ನವದೆಹಲಿ: ನನ್ನನ್ನು ಪದಚ್ಯುತಗೊಳಿಸಲು ರಾತ್ರೋರಾತ್ರಿ ಪಿತೂರಿ ನಡೆಸಿದ್ದೀರಿ ಎಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಂಗಳವಾರ(ನವೆಂಬರ್ 02) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿರುವ ಏಳು ಪುಟಗಳ ಭಾವನಾತ್ಮಕ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪದೇ ಪದೇ ಹೇಳ್ತೇನೆ ‘ದಲಿತ’ ಅನ್ನುವ ಪದ ಬಳಸಿಲ್ಲ : ಸಿದ್ದರಾಮಯ್ಯ
“ತನ್ನನ್ನು ಪಕ್ಷದಿಂದ ಹೊರಹಾಕಲು ಸಂಚು ರೂಪಿಸಿದ್ದಕ್ಕಾಗಿ ಅಮರಿಂದರ್ ಸಿಂಗ್ ಏಳು ಪುಟಗಳ ಪತ್ರದಲ್ಲಿ ಕಟುವಾಗಿ ಟೀಕಿಸಿದ್ದಾರೆ.” ಪತ್ರದಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಹಾಗೂ ಪಕ್ಷದ ಹಿರಿಯ ಮುಖಂಡ ಹರೀಶ್ ರಾವತ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಂಗ್, ತಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಧನೆಯನ್ನು ಎತ್ತಿ ತೋರಿಸಿರುವುದಾಗಿ ವರದಿ ವಿವರಿಸಿದೆ.
ನನ್ನ 52 ವರ್ಷಗಳ ಸಾರ್ವಜನಿಕ ಜೀವನದ ಬಗ್ಗೆ ಸೋನಿಯಾ ಗಾಂಧಿಗೆ ಚೆನ್ನಾಗಿ ತಿಳಿದಿತ್ತು. ಅಷ್ಟೇ ಅಲ್ಲ ವೈಯಕ್ತಿಕವಾಗಿಯೂ ಅವರಿಗೆ ನನ್ನ ಬಗ್ಗೆ ತಿಳಿಸಿದೆ. ಆದರೂ ಅವರು ನನ್ನ ಅರ್ಥ ಮಾಡಿಕೊಳ್ಳಲಿಲ್ಲ. ಕೊನೆಗೂ ನನ್ನ ಮೇಲೆ ಒತ್ತಡ ಹೇರುವ ಮೂಲಕ ನಾನು ನಿವೃತ್ತಿಗೊಳ್ಳುವಂತೆ ಮಾಡಿದ್ದೀರಿ. ನಾನು ಪಂಜಾಬ್ ಗಾಗಿ ಸಾಕಷ್ಟು ಕೊಡುಗೆ ನೀಡಿದ್ದೇನೆ. ನಾನೊಬ್ಬ ಸೈನಿಕ, ಹಾಗಾಗಿ ಹೆದರಿ ಓಡುವ ಜಾಯಮಾನ ನನ್ನದಲ್ಲ ಎಂದು ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
ಸಿಧುಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥನ ಹುದ್ದೆ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಮರಿಂದರ್ ಸಿಂಗ್, ಪಂಜಾಬ್ ನ ಎಲ್ಲಾ ಸಂಸದರ, ಶಾಸಕರ ಹಿತಾಸಕ್ತಿಯನ್ನು ಮೂಲೆಗುಂಪು ಮಾಡಿ, ಪಾಕಿಸ್ತಾನದ ಬಗ್ಗೆ ಅತಿಯಾದ ಒಲವು ಹೊಂದಿರುವ ಸಿಧುವನ್ನು ನೀವು ಆಯ್ಕೆ ಮಾಡುವ ಮೂಲಕ ಜನತೆಗೆ ಮೋಸ ಮಾಡಿದ್ದೀರಿ ಎಂದು ಸಿಂಗ್ ಕಿಡಿಕಾರಿದ್ದಾರೆ ಎಂದು ವರದಿ ಹೇಳಿದೆ.