ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಿಲ್ಲವರ್ ಪ್ರದೇಶದಲ್ಲಿ ಸೋಮವಾರ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೇನೆಯ ಶೋಧ ಕಾರ್ಯಾಚರಣೆಯ ನಂತರ ಭಯೋತ್ಪಾದಕರು ಮತ್ತು ಸೇನಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಭಯೋತ್ಪಾದಕರು ಬೆಟ್ಟದ ಮೇಲಿನಿಂದ ಸೇನಾ ವಾಹನದತ್ತ ಗುಂಡು ಹಾರಿಸಿದ್ದಾರೆ. ಅವರು ಸೇನಾ ವಾಹನದ ಮೇಲೆ ಗ್ರೆನೇಡ್ ಗಳನ್ನು ಎಸೆದರು ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ವಾರಗಳಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿದೆ. ಜೂನ್ 11 ಮತ್ತು 12ರಂದು ಜಮ್ಮು ಕಾಶ್ಮೀರದ ದೊಡಾ ಜಿಲ್ಲೆಯಲ್ಲಿ ದಾಳಿ ನಡೆದಿತ್ತು. ಜೂನ್ 11ರಂದು ಚಟ್ಟಾರ್ಗಲ್ಲಾ ಚೆಕ್ ಪೋಸ್ಟ್ ಗೆ ಉಗ್ರರು ದಾಳಿ ನಡೆಸಿದ್ದು ಆರು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಜೂನ್ 12ರಂದು ಗಾಂಡೋಹ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದರು.
ಜೂನ್ 26 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದರು. ಜೂನ್ 11 ಮತ್ತು 12 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯ ನಂತರ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜೊತೆಗೆ ಪೊಲೀಸರು ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ನಡುವೆ ಭಯೋತ್ಪಾದಕರನ್ನು ಕೊಲ್ಲಲಾಯಿತು.