ವಾಷಿಂಗ್ಟನ್: ದೇಶವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರೂ, ಸರಕಾರದ ಸಂಪತ್ತು ಅವರಿಗೆ ಸಿಗುವುದಿಲ್ಲ ಎಂದು ಅಫ್ಘಾನಿಸ್ಥಾನ ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷ ಅಜ್ಮಲ್ ಅಹ್ಮದಿ ಹೇಳಿದ್ದಾರೆ. “ದ ಅಫ್ಘಾನಿಸ್ಥಾನ್ ಬ್ಯಾಂಕ್ (ಡಿಎಬಿ) ಸುಮಾರು 9 ಬಿಲಿಯನ್ ಡಾಲರ್ (6.68 ಲಕ್ಷ ಕೋಟಿ ರೂ.) ಮೌಲ್ಯದ ಸಂಪತ್ತನ್ನು ನಿರ್ವಹಿಸುತ್ತಿತ್ತು. ಅದರಲ್ಲಿ 7 ಬಿಲಿಯನ್ ಡಾಲರ್ (5.19 ಲಕ್ಷ ಕೋಟಿ ರೂ.) ಚಿನ್ನ, ಬಾಂಡ್‌ಗಳು, ನಗದು ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನಲ್ಲಿ ಹೂಡಿಕೆ ರೂಪದಲ್ಲಿದೆ. ಬಹುತೇಕ ಎಲ್ಲ ಸಂಪತ್ತು ಹೊರ ದೇಶಗಳಲ್ಲಿಯೇ ಇದೆ. ದೇಶದಲ್ಲಿ ಭದ್ರತಾ ಸಮಸ್ಯೆ ಉಂಟಾದಾಗಿನಿಂದ ದೇಶಕ್ಕೆ ಹಣವೂ ಬಂದಿಲ್ಲ. ಕೇವಲ ಶೇ. 0.2ರಷ್ಟು ಸಂಪತ್ತು ಮಾತ್ರವೇ ದೇಶದಲ್ಲಿದೆ. ಹಾಗಾಗಿ ತಾಲಿಬಾನಿಗಳಿಗೆ ದೇಶದ ಸಂಪತ್ತು ಸಿಗುವುದಿಲ್ಲ ಎಂದಿದ್ದಾರೆ.
ಇದೇ ವೇಳೆ, ಅಮೆರಿಕದಲ್ಲಿ ಸುಮಾರು 9.5 ಬಿಲಿಯನ್ ಡಾಲರ್ ಮೌಲ್ಯದ ಅಫ್ಘಾನ್ ಸಂಪತ್ತಿದೆ. ಇಲ್ಲಿನ ಅಫ್ಘಾನ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ಯಾವುದೇ ಕಾರಣಕ್ಕೂ ಸಂಪತ್ತು ತಾಲಿಬಾನಿಗಳ ಕೈಗೆ ಸೇರದಂತೆ ನೋಡಿಕೊಳ್ಳಲಾಗುವುದು ಎಂದು ಅಮೆರಿಕ ಹೇಳಿದೆ.
ಅಂಗೈಯಲ್ಲಿ ಜೀವ ಹಿಡಿದು ಹೊರಟರು! :
ತಾಲಿಬಾನಿಗಳು ಇಡೀ ಅಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಇನ್ನೂ 2-3 ದಿನ ಬಾಕಿ ಇರುವಾಗಲೇ ಭಾರತ ಸರಕಾರ, ಆ ದೇಶದಲ್ಲಿರುವ ತನ್ನ ರಾಯಭಾರಿ ಕಚೇರಿಯ ಸಿಬಂದಿಯನ್ನು, ಭಾರತೀಯರನ್ನು ಕರೆಯಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಸುಗಮ ಸಾರಿಗೆ ಅವಕಾಶ ಕಲ್ಪಿಸುವಂತೆ ರಾಯಭಾರಿ ಕಚೇರಿಯೂ ತಾಲಿಬಾನಿ ನಾಯಕರಿಗೆ ಮನವಿ ಮಾಡಿತ್ತು. ಆದರೂ, ಅಫ್ಘಾನ್ ನೆಲದಿಂದ ವಿಮಾನದಲ್ಲಿ ಗಗನಕ್ಕೆ ಹಾರುವವರೆಗೆ ಭಾರತೀಯರು ಅಂಗೈಯ್ಯಲ್ಲಿ ಜೀವ ಹಿಡಿದುಕೊಂಡೇ ಇದ್ದರು!
ರಾಯಭಾರ ಕಚೇರಿ ತೆರವು ಮಾಡುವ ದಿನದಂದು, ಕಚೇರಿಯ ಅವರಣದಲ್ಲಿ ಸುಮಾರು 150 ಭಾರತೀಯ ರಾಜತಂತ್ರಜ್ಞರು, ಹಲವಾರು ನಾಗರಿಕರು, ಶೀಘ್ರವೇ ಹೊರಡುವ ತರಾತುರಿಯಲ್ಲಿದ್ದರು. ಆದರೆ ಕಾಂಪೌಂಡಿನ ಗೇಟಿನಲ್ಲಿ ಬಂದೂಕು ಕೈಯ್ಯಲ್ಲಿ ಹಿಡಿದು ಕಾಯುತ್ತಿದ್ದ ತಾಲಿಬಾನಿಗಳ ಗುಂಪನ್ನು ನೋಡಿದಾಗಲೆಲ್ಲ ಜೀವ ನಡುಗುತ್ತಿತ್ತು.
ಇದೇ ಆತಂಕದಲ್ಲಿಯೇ ಅಧಿಕಾರಿಗಳು, ಭಾರತೀಯರು, ರಾಯಭಾರಿ ಕಚೇರಿಯ ಕಾಂಪೌಂಡಿನಲ್ಲಿ ಸಾಲಾಗಿ ನಿಂತಿದ್ದ ವಾಹನಗಳಲ್ಲಿ ಕುಳಿತು, ಪಯಣ ಶುರು ಮಾಡಿದರು. ರಾಯಭಾರಿ ಕಚೇರಿಯ ಗೇಟುಗಳು ತೆರೆಯಲ್ಪಟ್ಟು, ಕಾರುಗಳು ರಸ್ತೆಗಿಳಿದವು.
ಯಾರಿಂದ ಗುಂಡಿನ ದಾಳಿಯ ಭೀತಿ ಆವರಿಸಿತ್ತೋ ಅವರೇ (ತಾಲಿಬಾನಿಗಳು), ಸಣ್ಣನೆಯ ನಸುನಗು ನಕ್ಕು, ಟಾಟಾ ಮಾಡಿ, ವಾಹನಗಳಿಗೆ ರಸ್ತೆ ಬಿಟ್ಟುಕೊಟ್ಟರು! ವಾಹನಗಳಲ್ಲಿದ್ದವರಿಗೆ ಅಚ್ಚರಿಯೋ ಅಚ್ಚರಿ. ದಾರಿಯ ಇಕ್ಕೆಲಗಳಲ್ಲಿಯೂ ಹಾಜರಿದ್ದ ಆ ಉಗ್ರರ ಗುಂಪುನಲ್ಲಿ ಕೆಲವರು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ತೋರಿಸಿದರು. ಸದ್ಯ ಅವರ ಬಂದೂಕುಗಳು ಆ ಹೊತ್ತಿಗೆ ವಿಶ್ರಾಂತಿ ಪಡೆಯುತ್ತಿದ್ದವು. ವಾಹನಗಳಲ್ಲಿ ಹೋಗುತ್ತಿದ್ದವರಿಗೆ “ಬದುಕಿದೆಯಾ ಬಡಜೀವವೇ’ ಎಂಬ ಭಾವ. ಇದು ನಿಜಕ್ಕೂ ಗಂಡಾಂತರವೊಂದನ್ನು ಗೆದ್ದುಬಂದ ಹಾಗೆ ಎನ್ನುತ್ತಾರೆ ಭಾರತಕ್ಕೆ ಬಂದಿಳಿದಿರುವ ಅಧಿಕಾರಿಗಳು.