Advertisement

ಮಿಜಾರು ಮೋಹನ ಶೆಟ್ಟಿಗಾರರಿಗೆ ಯಕ್ಷಸಂಗಮ ಪ್ರಶಸ್ತಿ

06:58 PM Jul 25, 2019 | Team Udayavani |

ಮೂಡಬಿದಿರೆಯ ಯಕ್ಷಸಂಗಮದ 20ನೇ ವರ್ಷದ ಯಕ್ಷಸಂಗಮ ಪ್ರಶಸ್ತಿಗೆ ಕಟೀಲು ಮೇಳದ ಪ್ರಸಿದ್ಧ ಮದ್ದಲೆವಾದಕ ಮೋಹನ್‌ ಶೆಟ್ಟಿಗಾರರು ಆಯ್ಕೆಯಾಗಿದ್ದಾರೆ. ಅಜ್ಜ ಬಾಬು ಶೆಟ್ಟಿಗಾರರು ಹಿಮ್ಮೇಳ ವಾದಕರಾಗಿದ್ದ ಕಾರಣ ಶೆಟ್ಟಿಗಾರರಿಗೆ ರಕ್ತದಲ್ಲೇ ಯಕ್ಷಗಾನದ ನಂಟು ಬೆಳೆದಿತ್ತು.15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್‌ ರವರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತುಕೊಂಡು ಪರಿಣತರಾದರು.

Advertisement

ಕುಲಕಸುಬಾದ ಕೈಮಗ್ಗದಲ್ಲೇ ಮುಂದುವರಿದರೂ ಹಲವಾರು ಮೇಳಗಳಿಗೆ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದರು.1982ರಲ್ಲಿ ಕಟೀಲಿನ 3ನೇ ಮೇಳ ಆರಂಭವಾದಾಗ ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರ ಆಹ್ವಾನದ ಮೇರೆಗೆ ಮೂರನೇ ಮೇಳ ಸೇರಿದರು . ಆಗ ಕಟೀಲು ಮೂರನೇ ಮೇಳದಲ್ಲಿ ಭಾಗವತರಾಗಿದ್ದವರು ರಂಗ ನಾಯಕ ಎನಿಸಿದ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಮುಖ್ಯ ಮದ್ದಲೆಗಾರರಾಗಿದ್ದವರು ಗುರುಗಳಾದ ನೆಡ್ಲೆ ನರಸಿಂಹ ಭಟ್ಟರು . ಇವರಿಬ್ಬರ ಸಾಂಗತ್ಯದಲ್ಲಿ ಶೆಟ್ಟಿಗಾರರಿಗೆ ಅಪೂರ್ವವಾದ ಅನುಭವ ದೊರಕಿತು . ಮೇಳದಲ್ಲಿದ್ದ ಕಲಾವಿದರೂ ದಿಗ್ಗಜರೇ ಆಗಿದ್ದ ಕಾರಣ ಶೆಟ್ಟಿಗಾರು ಹಿಮ್ಮೇಳ ವಾದನದಲ್ಲಿ ನೈಪುಣ್ಯತೆ ಗಳಿಸಿದರು. ಚೌಕಿಪೂಜೆಗೆ ಮದ್ದಲೆ ಹಿಡಿದರೆ , ಮುಂಜಾವು ಮಂಗಲಕ್ಕೇ ಕೆಳಗಿಡುವುದು . ಈ ಸಂದರ್ಭದಲ್ಲಿ ಶೆಟ್ಟಿಗಾರರ ವೃತ್ತಿ ಜೀವನಕ್ಕೊಂದು ದೊಡ್ಡ ತಿರುವು ದೊರಕಿತು . ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರು ತಮ್ಮದೇ ಯಾಜಮಾನ್ಯದ ಕರ್ಣಾಟಕ ಮೇಳಕ್ಕೆ ಹೋಗಲು ಸೂಚಿಸಿದರು . ಆ ಕಾಲದಲ್ಲಿ ಕರ್ಣಾಟಕ ಮೇಳವು ಯಕ್ಷದಿಗ್ಗಜರಿಂದ ಕೂಡಿದ್ದ ಗಜಮೇಳವಾಗಿತ್ತು . ಪ್ರಧಾನ ಭಾಗವತರಾಗಿದ್ದವರು ಸಂಗೀತ ವಿದ್ವಾನ್‌ ದಾಮೋದರ ಮಂಡೆಚ್ಚರು. ಮಂಡೆಚ್ಚರ ಸಂಗೀತ ಶೈಲಿಯ ಭಾಗವತಿಕೆಗೆ , ಶೆಟ್ಟಿಗಾರರ ಮದ್ದಲೆ – ಚೆಂಡೆಗಳ ವಾದನ ಅಪಾರ ಪ್ರಸಿದ್ಧಿ ಪಡೆಯಿತು .ಆಗ ಮೇಳದಲ್ಲಿ ಮದ್ದಲೆಗಾರರಾಗಿದ್ದ ಕಾಂಚನ ನಾರಾಯಣ ಭಟ್ಟರೂ ಶೆಟ್ಟಿಗಾರರನ್ನು ತಿದ್ದಿ ತೀಡಿದರು . ಮಂಡೆಚ್ಚರು ಅಸ್ತಂಗತರಾದ ನಂತರ ದಿನೇಶ ಅಮ್ಮಣ್ಣಾಯ , ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂತಹ ಭಾಗವತ ದಿಗ್ಗಜರಿಗೂ ಮದ್ದಲೆವಾದಕರಾಗಿ ಮೆರೆದರು . 1990ರಲ್ಲಿ ಮೇಳ ಬಿಟ್ಟು ಮನೆಯಲ್ಲೇ ಕೈಮಗ್ಗದತ್ತ ಹೊರಳಿದರು. ಆದರೂ 1992ರಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಒತ್ತಾಯಕ್ಕೆ ಪುನಃ ಕಟೀಲು 1ನೇ ಮೇಳ ಸೇರಿದರು . ನಂತರ ಕಟೀಲು 4ನೇ ಮೇಳ ಆರಂಭವಾದಾಗ ಅದಕ್ಕೆ ವರ್ಗಾಯಿಸಲ್ಪಟ್ಟಾಗ ಸುಪ್ರಸಿದ್ಧ ಭಾಗವತರಾದ ದಿ.ಕುಬಣೂರು ಶ್ರೀಧರ ರಾಯರ ಒಡನಾಟದಲ್ಲಿ ಮಿಂಚಿದರು . ಪ್ರಸ್ತುತ ಕಟೀಲು 4ನೇ ಮೇಳದಲ್ಲಿ ವೃತ್ತಿ ನಿರತರಾಗಿರುವ ಮೋಹನ ಶೆಟ್ಟಿಗಾರರು 37 ವರ್ಷಗಳ ತಿರುಗಾಟದ ಅನುಭವ ಹೊಂದಿದ್ದಾರೆ.

ಹಿಮ್ಮೇಳದ ವಾದನದ ಘಾತ ಪೆಟ್ಟು , ಹದಪೆಟ್ಟು , ಮೆದು ನುಡಿತ – ಇವೆಲ್ಲವನ್ನೂ ಸಂದಭೋìಚಿತವಾಗಿ ಬಳಸುವ ಶೆಟ್ಟಿಗಾರರ ವಾದನದಲ್ಲಿ ಯಕ್ಷಗಾನೀಯವಾದ ಇಂಪಿದೆ , ಕಂಪಿದೆ . ರಾಕ್ಷಸ ಪಾತ್ರಗಳ ತೆರೆಪೊರಪ್ಪಾಟು , ಹನುಮಂತನ ಪ್ರವೇಶ , ಕಿರಾತನ ಪ್ರವೇಶ ,ಶ್ರೀರಾಮನ – ಶ್ರೀಕೃಷ್ಣನ ಒಡ್ಡೋಲಗ ಮುಂತಾದ ಯಕ್ಷಗಾನದ ಅಪೂರ್ವ ಸನ್ನಿವೇಶಗಳ ಹಿಮ್ಮೇಳ ವಾದನ ಅರಿತವರಲ್ಲಿ ಶೆಟ್ಟಿಗಾರರೂ ಓರ್ವರು.

ಎಂ.ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next