲಿಸುವುದು ಹೆಮ್ಮಯ ವಿಚಾರ. ಕೆಲವೊಮ್ಮೆ ಕುಟುಂಬದ ನೆನಪಾದರೂ ದೇಶ ಸೇವೆಯ ಮುಂದೆ ಚಿಂತೆಗಳು ಮರೆತು ಹೋಗುತ್ತವೆ.
-ನಾ| ಪದ್ಮನಾಭ 

ಸೇನೆಗೆ ಸೇರುವ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಅತೀವ ಪರಿಶ್ರಮದಿಂದ ಸೇನೆಗೆ ಸೇರಿದ್ದಾರೆ.
ಪದ್ಮನಾಭ ಅವರು ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ. ಅವರ ದೇಶ ಸೇವೆಗೆ ನಮ್ಮ ಸಲಾಂ.
 – ಗಂಗಾಧರ ಬಂಜನ್‌, ಸ್ನೇಹಿತ, ಕುಳಾಯಿ

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next