ಮಂಗಳೂರು: ರಾಷ್ಟ್ರೀಯ ಸುರಕ್ಷಾ ದಿನದ ಭಾಗವಾಗಿ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈರ್ ಆ್ಯಂಡ್ ಸೇಫ್ಟಿ ಎಂಜಿನಿಯರಿಂಗ್, ಎಂಐಎಫ್ ಎಸ್‌ಇ ಮತ್ತು ಮಿನರ್ವ ಕಾಲೇಜು ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಸುರಕ್ಷಾ ದಿನವನ್ನು ಮಂಗಳೂರು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಡಿಎಫ್‌ಒ ಜುಲ್ಫಿಕರ್ ನವಾಜ್ ಉದ್ಘಾಟಿಸಿದರು.
ಈ ವೇಳೆ ಅವರು ಮಾತನಾಡಿ, ಸುರಕ್ಷೆ ಕೇವಲ ಕಂಪೆನಿಗಳು, ಕಾರ್ಖಾನೆಗಳು ಮತ್ತು ವಿದ್ಯಾಸಂಸ್ಥೆಗಳಿಗೆ ಮಾತ್ರ ಸೀಮಿತಗೊಳ್ಳಬಾರದು. ಸುರಕ್ಷೆಯ ಮೊದಲ ಹೆಜ್ಜೆ ನಮ್ಮ-ನಿಮ್ಮೆಲ್ಲರ ಮನೆಯಿಂದಲೇ ಆರಂಭಗೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಮುಂಬರುವ ಯುವಕರು ಇಡೀ ದೇಶಕ್ಕೆ ಸುರಕ್ಷಾ ವಿಚಾರದಲ್ಲಿ ಬೆನ್ನೆಲುಬಾಗಿ ನಿಂತು ದೇಶದ ಏಳಿಗೆಗೆ ಕಾರಣವಾಗಬಹುದು ಎಂದರು.
ಎಂಐಎಫ್‌ಎಸ್‌ಇ ಮತ್ತು ಮಿನರ್ವ ಕಾಲೇಜಿನ ಅಧ್ಯಕ್ಷ ವಿನೋದ್ ಜಾನ್ ಮಾತನಾಡಿ, 15 ವರ್ಷಗಳಿಂದ ರಾಷ್ಟ್ರೀಯ ಸುರಕ್ಷಾ ದಿನವನ್ನು ಎಂಐಎಫ್ ಎಸ್‌ಇ ಸಂಸ್ಥೆಯ ಮಂಗಳೂರು ಮಾತ್ರವಲ್ಲದೆ ಬೆಂಗಳೂರು, ಮೈಸೂರು, ತುಮಕೂರು, ಹೊಸಪೇಟೆ, ಹುಬ್ಬಳ್ಳಿ ಮತ್ತು ಉಡುಪಿ ಶಾಖೆಗಳಲ್ಲಿ ಆಚರಿಸುಸುತ್ತಿದ್ದೇವೆ ಎಂದರು.
ಸಂಸ್ಥೆಯ ಬಗ್ಗೆ ವಿವರಿಸಿದ ಅವರು 2007ರಲ್ಲಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಫೈರ್ ಆ್ಯಂಡ್ ಸೇಫ್ಟಿ ಕೋರ್ಸ್‌ಗಳನ್ನು ಆರಂಭಿಸಿದ ಹೆಗ್ಗಳಿಕೆ ಎಂಐಎಫ್ ಎಸ್‌ಇಯದ್ದು. ದೇಶ-ವಿದೇಶಗಳೆಲ್ಲೆಡೆ ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಕಲಿತು ಉದ್ಯೋಗ ಪಡೆದಿದ್ದಾರೆ. 2024-25ನೇ ಸಾಲಿನಲ್ಲಿ ಸೇಫ್ಟಿ ಕ್ಷೇತ್ರದಲ್ಲಿ ಡಿಗ್ರಿ ಬಿಬಿಎ ಇನ್ ಆಕ್ಯುಪೇಷನಲ್ ಸೇಫ್ಟಿ ಮತ್ತು ಎಂಬಿಎಇನ್‌ಎಚ್‌ಎಸ್‌ಇ ಸಂಸ್ಥೆಯಲ್ಲಿ ಆರಂಭಗೊಂಡಿದೆ.
ಉದ್ಯೋಗ ರಂಗದ ಕೋರ್ಸ್ ಗಳಾದ ಬಿಕಾಂ ಬಿಸಿನೆಸ್ ಡಾಟ ಎನಾಲಿಟಿಕ್ಸ್, ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಬಿಸಿನೆಸ್ ಎಕೌಂಟಿಂಗ್ ಆ್ಯಂಡ್ ಟ್ಯಾಕ್ಸೇಶನ್, ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್, ಹೊಟೇಲ್ ಮ್ಯಾನೇಜ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ವೆಬ್ ಡಿಸೈನ್ ಮತ್ತು ಗ್ರಾಫಿಕ್ಸ್ ಡಿಸೈನ್‌ಗಳಂತಹ ಪ್ರಪಂಚದೆಲ್ಲೆಡೆ ಬೇಡಿಕೆಯಿರುವ ವಿದ್ಯಾರ್ಥಿಗಳಿಗೆ ಕಲಿತ ತಕ್ಷಣ ಉದ್ಯೋಗ ಲಭಿಸುವಂತಹ ವಿವಿಧ ಕೋರ್ಸ್ ಗಳನ್ನು ಸಂಸ್ಥೆಯ ಕ್ಯಾಂಪಸ್ ನಲ್ಲಿ ವಿಶೇಷ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಪ್ರಾರಂಭಗೊಂಡಿದೆ ಎಂದರು.
ಜಾಥಾಕ್ಕೆ ಡಿಎಫ್‌ಒ ಅವರು ಚಾಲನೆ ನೀಡಿದರು. 250 ವಿದ್ಯಾರ್ಥಿಗಳು ಪಾಲ್ಗೊಂಡರು. ರ್ಯಾಲಿ ಸುಮಾರು 4 ಕಿ.ಮೀ. ನಡೆಯಿತು. ಹಿರಿಯ ಅಧ್ಯಾಪಕ ಶೆರಿಫ್, ಗೋವಿಯಸ್, ನಿಕ್ಷಿತಾ, ದೀಪ್ತಿ, ಹರ್ಷಿತಾ ಮೊದಲಾದವರಿದ್ದರು. ಪ್ರಾಂಶುಪಾಲ ಯಶವಂತ್ ಗೋಪಾಲ್ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಮನೋಜ್ ವಂದಿಸಿದರು.